ಭಾಲ್ಕಿ: ನಮ್ಮಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಉತ್ತಮ ಪ್ರೋತ್ಸಾಹದ ಅಗತ್ಯವಿದೆ ಎಂದು ಶ್ರೀ ಗುರುಪ್ರಸನ್ನ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಉಮಾ ಪ್ರಕಾಶ ಖಂಡ್ರೆ ಹೇಳಿದರು.
ಪಟ್ಟಣದ ಶ್ರೀ ಗುರುಪ್ರಸನ್ನ ಪಬ್ಲಿಕ್ ಶಾಲೆಯಲ್ಲಿ ನ್ಯಾಷನಲ್ ಅಥ್ಲೆಟಿಕ್ಸ್ 2021 ಸ್ಪರ್ಧೆಯಲ್ಲಿ 17 ವರ್ಷಗಳಿಗಿಂತ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಾದ ದಿಶಾ ಮತ್ತು ಪುಷ್ಪಕ ಸಂತೋಷ ನೆಲವಾಡೆ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ರಾಷ್ಟ್ರಮಟ್ಟದ ಅಥ್ಲೆಟ್ಸ್ ನಲ್ಲಿ ನಮ್ಮ ಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿರುವುದು ಪ್ರಶಂಸನಾರ್ಹ. ಇಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯುವರು ಎಂದರು.
ಉಮಾದೇವಿ ಪ್ರಕಾಶ ಖಂಡ್ರೆ ಪ್ರತಿಷ್ಠಾನದ ಮುಖ್ಯಸ್ಥ ಪ್ರಸನ್ನ ಪ್ರಕಾಶ ಖಂಡ್ರೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅವರ ಪಾಲಕರೊಂದಿಗೆ ಸನ್ಮಾನಿಸಿ ಮಾತನಾಡಿದರು.
ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆ ಸಂಸ್ಥಾಪಕ ಅಧ್ಯಕ್ಷರೂ ಆದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿವಾಜಿ ಕಾಲೇಜಿನ ದೈಹಿಕ ಶಿಕ್ಷಣದ ಉಪನ್ಯಾಸಕಿ ಪೂಜಾ ನರಸಿಂಗ್ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಮುಖ್ಯ ಶಿಕ್ಷಕ ಅಮೃತ ಮೇತ್ರೆ, ಬಾಲರಾಜ ಉಚ್ಚಾ ಇದ್ದರು. ರಾಜು ಮೇತ್ರೆ ಸ್ವಾಗತಿಸಿದರು. ಅನಿತಾ ಸಿಂಧೆ ನಿರೂಪಿಸಿದರು. ಪೂನಂ ಸೂರ್ಯವಂಶಿ ವಂದಿಸಿದರು.