ಹುನಗುಂದ: ತಿಂಗಳಿನ ಪ್ರತಿ ಮಂಗಳವಾರ ಒಂದು ತಾಲೂಕಿನ ತಾಲೂಕು ಆಡಳಿತಕ್ಕೆ ಭೇಟಿ ನೀಡಿ ಅಲ್ಲಿನ ಕಂದಾಯ ಇಲಾಖೆಗೆ ಸಂಬಂಧಿಸಿದ ಮತ್ತು ಸಾರ್ವಜನಿಕರ ಹಾಗೂ ಸಿಬ್ಬಂದಿ ಮಧ್ಯದಲ್ಲಿರುವ ಸಮಸ್ಯೆಗಳ ಜತೆಗೆ ಕುಂದುಕೊರತೆಗಳಿಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರದ ಆದೇಶಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿರುವುದಾಗಿ ಜಿಲ್ಲಾಧಿಕಾರಿ ಸುನೀಲಕುಮಾರ ಹೇಳಿದರು.
ಮಂಗಳವಾರ ಇಲ್ಲಿನ ತಹಶೀಲ್ದಾರ್ ಕಚೇರಿಗೆ ಭೇಟಿ ಕಂದಾಯ ಇಲಾಖೆಯ ಗ್ರಾಮಲೆಕ್ಕಾ ಧಿಕಾರಿ, ಆರ್‌ಒ ಸೇರಿದಂತೆ ಉಳಿದ ಸಿಬ್ಬಂದಿಯ ಸಭೆ ನಡೆಸಿ ನಂತರ ಅವರು ಮಾತನಾಡಿದರು.
ಹುನಗುಂದ ತಾಲೂಕು ಆಡಳಿತ ಸಾರ್ವಜನಿಕರಿಗೆ ಇಲಾಖೆ ಮಾಹಿತಿ ಒದಗಿಸುವಲ್ಲಿ ಮತ್ತು ತೀವ್ರಗತಿ ಕೆಲಸ ಮುಗಿಸುವಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂಬ ಮಾಹಿತಿ ಮೇರೆಗೆ ಇಲ್ಲಿ ಸಭೆ ನಡೆಸಲಾಗಿದೆ. ತಾಲೂಕು ಆಡಳಿತದಲ್ಲಿ ಸಣ್ಣ-ಪುಟ್ಟ ವ್ಯಾಜ್ಯ, ಮನವಿ ಪತ್ರಗಳು, ಕೋರ್ಟ್ ಕೇಸ್‌ಗಳನ್ನು ಡಿಸಿ ಮತ್ತು ಎಸಿ ಕಚೇರಿಗೆ ಕಳುಹಿಸದೆ ಇಲ್ಲಿಯೇ ಬಗೆಹರಿಸಿ ಸಂಬಂಧಿ ಸಿದ ಸಾರ್ವಜನಿಕರಿಗೆ ತಕ್ಷಣ ಪರಿಹಾರ ಒದಗಿಸಬೇಕು. ಸದ್ಯ ಎಲ್ಲವೂ ಆನ್‌ಲೈನ್ ಸೇವೆ ಇದ್ದು, ಸರ್ಕಾರದ ಯೋಜನೆಗಳ ಸೌಲಭ್ಯಕ್ಕಾಗಿ ಬಂದ ಸಾರ್ವಜನಿಕರನ್ನು ಅಲೆದಾಡಿಸದೆ ತಕ್ಷಣ ಮಾಹಿತಿ ಒದಗಿಸಿ ಅವರ ಕೆಲಸ ಮುಗಿಸಬೇಕು.
ತಪ್ಪಿದ್ದಲ್ಲಿ ಅಂತಹ ಸಿಬ್ಬಂದಿ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ನದಿ ದಡದಲ್ಲಿರುವ ಕೆಲವು ಗ್ರಾಮಗಳಲ್ಲಿ ಸ್ಮಶಾನದ ತೊಂದರೆ ಇದ್ದು, ಅಲ್ಲಿನ ಸ್ಥಳದ ಮತ್ತು ಇಲಾಖೆ ಮಾಹಿತಿ ಪಡೆದು ಕ್ರಮ ಜರುಗಿಸಬೇಕು ಎಂದು ಉಪ ವಿಭಾಗಾಧಿಕಾರಿ ಶ್ವೇತಾ ಬೀಡೀಕರ ಅವರಿಗೆ ಸೂಚಿಸಿದರು.
