ಹುಬ್ಬಳ್ಳಿ: ರೈಲ್ವೆ ಪರೀಕ್ಷೆಗಳನ್ನು ರಾಜ್ಯದ ಯುವಕರು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಇಲಾಖೆಯಲ್ಲಿ ನಮ್ಮ ರಾಜ್ಯದವರ ಪ್ರಮಾಣ ಕಡಿಮೆ ಇದೆ. ಇದನ್ನು ಹೋಗಲಾಡಿಸಲು ಹುಬ್ಬಳ್ಳಿಯಲ್ಲಿ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಆರಂಭಿಸಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೇಂದ್ರ ರೈಲ್ವೆ ಸಹಾಯಕ ಸಚಿವ ಸುರೇಶ ಅಂಗಡಿ ಹೇಳಿದರು.
ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರ ಹಳೆಯ ಕಚೇರಿಯಲ್ಲಿ ಮಂಗಳವಾರ ಆರಂಭವಾದ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಕಚೇರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಒಮ್ಮೆ ಅಥವಾ ಎರಡು ಬಾರಿ ಪರೀಕ್ಷೆ ಬರೆದ ನಂತರ ನಮ್ಮ ಯುವಕರು ಪುನಃ ಪ್ರಯತ್ನ ಮಾಡದೆ ಇನ್ನೊಂದೆಡೆ ವಾಲುತ್ತಾರೆ. ಆದರೆ ಬಿಹಾರ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರದಲ್ಲಿ ಓರ್ವ ಅಭ್ಯರ್ಥಿ ಸುಮಾರು 8-10 ಬಾರಿ ಪರೀಕ್ಷೆ ಎದುರಿಸಿ ಆಯ್ಕೆಯಾಗುತ್ತಾರೆ. ಹೀಗಾಗಿಯೇ ಹೊರ ರಾಜ್ಯದವರ ಪ್ರಮಾಣ ಹೆಚ್ಚಾಗಿರುವುದು ಸಮೀಕ್ಷೆ ಮೂಲಕ ದೃಢಪಟ್ಟಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ರೈಲ್ವೆ ಗೇಟ್‌ಗಳ ವಿನ್ಯಾಸ ಹಾಗೂ ನಿರ್ಮಾಣ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಗೇಟ್ ಅಕ್ಕಪಕ್ಕದ ರಸ್ತೆಗಳಲ್ಲಿ ನೀರು ನಿಂತು ಇತರೆ ವಾಹನಗಳ ಸಂಚಾರಕ್ಕೆ ದೊಡ್ಡ ಸಮಸ್ಯೆಯಾಗುತ್ತಿದೆ. ಈ ಕುರಿತು ರೈಲ್ವೆ ಇಲಾಖೆ ಎಂಜಿನಿಯರ್‌ಗಳು ಪರಿಹಾರ ಒದಗಿಸಬೇಕು. ಇಂತಹ ಗೇಟ್‌ಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಹಾಗೂ ಮುಂದಿನ ಕಾಮಗಾರಿಗಳಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ರೈಲ್ವೆ ಇಲಾಖೆಗೆ ಮೂಲಸೌಲಭ್ಯ ಕಲ್ಪಿಸಲು ಕೇಂದ್ರ ಸರಕಾರ ಮುಂದಿನ 10 ವರ್ಷಗಳಲ್ಲಿ 50 ಲಕ್ಷ ಕೋಟಿ ರೂ. ತೊಡಗಿಸಲು ನಿರ್ಧರಿಸಿದೆ. ಹಿಂದಿನ ಅವಧಿಯಲ್ಲಿ 4 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಹಿಂದಿನ ಸರಕಾರಗಳು ಕೇವಲ 2.5 ಲಕ್ಷ ಕೋಟಿ ರೂ. ತೊಡಗಿಸಿದ್ದವು. ಪ್ರತಿ ವರ್ಷ 20 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುತ್ತಿದೆ. ಈ ಭಾಗದಲ್ಲಿ ಆರ್‌ಆರ್‌ಬಿ ಸ್ಥಾಪನೆಯಾಗಿರುವುದರಿಂದ ಉತ್ತರ ಕರ್ನಾಟಕದ ಅಭ್ಯರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಆರ್ ಆರ್‌ಬಿ ಪೂರ್ಣ ಪ್ರಮಾಣದಲ್ಲಿ ನಗರದಲ್ಲಿ ಕಾರ್ಯ ನಿರ್ವಹಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಹುಬ್ಬಳ್ಳಿ-ಕಿತ್ತೂರು-ಬೆಳಗಾವಿ ರೈಲು ಆರಂಭ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕುರಿತು ಕೇಂದ್ರ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ಮಾರ್ಗ ನಿರ್ಮಾಣವಾದರೆ ಬೇಲೇಕೇರಿ ಬಂದರು ಅಭಿವೃದ್ಧಿಯಾಗುವುದರಿಂದ ಈ ಭಾಗದ ಕೈಗಾರಿಕೆಗಳಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಹೇಳಿದರು.
ಶಾಸಕ ಅರವಿಂದ ಬೆಲ್ಲದ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಮಾತನಾಡಿದರು, ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್, ಆರ್‌ಆರ್‌ಬಿ ಚೇರ್ಮೇನ್ ಕಾಶಿ ವಿಶ್ವನಾಥ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಳಖೇಡ, ರೈಲ್ವೆ ಹಿರಿಯ ಅಧಿಕಾರಿಗಳು ಇದ್ದರು.