ವಾಷಿಂಗ್ಟನ್ : ಪಾಕಿಸ್ಥಾನ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಮೂಹಗಳ ಮೇಲೆ ಅರ್ಥಪೂರ್ಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಮೆರಿಕ ಖಡಕ್ ಆಗಿ ಹೇಳಿದೆ.
ಮಾತ್ರವಲ್ಲದೆ ಭಾರತದೊಂದಿಗಿನ ಹೆಚ್ಚುತ್ತಿರುವ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪಾಕಿಸ್ಥಾನ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕ ಇಸ್ಲಾಮಾಬಾದ್‌ಗೆ ಬುದ್ಧಿವಾದ ಹೇಳಿದೆ. ಅಮೆರಿಕದ ಈ ನಡೆ ಭಾರತಕ್ಕೆ ದೊರಕಿರುವ ರಾಜತಾಂತ್ರಿಕ ಯಶಸ್ಸು ಎಂದು ತಿಳಿಯಲಾಗಿದೆ.
ಭಾರತೀಯ ವಾಯು ಪಡೆ ನಿನ್ನೆ ಮಂಗಳವಾರ ಪಾಕಿಸ್ಥಾನದೊಳಗೆ ನುಗ್ಗಿ ಅಲ್ಲಿನ ವಿವಿಧೆಡೆಗಳಲ್ಲಿದ್ದ ಉಗ್ರ ಶಿಬಿರಗಳನ್ನು ನಾಶಪಡಿಸಿದ ಬೆನ್ನಿಗೇ ಅಮೆರಿಕ ಪಾಕಿಸ್ಥಾನಕ್ಕೆ ಈ ಬುದ್ಧಿಮಾತು ಹೇಳಿದೆ.
ಅಮೆರಿಕದ ವಿದೇಶ ಸಚಿವ ಮೈಕ್ ಪಾಂಪಿಯೋ ಅವರು ಪಾಕ್ ವಿದೇಶ ಸಚಿವ ಶಾ ಮಹಮೂದ್ ಕುರೇಶಿ ಅವರ ಜತೆಗೆ ಫೋನಿನಲ್ಲಿ ಮಾತನಾಡಿ ಭಾರತದ ವಿರುದ್ಧ ಮಿಲಿಟರಿ ಕ್ರಮ ತೆಗೆದುಕೊಳ್ಳಬೇಡಿ ಎಂದು ಕಟ್ಟುನಿಟ್ಟಾಗಿ ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಕಳೆದ ಫೆ.14ರಂದು ಪುಲ್ವಾಮಾದಲ್ಲಿ ನಡೆದಿದ್ದ ಉಗ್ರ ದಾಳಿಯ ಪ್ರತೀಕಾರವಾಗಿ ಭಾರತ ನಿನ್ನೆ ಪಾಕ್ ಮೇಲೆ ವಾಯು ದಾಳಿ ನಡೆಸಿ ಅಲ್ಲಿನ ಉಗ್ರ ಶಿಬಿರಗಳನ್ನು ನಾಶಪಡಿಸಿ 350ಕ್ಕೂ ಅಧಿಕ ಉಗ್ರರನ್ನು ಬಲಿ ಪಡೆದಿತ್ತು.