ಅಮೆರಿಕ ಸೇನೆ ಅಫ್ಘಾನಿಸ್ಥಾನದಿಂದ ವಾಪಸ್ ಹೋಗುವ ಸಂದರ್ಭದಲ್ಲಿ ಜಗತ್ತನ್ನೇ ಮೆಚ್ಚಿಸುವ ರೀತಿಯಲ್ಲಿ ಮಾತುಗಳನ್ನಾಡುತ್ತಿದ್ದ ತಾಲಿಬಾನ್ ಮತ್ತು ಹಕ್ಕಾನಿ ಉಗ್ರರು ಈಗ ಎಲ್ಲ ಮರೆತವರಂತೆ ವರ್ತಿಸುತ್ತಿದ್ದಾರೆ. ತಮ್ಮ ಆಂತರಿಕ ವಿಚಾರದಲ್ಲಿ ಬೇರೊಂದು ದೇಶ ತಲೆಹಾಕುವುದಕ್ಕೆ ಬಿಡುವುದಿಲ್ಲವೆಂದೇ ಹೇಳಿಕೊಂಡು ಬಂದಿದ್ದ ಈ ಉಗ್ರರು, ಈಗ ನಿಧಾನಕ್ಕೆ ಪಾಕಿಸ್ಥಾನವನ್ನು ತಮ್ಮೆಲ್ಲ ಚಟುವಟಿಕೆಗಳಲ್ಲಿ ಭಾಗೀದಾರರನ್ನಾಗಿ ಮಾಡುತ್ತಿದ್ದಾರೆ. ಅಫ್ಘಾನ್ ಸರಕಾರ ರಚನೆ ವಿಚಾರದಲ್ಲೂ ತಡವಾಗುತ್ತಿರುವುದಕ್ಕೆ ಇದೇ ಕಾರಣ.
ಈಗಾಗಲೇ ನಿರ್ಧಾರವಾದಂತೆ ತಾಲಿಬಾನ್ ನಾಯಕ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ಅಧ್ಯಕ್ಷನಾಗುವ ಸಾಧ್ಯತೆ ಇದೆ. ಮುಲ್ಲಾ ಬರಾದರ್ ಅಖುಂದ್ ಮತ್ತು ಮುಲ್ಲಾ ಅಬ್ದುಸ್ ಸಲೇಮ್ ಈತನ ಉಪನಾಯಕರಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ವಿಚಿತ್ರವೆಂದರೆ, ಮೊದಲಿನಿಂದಲೂ ದೋಹಾ ಟೀಂನ ಮುಲ್ಲಾ ಬರಾದರ್ ಅಫ್ಘಾನ್‌ನ ಹೊಸ ಅಧ್ಯಕ್ಷನಾಗಲಿದ್ದಾನೆ ಎಂದೇ ಹೇಳಲಾಗುತ್ತಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಯಲ್ಲಿರುವವರನ್ನು ಅಧ್ಯಕ್ಷ ಸ್ಥಾನಕ್ಕೆ ಆರಿಸಲಾಗುತ್ತಿದೆ ಎಂಬ ವರದಿಗಳು ಬಂದಿವೆ.
ಈ ಎಲ್ಲ ಬೆಳವಣಿಗೆಗಳು ಪಾಕಿಸ್ಥಾನದ ಐಎಸ್‌ಐ ಮುಖ್ಯಸ್ಥ ಜ| ಫೈಜ್ ಹಮೀದ್ ಕಾಬೂಲ್‌ಗೆ ತೆರಳಿದ ಬಳಿಕ ಆಗಿವೆ. ಹೀಗಾಗಿ, ದಿಢೀರ್ ಬದಲಾವಣೆಯ ಹಿಂದೆ ಪಾಕಿಸ್ಥಾನದ ಕೈವಾಡವಿದೆ ಎನ್ನುವುದು ಸ್ಪಷ್ಟ. ಸರಕಾರ ರಚನೆ ವಿಚಾರದಲ್ಲಿ ತಾಲಿಬಾನ್ ಮತ್ತು ಹಕ್ಕಾನಿ ನೆಟ್‌ವರ್ಕ್ ನಡುವೆ ಘರ್ಷಣೆಗಳಾಗಿವೆ. ಇದರ ಮಧ್ಯಸ್ಥಿಕೆ ವಹಿಸಿ ಐಎಸ್‌ಐ ಮುಖ್ಯಸ್ಥ ಬಂದಿದ್ದಾನೆ ಎಂದು ಹೇಳಲಾಗಿದ್ದು, ಈತನೇ ಹೊಸ ಸರಕಾರದಲ್ಲಿ ಮುಲ್ಲಾ ಮೊಹಮ್ಮದ್ ಅಖುಂದ್ ಇರಲಿ ಎಂದು ಪ್ರಸ್ತಾವಿಸಿದ್ದಾನೆ.
