Advertisement

ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರ ರಕ್ಷಣೆಗೆ ಬದ್ಧ

05:38 PM Apr 12, 2020 | Naveen |

ತಾಳಿಕೋಟೆ: ಕೊರೊನಾ ಹೆಮ್ಮಾರಿ ತಡೆಗಟ್ಟಲು ನೇರವಾಗಿ ಸವಾಲು ಎದುರಿಸುವವರು ವೈದ್ಯರಾಗಿದ್ದಾರೆ. ಅವರಿಗೆ ರಕ್ಷಾ ಕವಚ ಒದಗಿಸುವಂತಹ ಕಾರ್ಯ ಮಾಡಲಿದ್ದೇನೆಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್‌ .ಪಾಟೀಲ(ನಡಹಳ್ಳಿ) ಹೇಳಿದರು.

Advertisement

ಶುಕ್ರವಾರ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ವೈದ್ಯರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಎಲ್ಲ ಅಧಿ ಕಾರಿಗಳು ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಲಹೆ ನೀಡಿದ್ದೇನೆ. ವಾಹನಗಳು ರಸ್ತೆಗಿಳಿದರೆ ಸಿಜ್‌ ಮಾಡಲು ಸೂಚಿಸಿದ್ದೇನೆ. ತಾಳಿಕೋಟೆ ಮತ್ತು ಮುದ್ದೇಬಿಹಾಳದ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸೊಲೇಷನ್‌ ವಾರ್ಡ್‌ ಸಹ ನಿರ್ಮಿಸಲಾಗಿದೆ ಎಂದು ತಿಳಿಸಿದರು. ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರ ರಕ್ಷಣೆಗೆ ರಕ್ಷಣಾ ಕವಚ ಅವಶ್ಯವಾಗಿದೆ. ಈ ಕಾರ್ಯ ಸರ್ಕಾರವು ಮಾಡುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ವೈಯಕ್ತಿಕವಾಗಿ ರಕ್ಷಾ ಕವಚಗಳ ಜತೆಗೆ 2500 ಎನ್‌-95 ಮಾಸ್ಕ್ಗಳನ್ನು ಖರೀದಿಸಲು ಮುಂದಾಗಿದ್ದು, ಶೀಘ್ರವೇ ವಿತರಣೆ ಮಾಡುವೆ ಎಂದರು.

ಡಾ| ಬಿ.ಎಸ್‌. ಸಾಸನೂರ ಮಾತನಾಡಿ, ಸಾಮಾನ್ಯ ರೋಗಿಗೂ ಚಿಕಿತ್ಸೆ ನೀಡಬೇಕಾದರೆ ಪಟ್ಟಣದ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾಗದ ಅಭಾವ ಹೆಚ್ಚಿಗೆ ಕಾಡುತ್ತಿದೆ. ಇದರಿಂದ ಎಲ್ಲ ವೈದ್ಯರು ಒಪಿಡಿ ಬಂದ್‌ ಮಾಡಿದ್ದೇವೆ. ಸ್ಥಳೀಯ ವೈದ್ಯರು ಉಚಿತವಾಗಿ ಸೇವೆ ಸಲ್ಲಿಸಲು ಸಿದ್ಧರಿದ್ದು, ಅವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರಿ ಆಸ್ಪತ್ರೆಯಲ್ಲಿಯೇ ವ್ಯವಸ್ಥೆ ಮಾಡಿಕೊಟ್ಟರೆ ಚಿಕಿತ್ಸೆ ನೀಡುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಿರಿಯ ವೈದ್ಯ ಡಾ| ಎಸ್‌.ವಿ. ಕಾರ್ಚಿ ಮಾತನಾಡಿ, ಪಟ್ಟಣದಲ್ಲಿ 60 ವಯಸ್ಸಿನ ಮೇಲ್ಪಟ್ಟ ವೈದ್ಯರಿದ್ದೇವೆ. ಅಂಥವರಿಗೆ ವಿನಾಯ್ತಿ ನೀಡಬೇಕು. ಯುವ ವೈದ್ಯರಿಗೆ ಮಾರ್ಗದರ್ಶನ ನೀಡುವ ಕಾರ್ಯ ಮಾಡುತ್ತೇವೆ. ಆರೋಗ್ಯ ಇಲಾಖೆ ಸಿಬ್ಬಂದಿಗಳ ಜತೆ ಪ್ರತಿ ವಾರ್ಡ್‌ಗಳಲ್ಲಿ ಕೊರೊನಾ ವೈರಸ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸಕ್ಕೆ ಸಿದ್ಧರಿದ್ದೇವೆ ಎಂದು ಹೇಳಿದರು.

