ಬೆಂಗಳೂರು: ರಿಫೈನ್ಡ್ ಆಯಿಲ್‌ಗಾಗಿ ಈಗ ಮಾರುಕಟ್ಟೆಗೆ ಹೋಗಬೇಕಿಲ್ಲ. ಅಡುಗೆಗೆ ಬೇಕಾದಷ್ಟು ಎಣ್ಣೆಯನ್ನು ಮನೆಯಲ್ಲೇ, ಕೆಲವೇ ನಿಮಿಷಗಳಲ್ಲಿ ಅರೆದು ತೆಗೆಯಬಹುದು! ಇದನ್ನು ಸಾಧ್ಯವಾಸಿರುವುದು “ಸೀಡ್ಸ್ ಟು ಆಯಿಲ್’ ಎಂಬ ಚಿಕ್ಕಗಾತ್ರದ ಯಂತ್ರ. ಇದರಲ್ಲಿ ಸುಮಾರು 27 ವಿಧದ ಎಣ್ಣೆಕಾಳುಗಳನ್ನು ಅರೆದು, ಎಣ್ಣೆ ತೆಗೆಯಬಹುದು.
ಅದೂ ಕೂಡ ಕೆಲವೇ ನಿಮಿಷಗಳಲ್ಲಿ. ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಸಾವಯವ-ಸಿರಿಧಾನ್ಯಗಳ ವಾಣಿಜ್ಯ ಮೇಳದಲ್ಲಿ ಈ ಯಂತ್ರವನ್ನು ಕಾಣಬಹುದು. ಹೆಚ್ಚು-ಕಡಿಮೆ ಮಿಕ್ಸರ್ ಗೆùಂಡರ್ ಗಾತ್ರದ ಈ ವಿದ್ಯುತ್‌ಚಾಲಿತ ಗಾಣವನ್ನು ಎಲ್ಲಿಗಾದರೂ ಕೊಂಡೊಯ್ಯಬಹುದು.
ಒಂದು ಗಂಟೆಗೆ ಸುಮಾರು ಎರಡು ಲೀಟರ್ ಎಣ್ಣೆಯನ್ನು ಈ ಗಾಣದಿಂದ ಉತ್ಪಾದಿಸಬಹುದು. ಹೀಗೆ ಅರೆದು ತೆಗೆಯುವ ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಕಣ್ಮುಂದೆಯೇ ಕಲಬೆರಕೆರಹಿತ, ಪರಿಶುದ್ಧ ಎಣ್ಣೆ ಸಿಗಲಿದೆ. ಅಷ್ಟೇ ಅಲ್ಲ, ಈ ಎಣ್ಣೆಕಾಳುಗಳ ಸಿಪ್ಪೆಯನ್ನು ನಂತರದಲ್ಲಿ “ಸ್ನ್ಯಾಕ್ಸ್’ ರೂಪದಲ್ಲಿ ಸವಿಯಬಹುದು ಎಂದು ಯಂತ್ರದ ವಿತರಕ ನಿತಿನ್ ಕೋರಾ ಮಾಹಿತಿ ನೀಡಿದರು.
ಒಮ್ಮೆಲೆ ಒಂದು ಕೆಜಿ ಎಣ್ಣೆಕಾಳು ಅರೆಯುವ ಸಾಮರ್ಥ್ಯವನ್ನು ಯಂತ್ರ ಹೊಂದಿದ್ದು, ಮೇಲೆ ಕಾಳುಗಳನ್ನು ಹಾಕಿದರೆ, ಒಂದೆಡೆ ಎಣ್ಣೆ ಮತ್ತೂಂದೆಡೆ ಸಿಪ್ಪೆ ಬರುತ್ತದೆ. ಇದರ ಬೆಲೆ 22 ಸಾವಿರ ರೂ. ಹತ್ತು ವರ್ಷಕ್ಕೊಮ್ಮೆ ಇದರ ಕ್ರಷಿಂಗ್ ಬಾರ್ ಬದಲಾಯಿಸುವುದು ಬಿಟ್ಟರೆ ನಿರ್ವಹಣೆ ಕಿರಿಕಿರಿ ಇಲ್ಲ.
ಮೂರು ತಾಸು ನಿರಂತರವಾಗಿ ಈ ಯಂತ್ರ ಚಾಲನೆಯಲ್ಲಿದ್ದರೆ, ಕೇವಲ 1 ಯೂನಿಟ್ ವಿದ್ಯುತ್ ಖರ್ಚಾಗುತ್ತದೆ. ಒಂದು ಕೆಜಿ ಶೇಂಗಾ (ಕಡಲೆಬೀಜ) ಅರೆದರೆ, ಅರ್ಧ ಲೀ. ಎಣ್ಣೆ ಬರುತ್ತದೆ. ಸಾಮಾನ್ಯವಾಗಿ ಹೊರಗಡೆ ಗಾಣಗಳಲ್ಲಿ 3 ಕೆಜಿ ಎಣ್ಣೆ ಕಾಳು ಅರೆದರೆ, ಒಂದು ಕೆಜಿ ಎಣ್ಣೆ ಬರುತ್ತದೆ.
ಇಲ್ಲಿ ಎರಡು ಕೆಜಿ ಕಾಳಿನಲ್ಲಿ ಒಂದು ಲೀ. ಎಣ್ಣೆ ತೆಗೆಯಬಹುದು ಎಂದು ವಿವರಿಸಿದರು. ಮಾರುಕಟ್ಟೆಯಲ್ಲಿ ಯಂತ್ರಕ್ಕೆ ಭಾರೀ ಬೇಡಿಕೆಯಿದ್ದು, ಬೆಂಗಳೂರಿನಲ್ಲೇ 1,800 ಯಂತ್ರಗಳು ಮಾರಾಟವಾಗಿವೆ. ತಿಂಗಳಿಗೆ ಸರಾಸರಿ 500 ಯಂತ್ರ ಮಾರಾಟವಾಗುತ್ತಿವೆ. ಕೊಯಮತ್ತೂರು ಮೂಲದ ಕಂಪನಿ ಈ ಯಂತ್ರವನ್ನು ರೂಪಿಸಿದೆ.