Advertisement

ತಲಾಖ್‌ಗೆ ಸಿಗುತ್ತಾ ಮೇಲ್ಮನೆ ಸಮ್ಮತಿ?

12:30 AM Dec 31, 2018 | Team Udayavani |

ಹೊಸದಿಲ್ಲಿ: ರಾಜಕೀಯವಾಗಿ ಭಾರೀ ಮಹತ್ವ ಪಡೆದಿರುವ ತ್ರಿವಳಿ ತಲಾಖ್‌ ಮಸೂದೆಯು ಸೋಮವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸೋಮವಾರದ ಸಂಸತ್‌ ಕಲಾಪಕ್ಕೆ ಯಾರೂ ಗೈರಾಗದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ, ತಮ್ಮ ಸಂಸದರಿಗೆ ವಿಪ್‌ ಜಾರಿಗೊಳಿಸಿವೆ. ಮಸೂದೆ ಮಂಡನೆಯ ಮೇಲುಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳನ್ನು ಸಂರಕ್ಷಿಸುವ ಸದುದ್ದೇಶದಿಂದ ಸಿದ್ಧಪಡಿಸಲಾಗಿರುವ ಈ ಮಸೂದೆ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದಿದ್ದಾರೆ.

Advertisement

ರಾಜ್ಯಸಭೆಯಲ್ಲಿ ಸವಾಲು: ಗುರುವಾರ ವಷ್ಟೇ ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರವಾಗುವುದು ಅನಿವಾರ್ಯ. 2017ರಲ್ಲೂ ಈ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡು ರಾಜ್ಯಸಭೆಯಲ್ಲಿ ತಿರಸ್ಕೃತಗೊಂಡಿತ್ತು. ಈಗ ರಾಜ್ಯಸಭೆಯಲ್ಲಿ ಇದನ್ನು ಶತಾಯ ಗತಾಯ ಅಂಗೀಕಾರಗೊಳಿಸಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಗುರುವಾರ, ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾದಾಗಲೇ ಕಾಂಗ್ರೆಸ್‌ ಇದನ್ನು ವಿರೋಧಿಸಿತ್ತು. ಹಾಗಾಗಿ, ಕಾಂಗ್ರೆಸ್‌ ಹಾಗೂ ಮಿತ್ರ ಪಕ್ಷಗಳಿಂದ ಮಸೂದೆಗೆ ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತವಾಗುವುದು ಸ್ಪಷ್ಟವಾಗಿದೆ. ಈ ನಡುವೆ, ಇದೇ ಸಂಸತ್‌ ಅಧಿವೇಶನದ ವೇಳೆಯಲ್ಲೇ ಮಂಡನೆಯಾಗ ಬೇಕಿದ್ದ ಪೌರತ್ವ ಮಸೂದೆಯ ಅಂತಿಮ ಕರಡು ಪ್ರತಿ ಇನ್ನೂ ಸಿದ್ಧವಾಗದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಚರ್ಚೆಗೆ ಬರುವುದು ಅನುಮಾನ ಎಂದು ಹೇಳಲಾಗಿದೆ. 

ಬಲಾಬಲ ಸ್ಥಿತಿ
ಒಟ್ಟು 245 ಸ್ಥಾನಗಳಿರುವ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗಲು ಶೇ. 50ರಷ್ಟು ಮತ ಅಂದರೆ, 123 ಮತಗಳು ಬೇಕು. ಕಾಂಗ್ರೆಸ್‌ ಮಿತ್ರ ಪಕ್ಷಗಳ ಬಲಾಬಲ 155 ಇದೆ. ಬಿಜೆಪಿ ನೇತೃತ್ವದ ಎನ್‌ಡಿಎ ಬಲ 89 ಇದ್ದು, ಮಸೂದೆ ಅಂಗೀಕಾರಕ್ಕೆ 38 ಮತಗಳ ಕೊರತೆಯನ್ನು ಆ ಪಕ್ಷ ಎದುರಿಸುತ್ತಿದೆ.   

Advertisement

Udayavani is now on Telegram. Click here to join our channel and stay updated with the latest news.

Next