Advertisement

ಗಾಳಿಪಟ ಉತ್ಸವಕ್ಕೆ ಅಗತ್ಯ ಕ್ರಮ ಕೈಗೊಳ್ಳಿ

10:17 PM Oct 25, 2019 | Lakshmi GovindaRaju |

ಚಾಮರಾಜನಗರ: ನಗರದಲ್ಲಿ ರಾಜ್ಯ ಮಟ್ಟದ ಗಾಳಿಪಟ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಈ ಉತ್ಸವ ಅತ್ಯಾಕರ್ಷಕವಾಗಿ ಮೂಡಿ ಬರಲು ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಆಯೋಜನೆ ಆಗಲಿರುವ ಗಾಳಿಪಟ ಉತ್ಸವಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆ ಕುರಿತು ಮಾತನಾಡಿದರು.

Advertisement

ಸ್ಥಳ, ದಿನಾಂಕ ನಿಗದಿಗೊಳಿಸಿ: ಗಾಳಿಪಟ ಉತ್ಸವದ ಪರಿಕಲ್ಪನೆ ನಿಜಕ್ಕೂ ಅದ್ಭುತವಾಗಿದೆ. ಇದು ಖಂಡಿತವಾಗಿಯೂ ಹೆಚ್ಚಿನ ಜನರನ್ನು ಆಕರ್ಷಿಸಲಿದೆ. ಈ ಉತ್ಸವವನ್ನು ನಡೆಸಲು ಸೂಕ್ತ ಸ್ಥಳ, ದಿನಾಂಕವನ್ನು ಗೊತ್ತುಪಡಿಸಬೇಕು. ಗಾಳಿಪಟ ಉತ್ಸವಕ್ಕೆ ಪೂರಕವಾಗಿರುವ ಅವಶ್ಯಕ ರೂಪುರೇಷೆ ಹಾಗೂ ಇನ್ನಿತರ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೂಕ್ತ ಜಾಗ ಪರಿಶೀಲಿಸಿ: ಗಾಳಿ ಪಟ ಉತ್ಸವಕ್ಕೆ ಸೂಕ್ತವಾದ ಜಾಗದ ಬಗ್ಗೆ ಪರಿಶೀಲನೆ ನಡೆಸಬೇಕು. ಉತ್ಸವಕ್ಕೆ ಮಕ್ಕಳನ್ನು ಹೆಚ್ಚು ಕರೆತರುವ ಪ್ರಯತ್ನ ಆಗಬೇಕು. ಗಾಳಿಪಟ ಸ್ಪರ್ಧೆಯಲ್ಲಿ ಇರುವ ವಿಭಾಗಗಳ ಜತೆಗೆ ಮಹಿಳೆ ಮತ್ತು ರೈತರಿಗೆ ಪ್ರತ್ಯೇಕ ವಿಭಾಗ ಮಾಡಿದಲ್ಲಿ ಹೆಚ್ಚು ಪರಿಣಾಮಕಾರಿಯಾಲಿದೆ. ಅಲ್ಲದೇ ಉತ್ಸವದಲ್ಲಿ ಸ್ಥಳೀಯ ಜಾನಪದ ವಿಶೇಷತೆಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ ಜಿಲ್ಲೆಯ ಕಲೆಯನ್ನು ಪ್ರಸ್ತುಪಡಿಸಬಹುದಾಗಿದೆ ಎಂದರು.

ವಿಭಿನ್ನವಾಗಿ ಕಾರ್ಯಕ್ರಮ ವ್ಯವಸ್ಥೆ ಮಾಡಿ: ಗಾಳಿಪಟ ಉತ್ಸವ ಸಂದರ್ಭದಲ್ಲಿ ಗಾಳಿಪಟ ಸಂಸ್ಕೃತಿ ಹುಟ್ಟಿಕೊಂಡ ಬಗೆ ಹಾಗೂ ಉತ್ಸವಗಳ ಇತಿಹಾಸದ ಬಗೆಗೆ ಮಾಹಿತಿ ಫ‌ಲಕಗಳನ್ನು ಅಳವಡಿಸಬೇಕು. ಗಾಳಿಪಟ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ನಡೆಸಬೇಕು. ನೇಕಾರರು ಹಾಗೂ ಜವಳಿ ಕುಶಲಕರ್ಮಿಗಳನ್ನು ತೊಡಗಿಸಿಕೊಂಡು ವಿಭಿನ್ನವಾಗಿ ಕಾರ್ಯಕ್ರಮ ವ್ಯವಸ್ಥೆ ಮಾಡಬೇಕು. ಈ ಮೂಲಕ ಗಾಳಿಪಟ ಪರಂಪರೆಗೆ ಉತ್ತೇಜನ ನೀಡುವಂತಾಗಬೇಕು ಜಿಲ್ಲಾಧಿಕಾರಿ ತಿಳಿಸಿದರು.

