Advertisement

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಹರೀಶ್‌ 

08:09 PM Dec 11, 2019 | Team Udayavani |
ಮಡಿಕೇರಿ: ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ವಿಪರೀತವಾಗಿದ್ದು, ಕಾಡಾನೆ ಹಾವಳಿಯಿಂದಾಗಿ ಮಾನವ ಪ್ರಾಣ ಹಾನಿ, ಬೆಳೆ ಹಾನಿ ಉಂಟಾಗುತ್ತಿದ್ದು, ಜನರು ಭಯ ಭೀತಿಯಿಂದ ಬದುಕು ಸಾಗಿಸುವಂತಾಗಿದೆ. ಆದ್ದರಿಂದ ಕೂಡಲೇ ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್‌ ಅವರು ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ನೂತನ ಭವನದಲ್ಲಿ ನಡೆದ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಂಬಂಧ ಮಾಹಿತಿ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ದಯಾನಂದ, ಮತ್ತಿತರರು ಈಗಾಗಲೇ 5 ಕಾಡಾನೆಗಳನ್ನು ಸ್ಥಳಾಂತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.  ಜಿಲ್ಲೆಯ ಲೋಕೋಪಯೋಗಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಯ ರಸ್ತೆಗಳ ಗುಂಡಿಯನ್ನು ಶೀಘ್ರ ಮುಚ್ಚುವಂತೆ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್‌ ಅವರು ನಿರ್ದೇಶನ ನೀಡಿದರು.  ಅಂಬೇಡ್ಕರ್‌, ಬಸವ, ಇಂದಿರಾ ಆವಾಸ್‌ ಯೋಜನೆಯಡಿ ಮನೆಗಳನ್ನು ನಿರ್ಮಿಸಬೇಕಿದೆ. ಆ ನಿಟ್ಟಿನಲ್ಲಿ ಮರಳು ತೆಗೆಯಲು ಅವಕಾಶ ನೀಡಬೇಕು. ಮರಳು ದೊರೆಯುವಂತೆ ನೋಡಿಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಜಿ.ಪಂ. ಅಧ್ಯಕ್ಷರು ನಿರ್ದೇಶನ ನೀಡಿದರು.
ಭತ್ತ ಕೊಯ್ಲು ಕಾರ್ಯ ನಡೆಯುತ್ತಿದ್ದು, ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಜಿ.ಪಂ.ಅಧ್ಯಕ್ಷರು ಸೂಚಿಸಿದರು. ಈ ಕುರಿತು ವಿಷಯ ಪ್ರಸ್ತಾಪಿಸಿದ ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ ಅವರು ಭತ್ತ ಕಟಾವು ಕಾರ್ಯ ನಡೆಯುತ್ತಿದ್ದು, ಕೂಡಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಅವರು ಸಲಹೆ ಮಾಡಿದರು.  ಮಳೆಹಾನಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬೆಳೆ ಹಾನಿ ಪರಿಹಾರ ರೈತರ ಖಾತೆಗೆ ಜಮೆಯಾಗಬೇಕು ಎಂದು ಜಿ.ಪಂ. ಅಧ್ಯಕ್ಷರು ನಿರ್ದೇಶ ನೀಡಿದರು.
ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಶೇಕಡವಾರು ಹೆಚ್ಚಳಕ್ಕೆ ಅಗತ್ಯ ತಯಾರಿ ಮಾಡಬೇಕು. ರಾಜ್ಯದ ರ್‍ಯಾಂಕ್‌ನಲ್ಲಿ 10 ರೊಳಗೆ ಕೊಡಗು ಜಿಲ್ಲೆ ಇರುವಂತೆ ಶ್ರಮಿಸುವಂತೆ ಜಿ.ಪಂ. ಅಧ್ಯಕ್ಷರು ಹೇಳಿದರು.  ಮಾತನಾಡಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ ಅವರು ವಿದ್ಯಾರ್ಥಿಗಳ ಕ್ರೀಯಾಶೀಲತೆ ಮತ್ತು ಚಲನಶೀಲತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಬೆಳಗ್ಗಿನ ವೇಳೆಯಲ್ಲಿ ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ಮಾಡಿದರು. ಸ್ಥಳೀಯ ಗ್ರಾ.ಪಂ., ತಾ.ಪಂ., ಜಿ.ಪಂ. ಸದಸ್ಯರನ್ನು ಆಹ್ವಾನಿಸಿ ಪೋಷಕರ ಸಭೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿ.ಕೆ.ಬೋಪಣ್ಣ ಅವರು ಸಲಹೆ ಮಾಡಿದರು.   ಮಾಹಿತಿ ನೀಡಿದ ಶಿಕ್ಷಣಾಧಿಕಾರಿ ಕಾಶಿನಾಥ್‌ ಅವರು ಈ ಸಂಬಂಧ ಉಪ ನಿರ್ದೇಶಕರ ಗಮನಕ್ಕೆ ತಂದು ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಅವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಿಇಟಿ ಮಾದರಿಯಲ್ಲಿ ತರಬೇತಿ ನೀಡಿ ಫ‌ಲಿತಾಂಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಮರಳು ಸಮಸ್ಯೆ
ಬಡವರು ಮನೆ ನಿರ್ಮಿಸಿಕೊಳ್ಳಲು ಹತ್ತಿರದ ಹೊಳೆ ಬದಿ ಮರಳು ತೆಗೆದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಇದು ಸರಿಯೇ, ಬಡವರು ಮನೆ ನಿರ್ಮಿಸಿಕೊಳ್ಳುವುದಾದರೂ ಹೇಗೆ ಎಂದು ಜಿ.ಪಂ. ಅಧ್ಯಕ್ಷಬಿ.ಎ.ಹರೀಶ್‌ ಅವರು ಪ್ರಶ್ನಿಸಿದರು. ವಿಚಾರ ಪ್ರಸ್ತಾಪಿಸಿದ ಜಿ.ಪಂ.ಉಪಾ«ಕ್ಷೆ ‌ ಲೋಕೇಶ್ವರಿ ಗೋಪಾಲ್‌ ಅವರು ಇಂತಹ ಪ್ರಕರಣಗಳನ್ನು ವಾಪಸ್ಸು ಪಡೆಯುವಂತೆ ಅವರು ಅಧಿಕಾರಿಗೆ ಸೂಚಿಸಿದರು.  ಜಿಲ್ಲೆಯ 17 ಕಡೆಗಳಲ್ಲಿ ಮರಳು ತೆಗೆಯಲು ಅನುಮತಿ ದೊರೆತಿದ್ದು, ಮರಳು ಪಡೆಯಲು ಅವಕಾಶ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರೇಷ್ಮಾ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next