Advertisement

“ಮಳೆಗಾಲಕ್ಕೂ ಮೊದಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಿ ‘

08:39 PM Apr 28, 2019 | Team Udayavani |

ಮಡಿಕೇರಿ :ಕಳೆದ ಅತಿವೃಷ್ಟಿ ಅನಾಹುತದಿಂದ ಕಂಗೆಟ್ಟಿರುವ ಜಿಲ್ಲೆಗೆ ಮತ್ತೂಂದು ಮಳೆಗಾಲದ ಆಗಮನದ ಕಾಲ ಸಮೀಪಿಸಿದರೂ ಸಂತ್ರಸ್ತರಿಗೆ ಮನೆ ಮತ್ತು ಅಗತ್ಯ ಮೂಲಭೂತ ಸೌಲಭ್ಯಗಳ ಪೂರೈಕೆ ಕಾರ್ಯ ಸಮರ್ಪಕವಾಗಿ ಸಕಾಲದಲ್ಲಿ ನಡೆಯುತ್ತಿಲ್ಲವೆಂದು ಆರೋಪಿಸಿರುವ ಜಿಲ್ಲೆಯ ಶಾಸಕರುಗಳು ಶೀಘ್ರ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

Advertisement

ಮನವಿಯ ವಿವರ ಹೀಗಿದೆ
ಪ್ರಮುಖವಾಗಿ ಮನೆಯನ್ನು ಕಳೆದುಕೊಂಡ ನಿರಾಶ್ರಿತರಿಗೆ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದರೂ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸಂತ್ರಸ್ತರು ಅತಂತ್ರ ಸ್ಥಿತಿಯನ್ನೇ ಎದುರಿಸುತ್ತಿದ್ದಾರೆ. ಮಳೆಗಾಲ ಆರಂಭವಾಗಲು ಇನ್ನು ಒಂದು ತಿಂಗಳಷ್ಟೇ ಬಾಕಿ ಉಳಿದಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ನೂತನ ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಬೇಕು, ಜಿಲ್ಲೆಯಲ್ಲಿನ ರಸ್ತೆಗಳು, ಸೇತುವೆಗಳು, ಕೆರೆ ಕಟ್ಟೆಗಳು ಕೊಚ್ಚಿ ಹೋಗಿದ್ದು, ಈಗಾಗಲೇ ದುರಸ್ತಿ ಕಾರ್ಯ ಕೆಲವೇ ಗ್ರಾಮಗಳಲ್ಲಿ ನಡೆಯುತ್ತಿದೆ. ಇನ್ನುಳಿದ ಗ್ರಾಮಗಳಿಗೆ ಈಗಲೂ ರಸ್ತೆ ಸಂಪರ್ಕ ಇಲ್ಲದೆ ರೈತರು ತಮ್ಮ ಜಮೀನಿಗೆ ಹೋಗಿ ವ್ಯವಸಾಯ ಮಾಡಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ. ತಕ್ಷಣ ಹೆಚ್ಚುವರಿ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಲ್ಲ ಗ್ರಾಮಗಳ ರಸ್ತೆಗಳನ್ನು ದುರಸ್ತಿಪಡಿಸಬೇಕು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಬೆಳೆಗಾರರೇ ವಾಸಿಸುತ್ತಿದ್ದು, ಈ ಬಾರಿ ಜಿಲ್ಲೆಯಲ್ಲಿ ಅಂದಾಜು 9482.61 ಲಕ್ಷ ರೂ ವೆಚ್ಚದ ಬೆಳೆ ನಷ್ಟವಾಗಿದೆ. ಬೆಳೆಗಾರರು ಹಾಗೂ ರೈತರು ಬೆಳೆನಷ್ಟದಿಂದ ಕಂಗಾಲಾಗಿದ್ದು, ಇಲ್ಲಿಯವರೆಗೆ ಯಾವುದೇ ಪರಿಹಾರ ದೊರೆತ್ತಿಲ್ಲ. ಕೆಲವು ರೈತರಿಗೆ ಮಾತ್ರ ಪರಿಹಾರ ದೊರೆತ್ತಿದ್ದು, ಬಹುತೇಕರು ವಂಚಿತರಾಗಿದ್ದಾರೆ. ಈ ಕಾರಣದಿಂದ ತಕ್ಷಣ ಬೆಳೆನಷ್ಟ ಪರಿಹಾರವನ್ನು ವಿತರಿಸಬೇಕು, ಜಮೀನು ಕಳೆದುಕೊಂಡ ರೈತರಿಗೆ ಪರ್ಯಾಯ ಭೂಮಿಯನ್ನು ಇಲ್ಲಿಯವರೆಗೆ ನೀಡಿಲ್ಲ, ಖಾಲಿ ಇರುವ ಸರಕಾರಿ ಜಮೀನನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು.

