ಬೆಂಗಳೂರು: “ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಎಚ್.ಡಿ. ಕುಮಾರಸ್ವಾಮಿಯವರು ನಾಯಕತ್ವ ವಹಿಸಿಕೊಳ್ಳಬೇಕು, ಇಲ್ಲವೇ ಪೂರ್ಣ ಪ್ರಮಾಣದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಇಲ್ಲದಿದ್ದರೆ ಶಾಸಕರಷ್ಟೇ ಅಲ್ಲ, ಜಿಲ್ಲಾ-ತಾಲೂಕು ಮಟ್ಟದಲ್ಲಿ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟವಾಗಬಹುದು’ ಎಂದು ನಾಯಕರು ಎಚ್ಚರಿಕೆ ರವಾನಿಸಿದ್ದಾರೆ.
ಚುನಾವಣೆ ಬಂದಾಗ ಮಾತ್ರ ಪಕ್ಷ ಕಟ್ಟುವ ಮನಸ್ಥಿತಿ ಬಿಡಬೇಕು. ಪ್ರಮುಖವಾಗಿ ಪಕ್ಷದಿಂದ ದೂರವಾಗಿರುವ ಲಿಂಗಾಯಿತ, ದಲಿತ ಹಾಗೂ ಹಿಂದುಳಿದ ವರ್ಗಗಳ ಮತದಾರರನ್ನು ಮತ್ತೆ ಪಕ್ಷದ ತೆಕ್ಕೆಗೆ ತರಲು ತಳಮಟ್ಟದ ರೂಪು-ರೇಷೆ ಹಾಕಿಕೊಳ್ಳಬೇಕು. ಹಿರಿಯ ನಾಯಕರನ್ನು ಒಟ್ಟುಗೂಡಿಸಿಕೊಂಡು ಮುಂದಿನ ಮೂರೂವರೆ ವರ್ಷಕ್ಕೆ ಎದುರಾಗುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಜ್ಜಾಗಬೇಕು ಎಂದು ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶೆಂಪೂರ್, ವೈ.ಎಸ್.ವಿ.ದತ್ತಾ ಸೇರಿದಂತೆ ಪಕ್ಷದ ನಾಯಕರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನೇರವಾಗಿಯೇ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇವೇಗೌಡರ ಬಳಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಏಕಾಏಕಿ ಎಚ್.ಕೆ.ಕುಮಾರಸ್ವಾಮಿಯವರನ್ನು ಬದಲಾಯಿಸಿದರೆ ಬೇರೆಯದೇ ಆದ ಸಂದೇಶ ಹೋಗಬಹುದು. ಉಪ ಚುನಾವಣೆ ಸೋಲಿಗೆ ಎಚ್.ಕೆ.ಕುಮಾರಸ್ವಾಮಿಯವರನ್ನು ಜವಾಬ್ದಾರಿ ಮಾಡುವುದು ಬೇಡ. ನಾವೇ ಹೊಣೆ ಹೊರಬೇಕು. ಕಾಂಗ್ರೆಸ್ ಪಕ್ಷದ ಬೆಳವಣಿಗೆ ನೋಡಿ ತೀರ್ಮಾನ ಕೈಗೊಳ್ಳೋಣ ಎಂದು ದೇವೇಗೌಡರು ಹೇಳಿದ್ದಾರೆ ಎಂದು ಹೇಳಲಾಗಿದೆ.
