ಶಿವಮೊಗ್ಗ: ಕಾನೂನುಬಾಹಿರ ಹಾಗೂ ಅಪರಾಧ ಪ್ರಕರಣ ನಿಯಂತ್ರಿಸಲು ಕಠಿಣ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಪೊಲೀಸರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಸಚಿವರು ಗೂಂಡಾಗಿರಿ, ಗಾಂಜಾ ತಡೆಯಲು ಇಲಾಖೆಯಿಂದ ಏನು ಕ್ರಮ ಕೈಗೊಳ್ಳುತ್ತೀರಿ ಹೇಳಿ ಎಂದು ಪ್ರಶ್ನಿಸಿದರು. ಪೊಲೀಸರನ್ನು ಕಂಡರೆ ಕಳ್ಳಕಾಕರಿಗೆ, ಕೊಲೆಗಾರರಿಗೆ ಭಯವೇ ಇಲ್ಲದಂತಾಗಿದೆ. ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ನೀವು ಹೀಗೆ ಮುಂದುವರಿದರೆ ಜನರೇ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ. ನೀವು ಕೆಲಸ ಮಾಡುತ್ತಿದ್ದೀರಾ, ಮಲಗಿದ್ದೀರಾ ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದಲ್ಲಿ ಈ ಹಿಂದೆ ಕೊಲೆ, ದರೋಡೆ ನಡೆಯುತ್ತಿದ್ದವು. ಇದೀಗ ಮತ್ತೆ ಅಪರಾಧಗಳು ಹೆಚ್ಚಾಗಿವೆ. ಕೈಯಲ್ಲಿ ಮಚ್ಚು, ಲಾಂಗ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಗಾಂಜಾ, ಹುಕ್ಕಾ ಸೇವನೆ ಹೆಚ್ಚಾಗಿದೆ ಎಂದು ನಾಗರಿಕರಿಂದ ದೂರು ಕೇಳಿ ಬರುತ್ತಿವೆ. ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಗಾಂಜಾ, ಹುಕ್ಕಾ ಅಂದ್ರೆ ಏನು ಅನ್ನುವುದೇ ನನಗೆ ಗೊತ್ತಿಲ್ಲ. ಜನರು ಈಗ ಹೇಳಿದ ಮೇಲೆ ಗೊತ್ತಾಯ್ತು. ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಸೀಗೆಹಟ್ಟಿ ಬಡಾವಣೆಯಲ್ಲಿ ಯುವಕನೋರ್ವ ವಾಹನಗಳಿಗೆ ಬೆಂಕಿ ಹಚ್ಚಿದ್ದಾನೆ ಎಂಬ ಮಾಹಿತಿ ಇದೆ. ಆತನನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು ಎಂದರು.
ಶಿವಮೊಗ್ಗ ನಗರದಲ್ಲಿ ಎಲ್ಲ ಕೋಮಿನವರು ಅಣ್ಣ- ತಮ್ಮಂದಿರಂತೆ ಇದ್ದೇವೆ. ಇಂತಹ ಘಟನೆಯಿಂದ ಸಮಾಜದಲ್ಲಿ ಘರ್ಷಣೆ ಸಂಭವಿಸಿದರೆ ಯಾರು ಹೊಣೆ? ಪೊಲೀಸರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು. ನಾಗರಿಕರು ದೂರು ನೀಡಲು ಠಾಣೆಗೆ ಹೋದರೆ ವಿನಾಃ ಕಾರಣ ಕಾಯಿಸುತ್ತೀರಾ ಎಂಬ ಆರೋಪ ಇದೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗಬಾರದು. ಅವರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು ಎಂದರು. ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು, ಹೆಚ್ಚುವರಿ ರಕ್ಷಣಾಧಿಕಾರಿ ಎಚ್.ಟಿ. ಶೇಖರ್, ಡಿವೈಎಸ್ಪಿ ಈಶ್ವರ್ ಉಮೇಶ್ ನಾಯಕ್, ವಿವಿಧ ಠಾಣೆಯ ಇನ್ಸೆ³ಕ್ಟರ್ಗಳಾದ ವಸಂತ್ ಕುಮಾರ್, ಸಂಜೀವ್ ಕುಮಾರ್ ಇದ್ದರು.