ಕಾಬೂಲ್: ಅಫ್ಘಾನಿಸ್ಥಾನ ಸರಕಾರ ಬಂಧಿಸಿದ ಏಳು ಸಾವಿರ ಮಂದಿ ಉಗ್ರರನ್ನು ಬಿಡುಗಡೆ ಮಾಡಿದರೆ, ಮೂರು ತಿಂಗಳ ಕದನ ವಿರಾಮ ಘೋಷಣೆ ಮಾಡುತ್ತೇವೆ. ಹೀಗೆಂದು ತಾಲಿಬಾನ್ ಉಗ್ರ ಸಂಘಟನೆ ಅಫ್ಘಾನಿಸ್ಥಾನ ಸರಕಾರಕ್ಕೆ ಹೊಸ ಆಫರ್ ನೀಡಿದೆ.
ಕತಾರ್ ರಾಜಧಾನಿ ದೋಹಾದಲ್ಲಿ ಉಗ್ರ ಸಂಘಟನೆ ಮತ್ತು ಅಫ್ಘಾನ್ ಸರಕಾರದ ನಡುವೆ ಶುಕ್ರ ವಾರ ಹೊಸತಾಗಿ ಮಾತುಕತೆ ನಡೆಯಲಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಸರಕಾರದ ಸಂಧಾನಕಾರ ನಾಡೆರ್ ನಾಡ್ರೆ “ಇದು ಉಗ್ರ ಸಂಘಟನೆಯ ದೊಡ್ಡ ಬೇಡಿಕೆ’ ಎಂದು ಹೇಳಿದ್ದಾರೆ. ಅದನ್ನು ಸರಕಾರ ಈಡೇರಿಸಲಿದೆಯೋ ಇಲ್ಲವೋ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಜತೆಗೆ ವಿಶ್ವಸಂಸ್ಥೆಯ ನಿಷೇಧಿತ ಪಟ್ಟಿಯಲ್ಲಿರುವ ಸಂಘಟನೆಯ ಹೆಸರನ್ನೂ ತೆಗೆದು ಹಾಕಬೇಕು ಎಂದೂ ಉಗ್ರ ರು ಒತ್ತಾಯಿಸಿದ್ದಾರೆ. ಕಳೆದ ವರ್ಷ ನಡೆದಿದ್ದ ಬೆಳವಣಿಗೆಯಲ್ಲಿ ಸೆರೆಯಲ್ಲಿದ್ದ 5 ಸಾವಿರ ಉಗ್ರರನ್ನು ಬಿಡುಗಡೆ ಮಾಡಲಾಗಿತ್ತು.
ಅವರೆಲ್ಲರೂ ಈಗ ಬಂದೂಕು ಹಿಡಿದು ಕೊಂಡು ಸರಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
ಇದೇ ವೇಳೆ, ಅಫ್ಘಾನಿಸ್ಥಾನದಿಂದ ಅಮೆರಿಕದ ಸೇನಾ ಪಡೆ ವಾಪಸಾದ ಬಳಿಕ ಆ ದೇಶದ ಸುತ್ತಮುತ್ತಲಿನ ಇತರ ರಾಷ್ಟ್ರಗಳಲ್ಲಿ ಆತಂಕದ ಛಾಯೆ ಮೂಡಿದೆ. 2001ರ 9/11ರ ದಾಳಿಯ ಪರಿಸ್ಥಿತಿಗೂ ಈಗಿನ ಸ್ಥಿತಿಗೂ ವ್ಯತ್ಯಾಸವಿದೆ. ಕೇಂದ್ರ ಏಷ್ಯಾದಲ್ಲಿ ಅಮೆರಿಕದ ವಿಶ್ವಸನೀಯ ರಾಷ್ಟ್ರ ಸದ್ಯಕ್ಕೆ ಇಲ್ಲ. ಕೆಲವು ದಿನಗಳ ಹಿಂದೆ, ರಷ್ಯಾ ಸರಕಾರ ಕೂಡ ಕೇಂದ್ರ ಏಷ್ಯಾದಲ್ಲಿ ಅಮೆರಿಕದ ಸೇನಾ ತುಕಡಿ ನೆಲೆಯೂರುವುದಕ್ಕೂ ಆಕ್ಷೇಪ ಮಾಡಿತ್ತು.