ಗೌಡರ ಅಸಮಾಧಾನ: ಜೆಡಿಎಸ್ ಕುಟುಂಬ ಪಕ್ಷ ಎಂಬ ಹಣೆಪಟ್ಟಿ ಕಳಚಿಕೊಳ್ಳಬೇಕು ಎಂದು ಹೇಳುತ್ತೀರಿ, ಆದರೆ, ಬೇರೆಯವರಿಗೆ ನಾಯಕತ್ವ ಕೊಟ್ಟರೆ ನಾಯಕರೇ ಸಹಕಾರ ನೀಡುವುದಿಲ್ಲ. ಕುಮಾರಸ್ವಾಮಿಯವರೇ ನಾಯಕತ್ವ ವಹಿಸಿಕೊಳ್ಳಿ ಎಂದು ಒತ್ತಡ ಹೇರುತ್ತೀರಿ. ಸಿದ್ದರಾಮಯ್ಯ, ಎಂ.ಪಿ.ಪ್ರಕಾಶ್ ಸೇರಿದಂತೆ ಹಲವರು ಪಕ್ಷ ಬಿಟ್ಟ ನಂತರವೂ ಮತ್ತೆ ಸಂಘಟನೆ ಮಾಡಿದ್ದೇವೆ. ಆದರೆ, ಪಕ್ಷಕ್ಕೆ ಏಟಿನ ಮೇಲೆ ಏಟು ಬೀಳುತ್ತಿದೆ. ಇಲ್ಲಿ ನಮ್ಮ ವರ್ಚಸ್ಸಿನಿಂದ ಗೆದ್ದವರು ನಂತರ ಬೇರೆ ಕಡೆ ಹೋಗುತ್ತಾರೆ. ಒಂದು ರೀತಿಯಲ್ಲಿ ಜೆಡಿಎಸ್ “ಕಾರ್ಖಾನೆ’ಯಂತಾಗಿ ಹೋಗಿದೆ ಎಂದು ದೇವೇಗೌಡರು ಅಸಮಾಧಾನ ತೋಡಿಕೊಂಡರು ಎಂದು ತಿಳಿದು ಬಂದಿದೆ.
ಬೆಂಗಳೂರಲ್ಲೂ ಪಕ್ಷಕ್ಕೆ ಸವಾಲು: ಈ ಮಧ್ಯೆ, ರಾಜಧಾನಿ ಬೆಂಗಳೂರಿನಲ್ಲೂ ಪಕ್ಷಕ್ಕೆ ಸವಾಲು ಉಂಟಾಗಿದೆ. ಮುಂದಿನ ವರ್ಷ ಬಿಬಿಎಂಪಿ ಚುನಾವಣೆ ಎದುರಾಗಲಿದೆ. ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರದಲ್ಲಿ ಗೋಪಾಲಯ್ಯ ಬಿಜೆಪಿಗೆ ಹೋಗಿದ್ದು ಇಬ್ಬರು ಪಾಲಿಕೆ ಸದಸ್ಯರೂ ಪಕ್ಷಾಂತರ ಮಾಡಿದ್ದಾರೆ. ಮೂರ್‍ನಾಲ್ಕು ಮಂದಿ ಜೆಡಿಎಸ್ ಪಾಲಿಕೆ ಸದಸ್ಯರು ಪಕ್ಷದಲ್ಲಿ ಇದ್ದೂ ಇಲ್ಲದಂತಾಗಿದ್ದಾರೆ. ಹೀಗಾಗಿ, ಬಿಬಿಎಂಪಿ ಚುನಾವಣೆಗೆ ಪಕ್ಷ ಸಂಘಟನೆ ಮಾಡದಿದ್ದರೆ ಕಷ್ಟ ಎಂಬ ಅಭಿಪ್ರಾಯವೂ ಇದೆ.
ಕೆಪಿಸಿಸಿ ನಾಯಕತ್ವ ಬದಲಾವಣೆಯತ್ತ ಚಿತ್ತ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿರುವುದರಿಂದ ಆ ಸ್ಥಾನಕ್ಕೆ ಯಾರನ್ನು ನೇಮಿಸಲಾಗುವುದು ಎಂಬುದನ್ನು ಜೆಡಿಎಸ್ ಕಾದು ನೋಡುತ್ತಿದೆ. ಒಂದೊಮ್ಮೆ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಸೇರಿ ದಲಿತ ವರ್ಗಕ್ಕೆ ಸೇರಿದವರು ನೇಮಕವಾದರೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಲಿಂಗಾಯಿತ ಅಥವಾ ಮತ್ತೆ ಎಚ್.ಡಿ.ಕುಮಾರಸ್ವಾಮಿಯವರಿಗೆ ಪಟ್ಟ ಕಟ್ಟುವ ಬಗ್ಗೆ ಚರ್ಚೆ ನಡೆದಿದೆ. ಕೆಪಿಸಿಸಿಗೆ ಡಿ.ಕೆ.ಶಿವಕುಮಾರ್ ನೇಮಕವಾದರೆ ಯಥಾಸ್ಥಿತಿ ಮುಂದುವರಿಸಿ, ಕುಮಾರಸ್ವಾಮಿಯವರನ್ನು ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ದೇವೇಗೌಡರ ಯೋಚನೆಯಾಗಿದೆ ಎಂದು ಹೇಳಲಾಗಿದೆ.
* ಎಸ್. ಲಕ್ಷ್ಮಿನಾರಾಯಣ