ಪ್ರವಾಹ ಮುನ್ನೆಚ್ಚರಿಕೆ ಕ್ರಮ: ಕಳೆದ ಒಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿದೆ. ಮೇಲಿನ ಜಲಾಶಯಗಳ ಹೊರ ಹರಿವಿನಿಂದ ಆಲಮಟ್ಟಿ ಜಲಾಶಯಕ್ಕೆ 1ಲಕ್ಷ ಕ್ಯೂಸೆಕ್ ನೀರು ಬರುತ್ತಿದೆ. ಇದರಿಂದ ನಮ್ಮ ತಾಲೂಕಿನ ನದಿದಡ ಪ್ರದೇಶದ ಗ್ರಾಮಗಳಿಗೆ ಮತ್ತು ಜನರಿಗೆ ತೊಂದರೆ ಇರುವುದಿಲ್ಲ. ಆದಾಗ್ಯೂ ಸಹಿತ ಅಲ್ಲಿ ಟಾಸ್ಕ್ಪೋರ್ಸ್ ತಂಡವನ್ನು ರಚಿಸಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಡಿಸಿ ಸನೀಲಕುಮಾರ ವಿವರಿಸಿದರು.
ಈಗಾಗಲೆ ಮಲಪ್ರಭೆ ಯಿಂದ 26, ಮತ್ತು ಕೃಷ್ಣೆ ನದಿ ಪಾತ್ರದಿಂದ 6 ಗ್ರಾಮಗಳು ಸೇರಿ ಒಟ್ಟು ಮುಳುಗಡೆಯಾದ 31ಗ್ರಾಮಗಳ ಪೈಕಿ 21ಗ್ರಾಮಗಳು ಸಂಪೂರ್ಣವಾಗಿ ಪುನರ್ ವಸತಿ ಕೇಂದ್ರಗಳಾಗಿವೆ. ಆದರೆ, ಅಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿವೆ. ಆದರೆ ಇನ್ನುಳಿದ 9 ಗ್ರಾಮಗಳು ಪುನರ್ ವಸತಿ ಕೇಂದ್ರಗಳಾಗಬೇಕಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿ ಸುನಿಲಕುಮಾರ ಮಾಹಿತಿ ಒದಗಿಸಿದರು.
ಸೌಲಭ್ಯಗಳ ಕೊರತೆ-ಡಿಸಿ ಗರಂ: ತಹಶೀಲ್ದಾರ ಕಚೇರಿ ಒಳಗೆ ಮತ್ತು ಹೊರಗೆ ವ್ಯವಸ್ಥೆ ಹದಗೆಟ್ಟಿದೆ ಎಂಬ ಸಾರ್ವಜನಿಕ ದೂರಿಗೆ ಸಿಬ್ಬಂದಿಗೆ ಮೂತ್ರ ಮತ್ತು ಶೌಚಾಲಯದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆಗೆ ಸ್ಥಳ, ಕಚೇರಿ ಮುಂದೆ ಬಿದ್ದಿರುವ ಸರ್ಕಾರಿ ನಾಮಫಲಕಗಳ ದುರಸ್ತಿ ಸಾರ್ವಜನಿಕರಿಗೆ ಶೌಚಾಲಯ, ಕಚೇರಿ ಸುತ್ತ ಸ್ವತ್ಛತೆ ಮತ್ತು ಕಾಂಪೌಂಡ್, ಸುಸಜ್ಜಿತ ಉಪಹಾರ ಮತ್ತು ಊಟದ ಕ್ಯಾಂಟೀನ್ ವ್ಯವಸ್ಥೆ ಹೀಗೆ ಹತ್ತು ಹಲವಾರು ಮೂಲಭೂತ ಸೌಕರ್ಯ ಒದಗಿಸಬೇಕೆಂದು ಜಿಲ್ಲಾ ಧಿಕಾರಿಗಳು ಶಿರಸ್ತೇದಾರರಿಗೆ ತಿಳಿಸಿದರು. ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಇದ್ದರು.