ಇದರ ನಡುವೆಯೇ ಮಂಗಳವಾರ ಕಾಬೂಲ್ ಸೇರಿದಂತೆ ಆಫ್ಘಾನ್‌ನ ವಿವಿಧೆಡೆ ಪಾಕಿಸ್ಥಾನ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳಾಗಿವೆ. ಪಾಕಿಸ್ಥಾನ ಸಾಯಲಿ ಎಂಬ ಘೋಷಣೆಯೊಂದಿಗೆ ಮಹಿಳೆಯರೇ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡು ಹೋರಾಟ ನಡೆಸಿದ್ದಾರೆ. ಈ ಹೋರಾಟ ಹತ್ತಿಕ್ಕಲು ತಾಲಿಬಾನ್ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಈ ಮಹಿಳೆಯರ ಸಿಟ್ಟಿಗೆ ಪ್ರಮುಖ ಕಾರಣವೇ, ಪಾಕಿಸ್ಥಾನ ಅಫ್ಘಾನ್‌ನ ಆಂತರಿಕ ವಿಚಾರದಲ್ಲಿ ಕೈಯಾಡಿಸುತ್ತಿರುವುದು ಆಗಿದೆ. ಪಂಜ್
ಶೀರ್‌ನಲ್ಲಿ ಪಾಕಿಸ್ಥಾನದ ವಾಯುಪಡೆ ವಿಮಾನಗಳು ದಾಳಿ ನಡೆಸಿ, ತಾಲಿಬಾನ್‌ಗೆ ಸಹಕಾರ ನೀಡಿವೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ.
ಒಂದು ಲೆಕ್ಕಾಚಾರದಲ್ಲಿ ಅಫ್ಘಾನ್ ಜನತೆಯ ಸಿಟ್ಟು ಒಪ್ಪುವಂಥದ್ದೇ. ಇದುವರೆಗೆ ತಾಲಿಬಾನ್ ಉಗ್ರರು ಎಷ್ಟೇ ಹಿಂಸೆ ಕೊಟ್ಟಿದ್ದರೂ ಸಹಿಸಿಕೊಂಡೇ ಬಂದಿದ್ದ ಅವರು, ಪಾಕಿಸ್ಥಾನದ ಕೈವಾಡ ಹೆಚ್ಚಾಗುತ್ತಿದ್ದಂತೆ ಸಿಡಿದೆದ್ದಿದ್ದಾರೆ. ಈ ಮೂಲಕ ಆ ದೇಶ ತಮ್ಮ ನೆಲದಲ್ಲಿ ರಾಜಕೀಯ ಮಾಡಲು ಬಂದರೆ ಸುಮ್ಮನೆ ಇರುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಆದರೂ, ಒಂದು ರೀತಿಯಲ್ಲಿ ನೋಡಿದರೆ ತಾಲಿಬಾನ್ ಉಗ್ರರು ಈಗಾಗಲೇ ಪಾಕಿಸ್ಥಾನದ ಐಎಸ್‌ಐಗೆ ತಲೆಬಾಗಿರುವುದು ಸ್ಪಷ್ಟ. ತನ್ನದೇ ಜನತೆ ಪಾಕಿಸ್ಥಾನದ ವಿರುದ್ಧ ಪ್ರತಿಭಟನೆ ನಡೆಸುವಾಗ, ಅವರ ವಿರುದ್ಧವೇ ಗುಂಡು ಹಾರಿಸಿದ್ದು ಇದರ ಸಂಕೇತ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಲಿಬಾನ್ ನೇತೃತ್ವದ ಸರಕಾರವನ್ನು ನಂಬಬೇಕು ಎಂದಾದರೆ ಪಾಕಿಸ್ಥಾನವನ್ನು ಅಫ್ಘಾನಿಸ್ಥಾನ ದೂರವಿಡಲೇ ಬೇಕು.