Advertisement

ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿಗಳಾಗಿ

12:41 PM Mar 20, 2018 | Team Udayavani |

ಮೈಸೂರು: ಪ್ರಧಾನಮಂತ್ರಿ ಕೌಶಲ್ಯ ತರಬೇತಿಯನ್ನು ಸಮರ್ಪಕವಾಗಿ ಬಳಸಿಕೊಂಡು ಯುವ ಜನತೆ ಸ್ವಾವಲಂಬಿಗಳಾಗಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದಿಂದ ಸೋಮವಾರ ಮೈಸೂರು ತಾಲೂಕಿನ ಇಲವಾಲದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.

Advertisement

ಇವತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಆದರೆ, ಇವತ್ತಿನ ಸಂದರ್ಭದಲ್ಲಿ ಯಾವುದೇ ಉದ್ಯೋಗ ದೊರೆಯಬೇಕಾದರೆ ಕೌಶಲ್ಯ ತರಬೇತಿ ಮುಖ್ಯ. ಇದಕ್ಕಾಗಿ ಪ್ರಧಾನಿ ನರೇಂದ್ರಮೋದಿ ಅವರು, ದೇಶಾದ್ಯಂತ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರಗಳನ್ನು ಆರಂಭಿಸುವ ಕಾರ್ಯಕ್ರಮ ಕೊಟ್ಟಿದ್ದಾರೆ ಎಂದರು.

ಗ್ರಾಮೀಣ ಪ್ರದೇಶದಿಂದ ಕನ್ನಡ ಮಾಧ್ಯಮದಲ್ಲಿ ಕಲಿತುಬಂದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಸಂವಹನ ಕೊರತೆ ಇರುತ್ತದೆ. ಈ ಕೊರತೆಯನ್ನು ಹೋಗಲಾಡಿಸಲು ಮನೆ ಬಾಗಿಲಲ್ಲೇ ಸಂವಹನ ಕೌಶಲ ತರಬೇತಿ ನೀಡಲಾಗುತ್ತಿದೆ. ಇದರ ಸದುಪಯೋಗಪಡೆದುಕೊಳ್ಳಿ ಎಂದು ಹೇಳಿದರು.

ಹಿಂದೆ ಹೆಣ್ಣು ಮಕ್ಕಳನ್ನು 7ನೇ ತರಗತಿ, ಎಸ್ಸೆಸೆಲ್ಸಿವರೆಗೆ ಮಾತ್ರ ಓದಿಸಿ, ಮನೆ ಕೆಲಸಕ್ಕೆ ದೂಡುತ್ತಿದ್ದರು. ಆಗಿನ ಮಹಿಳೆಯರು ಅವಿದ್ಯಾವಂತರಾದರೂ ಮನೆಯ ಎಲ್ಲಾ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಿದ್ದರು. ಇತ್ತೀಚೆಗೆ ಹೆಣ್ಣು ಮಕ್ಕಳು ಹೆಚ್ಚಿನ ಶಿಕ್ಷಣ ಪಡೆಯುತ್ತಿದ್ದು,

ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ. ಉದ್ಯೋಗ ಮೇಳಕ್ಕೆ ಶೇ.75 ಹೆಣ್ಣು ಮಕ್ಕಳೇ ಬಂದಿರುವುದನ್ನು ನೋಡಿದರೆ, ಪುರುಷರಿಗಿಂತ ನಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ತೋರಿಸುತ್ತದೆ. ಸ್ವಾವಲಂಬಿ ಜೀವನ ನಡೆಸಲು ದುಡಿಯುವ ಆಸಕ್ತಿಯಿಂದ ಬಂದಿರುವವರು ಅವಕಾಶ ಸಿಕ್ಕ ಕಡೆ ಸೇರಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ಯಾವುದೇ ಅಡೆತಡೆ ಎದುರಾದರೂ ತರಬೇತಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಡಿ. ತರಬೇತಿ ಪೂರ್ಣಗೊಳಿಸಿ ಪ್ರಮಾಣಪತ್ರ ಪಡೆದುಕೊಂಡರೆ ಉದ್ಯೋಗ ದೊರಕಿಸಿಕೊಳ್ಳುವುಸುಲಭವಾಗುತ್ತದೆ. ಜತೆಗೆ ಹೆಣ್ಣು ಹೆತ್ತವರಿಗೆ ಮದುವೆಯ ಭಾರವು ಕೊಂಚ ಕಡಿಮೆಯಾಗುತ್ತದೆ ಎಂದು ಹೇಳಿದರು.

ಉದ್ಯೋಗ ಮೇಳದಲ್ಲಿ 16 ಕಂಪನಿಗಳು ಪಾಲ್ಗೊಂಡಿದ್ದು, 452 ಉದ್ಯೋಗಕಾಂಕ್ಷಿಗಳು ಭಾಗವಹಿಸಿದ್ದರು. ಬಿಜೆಪಿ ಮುಖಂಡರುಗಳಾದ ಅರುಣ್‌ಕುಮಾರ್‌ ಗೌಡ, ಹೇಮಂತ್‌ಕುಮಾರ್‌ ಗೌಡ, ಜೆಡಿಎಸ್‌ ಮುಖಂಡ ಗಂಗಾಧರ ಗೌಡ, ಗೋಪಾಲ ಗೌಡ, ಗೋವಿಂದಸ್ವಾಮಿ, ಬಾಲಕೃಷ್ಣ, ಬಿಜೆಪಿ ಮಹಿಳಾ ಮೋರ್ಚಾದ ನೇಹಾ, ಮುಖಂಡರಾದ ಜಗದೀಶ್‌ ಗೌಡ, ಕೆ.ಜೆ.ರಮೇಶ್‌ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next