ದೇಸಿ ಪರಂಪರೆ ಉಳಿಸಿ: ಜಾನಪದ ಲೋಕದ ಆಡಳಿತಾಧಿಕಾರಿ ಡಾ.ಕುರುವ ಬಸವರಾಜ ಮಾತನಾಡಿ, ರಾಜ್ಯ ಮಟ್ಟದ ಈ ಗಾಳಿಪಟ ಉತ್ಸವವನ್ನು ಸಾಕಷ್ಟು ವರ್ಷಗಳಿಂದ ರಾಜ್ಯದ ವಿವಿಧೆಡೆ ಆಯೋಜನೆ ಮಾಡಲಾಗಿದೆ. ಸಾರ್ವಜನಿಕ ಜೀವನದಿಂದ ಮರೆಯಾಗುತ್ತಿರುವ ಗಾಳಿಪಟ ಸಂಸ್ಕೃತಿಯನ್ನು ಮತ್ತೆ ಪುನರುಜ್ಜೀವನಗೊಳಿಸುವುದು ಇದರ ಮುಖ್ಯ ಉದ್ದೇಶ. ಎಲ್ಲರನ್ನು ಒಳಗೊಂಡು ಈ ದೇಸಿ ಪರಂಪರೆಯನ್ನು ಉಳಿಸುವ ಕೆಲಸ ಗಾಳಿಪಟ ಉತ್ಸವದಿಂದ ಆಗಲಿದೆ ಎಂದು ತಿಳಿಸಿದರು.

Advertisement

4 ವಿಭಾಗಗಳಲ್ಲಿ ಸ್ಪರ್ಧೆ: ಗಾಳಿಪಟ ಉತ್ಸವದಲ್ಲಿ ವಯೋಮಾನದ ಅನ್ವಯ 4 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. 12 ವರ್ಷಕ್ಕಿಂತ ಕಡಿಮೆ, 13 ರಿಂದ 22, 23ಕ್ಕಿಂದ ಅಧಿಕ ವಯೋಮಾನ ಹಾಗೂ ಗುಂಪು ವಿಭಾಗಗಳಲ್ಲಿ ಸ್ಪರ್ಧೆ ಇರುತ್ತದೆ. ಎಲ್ಲಾ ವಿಭಾಗಗಳಲ್ಲೂ ಪ್ರತ್ಯೇಕವಾಗಿ ಮೊದಲ ನಾಲ್ಕು ಸ್ಥಾನ ಪಡೆದವರಿಗೆ ನಗದು ಬಹುಮಾನ ಇರಲಿದೆ. ಈ ಮೂಲಕ ಎಲ್ಲರಿಗೂ ಗಾಳಿಪಟದ ಬಗೆಗೆ ಎಲ್ಲರಲ್ಲೂ ಅರಿವು ಮೂಡಿಸುವುದು ಜತೆಗೆ ಮುಖ್ಯವಾಗಿ ಮಕ್ಕಳಲ್ಲಿ ಗಾಳಿಪಟ ತಯಾರಿಕೆಯ ಕೌಶಲ್ಯ ವೃದ್ಧಿಸುವುದು ಈ ಉತ್ಸವದಿಂದ ಆಗಲಿದೆ ಎಂದು ಮಾಹಿತಿ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ವೈ. ಸೋಮಶೇಖರ್‌, ಕರ್ನಾಟಕ ಜಾನಪದ ಪರಿಷತ್ತಿನ ಮೈಸೂರು ವಲಯದ ಸಂಚಾಲಕ ಕೀಲಾರ ಕೃಷ್ಣೇಗೌಡ, ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ. ಬಸವರಾಜು, ಉಪಾದ್ಯಕ್ಷರಾದ ಮನೋಜ್‌ ಗೌಡ, ಸಂಚಾಲಕ ಸಿ.ಎಂ. ನರಸಿಂಹಮೂರ್ತಿ, ಖಜಾಂಚಿ ಜಿ. ರಾಜಪ್ಪ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next