Advertisement

ತಲಾಖ್‌ ಒಮ್ಮತಕ್ಕೆ ಸರ್ಕಾರದ ಪ್ರಯತ್ನ

06:00 AM Jan 29, 2018 | Harsha Rao |

ನವದೆಹಲಿ: ಸಂಸತ್‌ನ ಬಜೆಟ್‌ ಅಧಿವೇಶನವು ಸೋಮವಾರದಿಂದ ಆರಂಭವಾಗಲಿದ್ದು, ಸುಗಮ ಕಲಾಪಕ್ಕೆ ಅನುಕೂಲವಾಗುವಂತೆ ಭಾನುವಾರ ನವದೆಹಲಿಯ ಸಂಸತ್‌ಭವನದಲ್ಲಿ ಸರ್ವಪಕ್ಷಗಳ ಸಭೆ ನಡೆದಿದೆ. ಬೇರೆ ಬೇರೆ ವಿಚಾರಗಳನ್ನೆತ್ತಿ ಅಧಿವೇಶನದ ವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿದ್ದರೆ, ತ್ರಿವಳಿ ತಲಾಖ್‌ನಂಥ ಪ್ರಮುಖ ವಿಧೇಯಕಗಳಿಗೆ ಹೇಗಾದರೂ ಅಂಗೀಕಾರ ಪಡೆಯಲೇಬೇಕು ಎಂಬ ಯತ್ನದಲ್ಲಿ ಸರ್ಕಾರವಿದೆ.

Advertisement

ಸರ್ವಪಕ್ಷ ಸಭೆಯ ಬಳಿಕ ಮಾತನಾಡಿದ ಕೇಂದ್ರ ಸಚಿವ ಅನಂತ್‌ಕುಮಾರ್‌ ಅವರು ಈ ಕುರಿತು ಸ್ಪಷ್ಟಪಡಿಸಿದ್ದು, “ಸಭೆಯು ಫ‌ಲಪ್ರದವಾಗಿದೆ. ತ್ರಿವಳಿ ತಲಾಖ್‌ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಲು ಎಲ್ಲ ಪ್ರಯತ್ನಗಳನ್ನೂ ನಾವು ನಡೆಸುತ್ತಿದ್ದೇವೆ. ಪ್ರತಿಪಕ್ಷಗಳ ಸದಸ್ಯರನ್ನು ಭೇಟಿಯಾಗಿ, ಅವರ ಮನವೊಲಿಸುವ ಕೆಲಸ ಮಾಡುತ್ತೇವೆ. ಈ ವಿಧೇಯಕಕ್ಕೆ ಸಂಬಂಧಿಸಿ ಒಮ್ಮತಕ್ಕೆ ಬರುವುದು ನಮ್ಮ ಉದ್ದೇಶ. ಜಿಎಸ್‌ಟಿ ವಿಧೇಯಕವನ್ನು ಹೇಗೆ ಸರ್ವಸಮ್ಮತವಾಗಿ ಅಂಗೀಕರಿಸಲಾಯಿತೋ, ಅದೇ ರೀತಿಯಾಗಿ ಮುಸ್ಲಿಮರಲ್ಲಿರುವ ತ್ರಿವಳಿ ತಲಾಖ್‌ನಂಥ ಕೆಟ್ಟ ಪದ್ಧತಿಯನ್ನು ಕೊನೆಗಾಣಿಸುವಲ್ಲೂ ಪ್ರತಿಪಕ್ಷಗಳು ಬೆಂಬಲ ನೀಡಲಿವೆ ಎಂಬ ವಿಶ್ವಾಸ ನಮಗಿದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಚರ್ಚಿಸಿ, ಬೆಂಬಲ ಕೋರಲಾಗುವುದು,’ ಎಂದಿದ್ದಾರೆ. 

ಇದೇ ವೇಳೆ, ಕಳೆದ ಅಧಿವೇಶನದಲ್ಲಿ ಪ್ರತಿಪಕ್ಷಗಳು ಈ ವಿಧೇಯಕವನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕೆಂದು ಒತ್ತಾಯಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ವಿಧೇಯಕವೀಗ ರಾಜ್ಯಸಭೆಯ ಆಸ್ತಿ. ಅದನ್ನು ಸದನವೇ ನಿರ್ಧರಿಸಲಿದೆ ಎಂದಿದ್ದಾರೆ. 

ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಸಚಿವ ರಾಜನಾಥ್‌ ಸಿಂಗ್‌, ಅರುಣ್‌ ಜೇಟಿÉ, ಅನಂತ್‌ಕುಮಾರ್‌ ಮತ್ತಿತರ ನಾಯಕರು, ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರತಿಪಕ್ಷಗಳ ನಾಯಕರೂ ಪಾಲ್ಗೊಂಡಿದ್ದರು. 

ಇಂದು ಆರ್ಥಿಕ ಸಮೀಕ್ಷೆ ಮಂಡನೆ:ಸೋಮವಾರ ಎರಡೂ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಭಾಷಣ ಮಾಡಿದ ಬೆನ್ನಲ್ಲೇ, ಆರ್ಥಿಕ ಸಮೀಕ್ಷೆಯನ್ನು ಸರ್ಕಾರ ಮಂಡಿಸಲಿದೆ. ಫೆ.1ರಂದು ವಿತ್ತ ಸಚಿವ ಅರುಣ್‌ ಜೇಟಿÉ ಅವರು ಬಜೆಟ್‌ ಮಂಡಿಸಲಿದ್ದಾರೆ. 

Advertisement

ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜು
ಇನ್ನೊಂದೆಡೆ, ಅತ್ಯಾಚಾರ ಸೇರಿದಂತೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಡೆಯುತ್ತಿರುವ ದಾಳಿ, ವ್ಯಾಪಾರಿಗಳ ಅಳಲು, ಉತ್ತರಪ್ರದೇಶದ ಕೋಮುಗಲಭೆ ಮತ್ತಿತರ ವಿಚಾರಗಳನ್ನು ಇಟ್ಟುಕೊಂಡು ಸರ್ಕಾರದ ಮೇಲೆ ದಾಳಿ ನಡೆಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಪ್ರತಿಪಕ್ಷಗಳ ನಾಯಕರು ಸೋಮವಾರ ಬೆಳಗ್ಗೆ ಸಭೆ ಸೇರಿ, ತಮ್ಮ ಕಾರ್ಯ ತಂತ್ರಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಇನ್ನೊಂದೆಡೆ, ಬಿಜೆಪಿ ಸಂಸದೀಯ ಪಕ್ಷದ ಸಭೆಯೂ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next