Advertisement

ಪೇಶಾವರದಲ್ಲಿ ತಾಲಿಬಾನ್ ಅಟ್ಟಹಾಸ: 46 ಸಾವು,150ಕ್ಕೂ ಹೆಚ್ಚು ಮಂದಿಗೆ ಗಾಯ

09:18 PM Jan 30, 2023 | Team Udayavani |

ಪೇಶಾವರ : ಪಾಕಿಸ್ಥಾನದ ಪ್ರಕ್ಷುಬ್ಧ ವಾಯುವ್ಯ ಪೇಶಾವರ ನಗರದಲ್ಲಿ ಸೋಮವಾರ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಭಕ್ತರು ತುಂಬಿದ್ದ ಮಸೀದಿಯಲ್ಲಿ ತಾಲಿಬಾನ್ ನ ಆತ್ಮಾಹುತಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, 46 ಜನ ಸಾವನ್ನಪ್ಪಿದ್ದು, ಸುಮಾರು 150 ಜನರು ಗಾಯಗೊಂಡಿದ್ದು ಆ ಪೈಕಿ ಹೆಚ್ಚಿನವರು ಪೊಲೀಸರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮಧ್ಯಾಹ್ನ 1.40 ರ ಸುಮಾರಿಗೆ ಪೊಲೀಸ್ ಲೈನ್ಸ್ ಪ್ರದೇಶದ ಮಸೀದಿಯೊಳಗೆ ಪೊಲೀಸ್, ಸೇನೆ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬಂದಿಗಳನ್ನು ಒಳಗೊಂಡ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಮುಂದಿನ ಸಾಲಿನಲ್ಲಿದ್ದ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೆ 46 ಮಂದಿ ಸಾವನ್ನಪ್ಪಿದ್ದಾರೆ ಎಂದು ಲೇಡಿ ರೀಡಿಂಗ್ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಪೇಶಾವರ ಪೊಲೀಸರು 38 ಸಂತ್ರಸ್ತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಸತ್ತವರು ಮತ್ತು ಗಾಯಗೊಂಡವರಲ್ಲಿ ಹೆಚ್ಚಾಗಿ ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳೇ ಆಗಿದ್ದಾರೆ.

ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ಥಾನ್ (ಟಿಟಿಪಿ) ಕಮಾಂಡರ್ ಉಮರ್ ಖಾಲಿದ್ ಖುರಾಸಾನಿ ಅವರ ಸಹೋದರ, ಆತ್ಮಾಹುತಿ ಸ್ಫೋಟವು ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ಥಾನದಲ್ಲಿ ಕೊಲ್ಲಲ್ಪಟ್ಟ ತನ್ನ ಸಹೋದರನ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ಹೇಳಿದ್ದಾನೆ.

ಪಾಕಿಸ್ಥಾನಿ ತಾಲಿಬಾನ್ ಎಂದು ಕರೆಯಲ್ಪಡುವ ಕಾನೂನುಬಾಹಿರ ಟಿಟಿಪಿ ಈ ಹಿಂದೆ ಭದ್ರತಾ ಸಿಬಂದಿಗಳನ್ನು ಗುರಿಯಾಗಿಸಿಕೊಂಡು ಹಲವಾರು ಆತ್ಮಾಹುತಿ ದಾಳಿಗಳನ್ನು ನಡೆಸಿದೆ.

Advertisement

ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಲು ಪೇಶಾವರಕ್ಕೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next