Advertisement

ರಾಜ್ಯ ಸರಕಾರದ ಆಡಳಿತಕ್ಕೆ  ಕೈಗನ್ನಡಿ: ಎಚ್‌ಡಿಕೆ

08:50 AM Jul 31, 2017 | Team Udayavani |

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಸ್ತಿತ್ವಕ್ಕೆ ಬಂದು 4 ವರ್ಷಗಳಾದರೂ ಮರಳು ನೀತಿ ರೂಪಿಸಲಾಗಿಲ್ಲ. ಇದರಿಂದಾಗಿ ಬಡ, ಮಧ್ಯಮ ವರ್ಗ ಸಂಕಷ್ಟ ಎದುರಿಸು ವಂತಾಗಿದೆ. ಕಾಂಗ್ರೆಸ್‌ ಸರಕಾರದ ಆಡಳಿತಕ್ಕೆ ಇದುವೇ ಕೈಗನ್ನಡಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಹೇಳಿದರು.

Advertisement

ಉಡುಪಿಯಲ್ಲಿ ಜಿಲ್ಲಾಧಿಕಾರಿಗಳ ಮೇಲೆಯೇ ಹಲ್ಲೆಯಾಗುತ್ತದೆ. ಇಷ್ಟಾದರೂ ಸರಕಾರದ ಕಣ್ಣು ತೆರೆದಿಲ್ಲ. ಸಮಾಜದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಕ್ರಮ ಕೈಗೊಳ್ಳುವುದು ಮುಖ್ಯ ಎಂದರು.

“ರಾಜಕೀಯ-ಅಭಿವೃದ್ಧಿ ಕುಂಠಿತ’
ಕರಾವಳಿಯಲ್ಲಿ ರೈಲು, ವಿಮಾನ, ಹಡಗು ನಿಲುಗಡೆ ತಾಣಗಳಿವೆ. ಎಲ್ಲ ಮೂಲಸೌಕರ್ಯಗಳಿರುವುದರಿಂದ ಬೆಂಗಳೂರಿನಷ್ಟೇ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದಬಹುದಿತ್ತು. ಆದರೆ ಕರಾವಳಿಯಲ್ಲಿ 2 ರಾಷ್ಟ್ರೀಯ ಪಕ್ಷಗಳು ಜನರ ಭಾವನಾತ್ಮಕ ವಿಷಯಗಳಿಗೆ ಆದ್ಯತೆ ಕೊಟ್ಟು, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಜನರ ಮತ ಸೆಳೆಯುತ್ತಿದ್ದಾರೆ. ಇದರಿಂದಾಗಿಯೇ ಅಭಿವೃದ್ಧಿ ಕುಂಠಿತ ವಾಗಿದೆ ಎಂದರು.

ಕೆಂಪಯ್ಯ ಗೃಹಮಂತ್ರಿ!
ಬಂಟ್ವಾಳದಲ್ಲಿ 50ಕ್ಕೂ ಅಧಿಕ ದಿನ ನಿಷೇಧಾಜ್ಞೆ ಹಾಕಿರುವುದೇ ಈ ಸರಕಾರದ ಐತಿಹಾಸಿಕ ಸಾಧನೆ. ಗುಜರಾತಿನಿಂದ ಬಂದ ಶಾಸಕರಿಗೆ ರೆಸಾರ್ಟ್‌ನಲ್ಲಿ ಭದ್ರತೆ ಒದಗಿಸುವ ಈ ಸರಕಾರ, ಮಂಗಳೂರಿನಲ್ಲಿ ನಡೆದ ಗಲಭೆಯ ವೇಳೆ ಸೂಕ್ತವಾದ ರಕ್ಷಣೆ ಒದಗಿಸಿಲ್ಲ. ರಾಜ್ಯದ ಗೃಹ ಇಲಾಖೆಗೆ ಕೆಂಪಯ್ಯ ಅವರೇ ಮಂತ್ರಿಯಾಗಿದ್ದಾರೆ ಎಂದು ಎಚ್‌ಡಿಕೆ ಹೇಳಿದರು.