ಡಾ| ಅಗರವಾಲಾ ಮಾತನಾಡಿ, ಕೊರೊನಾ ಕೇವಲ 14 ದಿನಗಳಲ್ಲಿ ಕಾಣಿಸಿಕೊಳ್ಳುವುದು ಎಂಬುದು ತಪ್ಪು ಕಲ್ಪನೆ. ಇನ್ನೂ ಹೆಚ್ಚಿನ ಸಮಯ ಅದರ ಲಕ್ಷಣ ಕಾಣಿಸಿಕೊಳ್ಳಬಹುದು. ಮನುಷ್ಯನಲ್ಲಿರುವ ಹೇಮೋನಿಟಿ ಶಕ್ತಿ ಮೇಲೆ ಅವಲಂಬನೆಯಾಗಿರುತ್ತದೆ. ಸ್ಯಾನಿಟೈಸರ್‌ ಬಳಕೆಗಿಂತ ಸೋಪು ಬಳಸುವುದು ಒಳ್ಳೆಯದು ಎಂದರು. ಚಿಕ್ಕಮಕ್ಕಳ ತಜ್ಞ ಡಾ| ಆನಂದ ಭಟ್‌ ಮಾತನಾಡಿ, ಮಕ್ಕಳಲ್ಲಿ ಸಾಮಾನ್ಯ ಜ್ವರ, ಇನ್ನಿತರ ಅನಾರೋಗ್ಯಕ್ಕೆ ಅವಶ್ಯವಿರುವ ಔಷಧ ಗಳನ್ನು ಹೆಚ್ಚಿಗೆ ತೆಗೆದುಕೊಂಡು ಹೋಗಲು ಈಗಾಗಲೇ ಸೂಚಿಸಿದ್ದೇನೆ ಎಂದು ಹೇಳಿದರು.

Advertisement

ಡಾ| ಎ.ಎ. ನಾಲಬಂದ, ಡಾ| ಮೋಮೀನ್‌, ಡಾ| ಎಲ್‌.ಎನ್‌. ಶೆಟ್ಟಿ ತಮ್ಮ ಅಭಿಪ್ರಾಯ ಹೇಳಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ| ಸತೀಶ ತಿವಾರಿ ಮಾತನಾಡಿ, ವಿದೇಶದಿಂದ ಆಗಮಿಸಿದ್ದ ತಾಲೂಕಿನ 48 ಜನರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಈ ವರೆಗೆ ತಾಲೂಕಿನಲ್ಲಿ ಒಟ್ಟು 6700 ಜನರಿಗೆ ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಶಾಸಕ ಎ.ಎಸ್‌.ಪಾಟೀಲ (ನಡಹಳ್ಳಿ) ಮಾತನಾಡಿ, ವೈದ್ಯರಿಗೆ ರಕ್ಷಾ ಕವಚ ಒದಗಿಸುವುದರೊಂದಿಗೆ ಅವರು ನೀಡಿದ
ಸಲಹೆ ಸ್ವಿಕರಿಸಿದ್ದೇವೆ. ವೈದ್ಯರೆಲ್ಲರೂ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿಕೊಳ್ಳಿ. ಅದರಲ್ಲಿ ತಾಲೂಕು ಆರೋಗ್ಯಅಧಿಕಾರಿ ಹಾಗೂ ನಾನು ಇರುತ್ತೇನೆ. ನಿಮ್ಮ ಸಮಸ್ಯೆ ಹಾಗೂ ಸಲಹೆಗಳೇನಾದರೂ ಇದ್ದಲ್ಲಿ ಆ ಗ್ರೂಫ್‌ನಲ್ಲಿ ಹಾಕಿದರೆ ಕೂಡಲೇ ಗಮನಿಸಿ ಕ್ರೀಯಾತ್ಮಕವಾಗಿ ಜಾರಿಗೆ ತರಲು ಪ್ರಯತ್ನಿಸುವೆ ಎಂದರು.

ಕೆಪಿಸಿಸಿ ಸದಸ್ಯ ಬಿ.ಎಸ್‌.ಪಾಟೀಲ(ಯಾಳಗಿ, ತಹಶೀಲ್ದಾರ್‌ ಅನೀಲಕುಮಾರ ಢವಳಗಿ, ಪಿಎಸ್‌ಐ ವಸಂತ ಬಂಡಗಾರ, ಮುಖಂಡರಾದ ಜಿ.ಎಸ್‌. ಕಶೆಟ್ಟಿ, ಬಿ.ಎನ್‌.ಹಿಪ್ಪರಗಿ, ವೈದ್ಯರಾದ ಡಾ| ನಜೀರ್‌ ಕೊಳ್ಯಾಳ, ಡಾ| ವಿಜಯಕುಮಾರ ಅಮಲ್ಯಾಳ, ಡಾ| ಗುರು ಚಿತ್ತರಗಿ, ಡಾ| ಪ್ರಭುಗೌಡ ಬಿರಾದಾರ, ಡಾ| ಗೀರೀಶ ಯಾದವಾಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next