ನವದೆಹಲಿ:ದೇಶದ ಹಲವು ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಗೊಂಡ ತಳಿ ಕ್ಷಿಪ್ರವಾಗಿ ಹರಡುತ್ತಿರುವ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ(ಜೂನ್ 26) ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಬಗ್ಗೆ ಶೀಘ್ರವೇ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ:ಬಸ್ ಟಿಕೆಟ್ ದರ ಏರಿಕೆ; ಸರಕಾರದ ನಿರ್ಧಾರವನ್ನು ಖಂಡಿಸಿದ ಉಡುಪಿ ಬ್ಲಾಕ್ ಕಾಂಗ್ರೆಸ್
ಜನರು ಗುಂಪುಗೂಡುವುದನ್ನು ತಡೆಗಟ್ಟುವ ಹಾಗೂ ಸಾಮೂಹಿಕ ಪರೀಕ್ಷೆಗಳನ್ನು ನಡೆಸುವ ಮೂಲಕ ಮುನ್ನೆಚ್ಚರಿಕಾ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ದಕ್ಷಿಣದ ರಾಜ್ಯಗಳಿಗೆ ತಿಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ನೀಡಿದ ಮಾಹಿತಿಯಲ್ಲಿ ಕೇಂದ್ರವು, ಜನರು ಗುಂಪುಗೂಡುವುದನ್ನು ತಡೆಯುವುದು, ಹೆಚ್ಚು ಲಸಿಕೆ ನೀಡಿಕೆ, ಪರೀಕ್ಷೆಗಳನ್ನು ಹೆಚ್ಚಿಸುವ ಮೂಲಕ ಕೂಡಲೇ ನಿಯಂತ್ರಣ ಕ್ರಮಕ್ಕೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ರೂಪಾಂತರ ವೈರಸ್ ಕಂಡು ಬಂದಿರುವುದಾಗಿ ಜೂನ್ 25ರ ಪತ್ರದಲ್ಲಿ ತಿಳಿಸಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಅಲ್ಲದೇ ಮುಂಜಾಗ್ರತಾ ಕ್ರಮ ವಹಿಸಬೇಕಾಗಿದೆ ಎಂದು ಭೂಷಣ್ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.