ಕಾಂಗ್ರೆಸ್‌ ಹೈಜಾಕ್‌ ಮಾಡಿಲ್ಲವೇ?
ಕಳೆದ ವರ್ಷ ರಾಜ್ಯಸಭೆ ಚುನಾವಣೆ ವೇಳೆ ಜೆಡಿಎಸ್‌ನ 8 ಮಂದಿಯನ್ನು ಕಾಂಗ್ರೆಸ್‌ ಹೈಜಾಕ್‌ ಮಾಡಿಲ್ಲವೇ? 2001-02ರಲ್ಲಿ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯಸಭೆಗೆ ಮತ ಪಡೆಯಲು ಈ ಕಾಂಗ್ರೆಸ್‌ನವರು ಏನು ಮಾಡಿದ್ದರು ಎನ್ನುವುದನ್ನು ಮನನ  ಮಾಡಿಕೊಳ್ಳಲಿ. ಅದನ್ನೇ ಇಂದು ಗುಜರಾತ್‌ನಲ್ಲಿ ಬಿಜೆಪಿಯವರು ಮಾಡುತ್ತಿದ್ದಾರೆ. ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡಲು ಕಾಂಗ್ರೆಸ್‌ಗೆ ನೈತಿಕತೆಯೇ ಇಲ್ಲ. ಮಾಡಿದ್ದುಣ್ಣೋ ಮಹಾರಾಯ ಎನ್ನುವಂತಾಗಿದೆ ಎಂದರು.

Advertisement

“ಡಬಲ್‌ಗೇಮ್‌’ ಶಾಸಕರು
ಮಂಗಳೂರಿನ ರಸ್ತೆಯೊಂದಕ್ಕೆ ಮೂಲ್ಕಿ ಸುಂದರರಾಮ್‌ ಶೆಟ್ಟಿ ಹೆಸರಿಡಲು ಸರಕಾರವೇ ತಡೆಯಾಜ್ಞೆ ನೀಡುತ್ತದೆ ಎಂದರೆ ಏನನ್ನುವುದು. ಮಂಗಳೂರಿನ ಶಾಸಕರು ಡಬಲ್‌ಗೇಮ್‌ ಆಡುತ್ತಿದ್ದಾರೆ. ಇದರಿಂದ ಸಮಸ್ಯೆ ಉದ್ಭವಿಸಿದೆ ಎಂದರು.

ರಾಜ್ಯದ 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಹಾಕುವ ಕುರಿತು ಚರ್ಚಿಸಲಾಗುತ್ತಿದೆ. ಲಿಂಗಾಯತ ಧರ್ಮದ ವಿಚಾರ ಧಾರ್ಮಿಕ ಮುಖಂಡರಿಗೆ ಬಿಟ್ಟು ಬಿಡಲಿ. ಸರಕಾರ ಕೈ ಹಾಕಬಾರದು. ಈಗ ನಾಲ್ಕು ದಿನಗಳ ಕೆಸೆರೆರಚಾಟಕ್ಕೆ ವೇದಿಕೆಯಾಗುತ್ತದೆ ಅಷ್ಟೇ. ಚುನಾವಣಾ ಲೆಕ್ಕಾಚಾರ ಏನೇ ಇದ್ದರೂ ಯಾರಿಗೂ ಇದರಿಂದ ಲಾಭ-ನಷ್ಟ ಇಲ್ಲ. ಕನ್ನಡಕ್ಕೆ ಧ್ವಜ ಇದೆ. ಪ್ರತ್ಯೇಕ ಧ್ವಜ ಸಮಿತಿ ರಚಿಸುವ ಅಗತ್ಯವೇ ಇರಲಿಲ್ಲ. ಕಳೆದ 4 ವರ್ಷ ದಿಂದ ಪ್ರತೀ ವರ್ಷ ರಾಜ್ಯ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಶೇ. 50ರಷ್ಟು ಹಣವೂ ಬಳಕೆಯಾಗಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಮುಖಂಡರಾದ ಎಸ್‌.ಎಲ್‌. ಭೋಜೇಗೌಡ, ಯೋಗೀಶ್‌ ವಿ. ಶೆಟ್ಟಿ ಬಾಲಾಜಿ, ವಾಸುದೇವ ರಾವ್‌, ಶಾಲಿನಿ ಶೆಟ್ಟಿ ಕೆಂಚನೂರು, ಮನ್ಸೂರ್‌ ಇಬ್ರಾಹಿಂ ಬೈಂದೂರ್‌, ಅನಿತಾ, ಸುಧಾಕರ ಶೆಟ್ಟಿ ಹೆಜಮಾಡಿ, ಇಸ್ಮಾಯಿಲ್‌ ಪಲಿಮಾರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next