ಧಾರವಾಡ: ಜಿಲ್ಲೆಯ ಯಾವ ಪ್ರದೇಶದಲ್ಲೂ ಜನರು, ದನಕರುಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಮಲಪ್ರಭಾ ಹಾಗೂ ನೀರಸಾಗರ ಜಲಾಶಯದಿಂದ ನೀರು ಬರುತ್ತಿತ್ತು. ಆದರೆ ನೀರಸಾಗರ ಜಲಾಶಯ ಬತ್ತಿರುವುದರಿಂದ ಕಳೆದ ಎರಡ್ಮೂರು ವರ್ಷದಿಂದ ನೀರು ಸರಬರಾಜು ಸಾಧ್ಯವಾಗಿಲ್ಲ. ಪಾಲಿಕೆ ಅಧಿಕಾರಿಗಳು ನೀರಸಾಗರ ಜಲಾಶಯ ಸಮೀಕ್ಷೆ ಮಾಡಿ, ಜಲಾನಯನ ಪ್ರದೇಶದ ಜಮೀನು ಒತ್ತುವರಿಯಾಗಿದ್ದಲ್ಲಿ ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಜಲಾಶಯಕ್ಕೆ ಮಳೆ ನೀರು ಸರಾಗವಾಗಿ ಬಂದು ಸೇರುವಂತೆ ಅಭಿವೃದ್ಧಿ ಪಡಿಸಬೇಕೆಂದು ತಿಳಿಸಿದರು.
ಕಳೆದ ಮೂರು ತಿಂಗಳಿಂದ ಚುನಾವಣಾ ನೀತಿ ಸಂಹಿತೆಯಿಂದ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನ ಪ್ರಗತಿ ಪರಿಶೀಲನೆ ಮಾಡಲು ಸಾಧ್ಯವಾಗಲಿಲ್ಲ. ಆಯಾ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು ಸ್ವಯಂ ಪ್ರೇರಣೆಯಿಂದ ಮುಂದಾಳತ್ವ ವಹಿಸಿ ತಮ್ಮ ಇಲಾಖೆಗೆ ನಿಗದಿಪಡಿಸಿದ ಗುರಿ ಸಾಧಿಸಬೇಕು. ಪ್ರತಿ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ತಿಂಗಳಿಗೊಮ್ಮೆಯಾದರೂ ಪ್ರಗತಿ ಪರಿಶೀಲನೆ ಮಾಡುವ ಮೂಲಕ ಇಲಾಖೆಗೆ ನಿಗದಿಪಡಿಸಿದ ಗುರಿ ಸಾಧಿಸಬೇಕು ಎಂದರು.
ಯಾವುದೇ ಹಂತದ ಅಧಿಕಾರಿ ಸಕಾರಣವಿಲ್ಲದೇ ಯಾವುದೇ ಕಡತಗಳನ್ನು ಬಾಕಿ ಉಳಿಸಬಾರದು. ನ್ಯಾಯಯುತ ಕಾರಣವಿಲ್ಲದೆ ಕಡತಗಳನ್ನು ಬಾಕಿ ಉಳಿಸಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದರೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
Advertisement
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹಣದ ಕೊರತೆ ಇಲ್ಲ. ಹೀಗಾಗಿ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರು ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸೂಚಿಸಿದರು.
Related Articles
Advertisement
ಶಾಸಕರಾದ ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಡಿಸಿ ದೀಪಾ ಚೋಳನ್, ಹು-ಧಾ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಜಿಪಂ ಸಿಇಒ ಡಾ|ಬಿ.ಸಿ. ಸತೀಶ್, ಎಸ್‌ಪಿ ಸಂಗೀತಾ ಜಿ., ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಪ್ರಶಾಂತಕುಮಾರ್ ಮಿಶ್ರಾ, ಅಪರ ಜಿಲ್ಲಾಧಿಕಾರಿ ಡಾ| ಸುರೇಶ್ ಇಟ್ನಾಳ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಇವಿಎಂ ಮೇಲೆ ಸಿದ್ದು ಸಂಶಯ ಸರಿಯಲ್ಲ: ಸಚಿವ ದೇಶಪಾಂಡೆ
ಧಾರವಾಡ: ಇವಿಎಂ ದುರ್ಬಳಕೆ ಆಗಲು ಸಾಧ್ಯವಿಲ್ಲ. ಹೀಗಾಗಿ ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಅವರ ಗಮನಕ್ಕೆ ತಂದಿದ್ದೇನೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಂಗಳ ಬಗ್ಗೆ ಸಿದ್ದರಾಮಯ್ಯ ಸೇರಿದಂತೆ ಹಲವರು ಸಂಶಯ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಇವಿಎಂಗಳು ಡಿಸಿಗಳ ಕಟ್ಟುನಿಟ್ಟಿನ ನಿಗಾದಲ್ಲಿ ಇರುತ್ತವೆ. ಇವಿಎಂ ಇದ್ದಾಗಲೇ ನಾವು ಕೂಡ ಚುನಾವಣೆ ಗೆದ್ದಿದ್ದೇವೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ನಾವೆಲ್ಲ ಚುನಾವಣೆ ಗೆದ್ದಿದ್ದೇವೆ. ಆದರೆ ಈಗ ಟ್ಯಾಪರಿಂಗ್ ಮಾಡಿದ್ದಾರೆ ಎನ್ನುವುದು ಸರಿಯಲ್ಲ. ಲೋಕಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರಗಳು ಭಿನ್ನವಾಗಿರುತ್ತವೆ. ರಾಷ್ಟ್ರ ಮಟ್ಟದಲ್ಲಿ ಮೋದಿಗೆ ಅಧಿಕಾರ ಕೊಡಬೇಕು ಎಂದು ಜನ ಬಯಸಿ ಅವರ ಕೈಗೆ ಅಧಿಕಾರ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾರರೇ ದೇವರು. ಅವರೇನು ಆದೇಶ ಕೊಡುತ್ತಾರೋ ಅದನ್ನು ನಾವು ಒಪ್ಪಿಕೊಳ್ಳಬೇಕು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಹೆಚ್ಚಿನ ಸ್ಥಾನ ಕೊಟ್ಟಿದ್ದಾರೆ. ಹೀಗಾಗಿ ಇವಿಎಂ ಟ್ಯಾಪರಿಂಗ್ ಮಾಡಿದ್ದಾರೆ ಎನ್ನುವುದು ಸರಿಯಲ್ಲ. ನನ್ನ ಎದುರಿಗೆ ಚುನಾವಣೆಗೆ ನಿಲ್ಲಲಿ ಎಂದು ಹೊರಟ್ಟಿ ಸವಾಲು ಹಾಕಿದ್ದಾರೆ. ಅವರೆದುರಿಗೆ ಚುನಾವಣೆ ನಿಲ್ಲುವ ಪರಿಸ್ಥಿತಿ ಇನ್ನೂ ಬಂದಿಲ್ಲ. ನಾನು ಎಂಎಲ್ಸಿ ಸ್ಥಾನಕ್ಕೆ ನಿಲ್ಲಬೇಕು, ಇಲ್ಲವೇ ಅವರು ಎಂಎಲ್ಎ ಚುನಾವಣೆಗೆ ನಿಲ್ಲಬೇಕು. ಅಂದಾಗ ಮಾತ್ರ ಅದು ಸಾಧ್ಯ ಎಂದರು.