ಶಿರಹಟ್ಟಿ: ಉತ್ತರ ಕರ್ನಾಟಕ ಸ್ವಾಭಿಮಾನಿ ಸಂಘಟನೆ ವತಿಯಿಂದ ಮಹದಾಯಿ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ಸಮತೋಲನ ಜಲಾಶಯಗಳ ಅನುಷ್ಠಾನ ಮತ್ತು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಏಪ್ರಿಲ್‌ನಲ್ಲಿ ನರಗುಂದದಿಂದ ಬೀಳಗಿ ವರೆಗೆ 6 ದಿನಗಳ ಕಾಲ ನಡೆಯುವ ಬೃಹತ್ ಜಾಥಾಗೆ ಚಾಲನೆ ನೀಡಲು ಆಗಮಿಸುವಂತೆ ವಿಧಾನ ಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ ಎಸ್.ಆರ್. ಪಾಟೀಲ್ ಅವರು ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳಿಗೆ ಆಹ್ವಾನ ನೀಡಿದರು.
ಪಟ್ಟಣದ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠದಲ್ಲಿ ಉತ್ತಾರಾಧಿಕಾರಿ ಜ|ಫಕೀರ ದಿಂಗಾಲೇಶ್ವರ ಸ್ವಾಮಿಗಳನ್ನು ಸನ್ಮಾನಿಸಿ ಮಾತನಾಡಿದ ವಿಧಾನ ಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ ಎಸ್.ಆರ್. ಪಾಟೀಲ್ ಅವರು, ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ಸಂಪೂರ್ಣ ನನೆಗುದಿಗೆ ಬಿದ್ದಿವೆ. ಕೆಲವು ಅಭಿವೃದ್ಧಿ ಕಾಮಗಾರಿಗಳೂ ನಡೆಯುತ್ತಿಲ್ಲ. ಈ ನೀರಾವರಿ ಯೋಜನೆಗಳ ಅನುಷ್ಠಾನದಿಂದ ಲಕ್ಷಾಂತರ ರೈತರ ಬದುಕು ಹಸನಾಗುತ್ತದೆ. ಸಾವಿರಾರು ಹಳ್ಳಿಗಳಿಗೆ ಕುಡಿಯಲು ನೀರು ಸಿಗುತ್ತದೆ. ಹೀಗಾಗಿ, ಮಹದಾಯಿ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ಸಮತೋಲನ ಜಲಾಶಯಗಳ ಯೋಜನೆಗಳ ಅನುಷ್ಠಾನ ಹಾಗೂ ಉತ್ತರ ಕರ್ನಾಟಕದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಉತ್ತರ ಕರ್ನಾಟಕ ಮುಖಂಡರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದಾರೆ.
ನರಗುಂದದಿಂದ ರೈತರು 200 ಟ್ರ್ಯಾಕ್ಟರ್‌ಗಳ ಮೂಲಕ ಕೊಣ್ಣೂರ, ಬಾದಾಮಿ, ಬಾಗಲಕೋಟಿ ಸೇರಿದಂತೆ ಬಿಳಗಿ ವರೆಗೆ 6 ದಿನಗಳ ಕಾಲ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು ಚಾಲನೆ ನೀಡಬೇಕೆಂದು ಮನವಿ ಮಾಡಿದರು.
ನಂತರ ಫಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಎಸ್.ಆರ್. ಪಾಟೀಲ ಅವರು ಸರಳ, ಸಜ್ಜನ ರಾಜಕಾರಣಿ. ರಾಜಕೀಯ ಅಷ್ಟೇ ಅಲ್ಲದೇ, ಶಿಕ್ಷಣ ಹಾಗೂ ಸಹಕಾರಿ ರಂಗದಲ್ಲಿ ಹೊಸ ಕ್ರಾಂತಿ ಮಾಡಿದ್ದಾರೆ. ಅವರ ಸಿದ್ಧಾಂತ, ಚಿಂತನೆಗಳು ಸದಾ ಸಮಾಜದ ಅಭಿವೃದ್ಧಿ ಪರವಿರುತ್ತವೆ. ಉತ್ತರ ಕರ್ನಾಟಕದಲ್ಲಿ ಹೊಸ ಹೊಸ ಉದ್ಯಮಗಳನ್ನು ಸ್ಥಾಪಿಸಿ ಸಾವಿರಾರು ಯುವಕರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಇಂತಹ ಹಿರಿಯರು ನಾಡಿನ ಅಭಿವೃದ್ಧಿಗಾಗಿ ನಡೆಸುವಂತಹ ಹೋರಾಟದಲ್ಲಿ ನಾನು ಪಾಲ್ಗೊಂಡು ಉತ್ತರ ಕರ್ನಾಟಕದ ಜನರ ಹೋರಾಟಕ್ಕೆ ಜಯ ಸಿಗಲೆಂದು ಹಾರೈಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಡ್ಯಾಳದ ಒಪ್ಪತ್ತೇಶ್ವರ ಮಠದ ಮರುಸಿದ್ಧ ಮಹಾಸ್ವಾಮಿಗಳು, ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ, ಸುಜಾತ ದೊಡ್ಡಮನಿ, ಸಿ.ಸಿ. ನೂರಶಟ್ಟರ, ಎಂ.ಬಿ. ಕುರ್ತಕೋಟಿ, ಎಚ್.ಡಿ. ಮಾಗಡಿ, ಮಂಜುನಾಥ ಘಂಟಿ, ಹೊನ್ನಪ್ಪ ಶಿರಹಟ್ಟಿ, ಮುರಗೇಶ ಆಲೂರ ಸೇರಿದಂತೆ ಮಠದ ಭಕ್ತರು ಉಪಸ್ಥಿತರಿದ್ದರು.