ಗುಡ್ಡಗಳು ಕುಸಿದು ಮಣ್ಣುಗಳು ಒಂದೆಡೆ ಸೇರಿದ್ದು, ಕೆಲವು ಭಾಗದಲ್ಲಿ ಇಳಿಜಾರು ಪ್ರದೇಶ ನಿರ್ಮಾಣವಾಗಿದೆ. ಇದನ್ನು ಸರಕಾರದ ಅನುದಾನದಲ್ಲಿ ಸಮತಟ್ಟುಗೊಳಿಸಿ ರೈತರಿಗೆ ವ್ಯವಸಾಯ ಮಾಡಲು ಅವಕಾಶ ಕಲ್ಪಿಸಬೇಕು, ಭೂ ಕುಸಿತದಿಂದ ಮರಗಳು ಬಿದ್ದಿದ್ದು, ಅಂತಹ ಮರಗಳನ್ನು ಯಾವುದೇ ನಿರ್ಬಂಧವಿಲ್ಲದೆ ರೈತರೇ ಮಾರಾಟ ಮಾಡಲು, ಇಲ್ಲವೇ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಬೇಕು, ಭೂಕುಸಿತದಿಂದ ಮನೆಯ ದಾಖಲಾತಿಗಳು, ಭೂ ದಾಖಲಾತಿಗಳು, ವಿದ್ಯಾಭ್ಯಾಸಕ್ಕೆ ಸಂಬಂದಿಸಿದ ದಾಖಲಾತಿಗಳು ಮಣ್ಣಿನಲ್ಲಿ ನಾಶವಾಗಿರುವುದರಿಂದ ಸಂಬಂಧಿಸಿದ ಇಲಾಖೆ ದಾಖಲಾತಿಗಳನ್ನು ಮರಳಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿಕುಶಾಲಪ್ಪ, ಮೊದಲಾದವರು ಪ್ರಬಾರ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಲಕ್ಷ್ಮೀಪ್ರಿಯ ಅವರಿಗೆ ಮನವಿ ಪತ್ರ ಸಲ್ಲಿಸಿ ಸರಕಾರದ ಗಮನ ಸೆಳೆಯುವಂತೆ ತಿಳಿಸಿದರು.

ಸೂಕ್ತ ಜಾಗದಲ್ಲಿ ಮನೆ
ಜಮೀನು ಕಳೆದುಕೊಂಡ ಗ್ರಾ.ಪಂ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಬಿಪಿಎಲ್‌ ಕಾರ್ಡ್‌ ನೀಡಬೇಕು, ಕೆಲವು ಭಾಗಗಳ ಗುಡ್ಡಗಳು ಬಿರುಕು ಬಿಟ್ಟಿದ್ದು, ಅಪಾಯ ಎದುರಾಗುವ ಮುನ್ಸೂಚನೆ ಇದೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಪರ್ಯಾಯವಾಗಿ ಸೂಕ್ತ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಶಾಸಕರು ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next