Advertisement

ಸಿಲಂಬಮ್‌ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಪ್ರತಿಭೆಗಳು

11:46 AM May 09, 2019 | Team Udayavani |

ಕಲಘಟಗಿ: ಕನ್ಯಾಕುಮಾರಿಯ ನಾಗರಕೊಯಿಲ್ನಲ್ಲಿ ಎ. 25ರಿಂದ 28ರವರೆಗೆ ಜರುಗಿದ ಏಶಿಯನ್‌ ಸಿಲಂಬಮ್‌ (ಡೊಣ್ಣೆವರಸೆ) ಚಾಂಪಿಯನ್‌ಶಿಪ್‌ ಸ್ಪರ್ಧೆಯ ಪುರುಷ ವಿಭಾಗದಲ್ಲಿ ಸ್ಪರ್ಧಿಸಿ ವಿಜೇತರಾದ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಕ್ರೀಡಾಪಟುಗಳು ಮಲೇಷ್ಯಾದಲ್ಲಿ ಜರುಗಲಿರುವ ಜಾಗತಿಕ ಸ್ಪರ್ಧೆಯಲ್ಲಿ ಭಾರತದ ಪರ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Advertisement

ಗಳಗಿ ಹುಲಕೊಪ್ಪ ಗ್ರಾಮದ ಶ್ರೀ ಶಿವರಾಜದೇವಿ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಬಸವರಾಜ ರಾಯಕೊಪ್ಪ, ಮಂಜುನಾಥ ತಂಬೂರ ಹಾಗೂ ಕಿರಣ ಗೊರ್ಲಹೊಸೂರ ದೈಹಿಕ ಶಿಕ್ಷಕ ರಾಜಶೇಖರ ಚವ್ಹಾಣ ಅವರ ಮಾರ್ಗದರ್ಶನದಲ್ಲಿ ಡೊಣ್ಣೆವರಸೆ ಕಲಿತು ಏಷ್ಯಾ ಮಟ್ಟದ ಸ್ಪರ್ಧೆಯಲ್ಲಿ ರನ್ನರ್‌ ಅಪ್‌ ಹಾಗೂ ಸೆಕೆಂಡ್‌ ರನ್ನರ್‌ ಅಪ್‌ ಆಗಿ ವಿಜೇತರಾಗಿದ್ದಾರೆ. ಸ್ಪರ್ಧೆಯಲ್ಲಿ ಭಾರತ, ಅಪ್ಗಾನಿಸ್ತಾನ, ಬಾಂಗ್ಲಾದೇಶ, ಭೂತಾನ್‌, ಮಾಲ್ಡಿವ್ಸ್‌, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಒಟ್ಟು 8 ದೇಶಗಳು ಭಾಗಿಯಾಗಿದ್ದವು.

ಅವಶ್ಯಕ ಸಾಮಗ್ರಿಗಳ ಪೂರೈಕೆ ಹಾಗೂ ತರಬೇತಿಯಿಂದ ವಂಚಿತಗೊಂಡಿರುವ ಈ ತ್ರಿವಳಿ ಸ್ಪರ್ಧಾಳುಗಳು ಬಡತನದ ಮಧ್ಯೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ಪ್ರಸ್ತುತಪಡಿಸಿದ್ದಾರೆ. ಬಸವರಾಜ ರಾಯಕೊಪ್ಪ ಧಾರವಾಡದ ಜೆಎಸ್ಸೆಸ್‌ ಕಾಲೇಜಿನಲ್ಲಿ ಬಿಎ ಪ್ರಥಮ ವರ್ಷದಲ್ಲಿ ವ್ಯಾಸಂಗ, ಮಂಜುನಾಥ ತಂಬೂರ ಧಾರವಾಡದ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯದ ಎಲ್ಎಲ್ಬಿ ಪ್ರಥಮ ವರ್ಷದ ವಿದ್ಯಾರ್ಥಿ, ಕಿರಣ ಗೊರ್ಲಹೊಸೂರ ಶ್ರೀ ಶಿವರಾಜದೇವಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ಅಭ್ಯಸಿಸುತ್ತಿದ್ದಾನೆ. ಈ ತ್ರಿವಳಿ ಯುವ ಕ್ರೀಡಾಪಟುಗಳು ಈಗಾಗಲೇ ಕಠಿಣ ಪರಿಶ್ರಮದೊಂದಿಗೆ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚಿನ ತರಬೇತಿಯನ್ನು ತಮಿಳುನಾಡಿನ ಶಂಕರ ಗಣೇಶರಲ್ಲಿ ಪಡೆಯುತ್ತಿದ್ದಾರೆ.

ದೌರ್ಬಲ್ಯ ಮೆಟ್ಟಿ ನಿಂತು ಸಿಕ್ಕ ಅವಕಾಶ ಸಮರ್ಪಕವಾಗಿ ಬಳಸಿಕೊಂಡು ಹುಟ್ಟೂರು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರದ ಕೀರ್ತಿ ಪತಾಕೆ ಹಾರಿಸಬೇಕೆಂಬ ಛಲ ಈ ಮೂವರಲ್ಲಿಯೂ ಎದ್ದು ತೋರುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಎಲೆಮರೆ ಕಾಯಿಗಳಂತೆ ಅನೇಕ ಪ್ರತಿಭೆಗಳಿದ್ದು ಆರ್ಥಿಕ ದುರ್ಬಲತೆಯಿಂದ ಅವರ್ಯಾರೂ ಹೊರಹೊಮ್ಮುತ್ತಿಲ್ಲ. ಆರ್ಥಿಕ ನೆರವು ನೀಡುವ ದಾನಿಗಳು ಬಸವರಾಜ ರಾಯಕೊಪ್ಪ -8105653820, ಮಂಜುನಾಥ ತಂಬೂರ-9972194792 ಅವರನ್ನು ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next