Advertisement

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೆರವಿಗೆ ಮುಂದಾಗಿ

04:25 PM Jun 11, 2017 | Team Udayavani |

ಕಲಬುರಗಿ: ನಗರದಲ್ಲಿನ ಕೋಟೆ ಹಾಗೂ ಪುರಾತತ್ವ ಇಲಾಖೆಗೆ ಸೇರಿದ ಕಟ್ಟಡಗಳ ಬಳಿ ಇರುವ ವಾಸಿಗಳ ತೆರವಿಗೆ ಮುಂದಾಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವ, ಹಾಲಿ ಶಾಸಕ ಖಮರುಲ್‌ ಇಸ್ಲಾಂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎರಡು ನೇೂಟಿಸ್‌ ನೀಡಲಾಗಿದೆ. ಈಗ ಮೊರನೇಯದಾಗಿ ನೀಡಲಾಗುತ್ತಿದೆ. ಈಗ ತೆರವು ಮಾಡಬೇಕೆಂದು ಇದೇ ಅಂತಿಮ ನೋಟಿಸ್‌ ಎಂದು ಹೇಳಿರುವುದು ವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೆ ದಿಢೀರ್‌ ಕ್ರಮಕ್ಕೆ ಮುಂದಾಗಿರುವುದು ಸರಿಯಾದುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ವರೆಗೆ ನಗರದ ಹಫ್ ಗುಂಬಜ್‌ ಮತ್ತು ಕೋಟೆಯೊಳಗಿನ ಒತ್ತುವರಿ, ನಿಷೇಧಿತ ಪ್ರದೇಶದಲ್ಲಿ ತಲೆ ಎತ್ತಿರುವ ಕಟ್ಟಡಗಳನ್ನು ತೆರವುಗೊಳಿಸಬಾರದು ಎಂದು ಹೇಳಿದರು.

ಐತಿಹಾಸಿಕ ಸ್ಮಾರಕದೊಳಗೆ ಹಾಗೂ ಬಳಿ ಒತ್ತುವರಿ ಮಾಡಲಾಗಿದೆಯೆಂದು ಪುರಾತತ್ವ ಇಲಾಖೆ ನಿಷೇಧಿತ ಪ್ರದೇಶದಲ್ಲಿನ ಕಟ್ಟಡಗಳ ತೆರವು ಕುರಿತಂತೆ 250ಕ್ಕೂ ಹೆಚ್ಚು ಜನರಿಗೆ ಮಹಾನಗರ ಪಾಲಿಕೆ ನೋಟಿಸ್‌ ಜಾರಿ ಮಾಡಿದೆ. ಹಫ್ ಗುಂಬಜ್‌ ನಿಷೇಧಿತ ಪ್ರದೇಶದಲ್ಲಿ ಅನುಮತಿ ಇಲ್ಲದೆ ಕಟ್ಟಡ ನಿರ್ಮಿಸಲಾಗಿದ್ದು, ಪುರಾತತ್ವ ಇಲಾಖೆ ಸೂಚಿಸಿದರೂ ತೆರವುಗೊಳಿಸಿಲ್ಲ.

ಆದರೆ ಕೇಂದ್ರ ಪುರಾತತ್ವ ಇಲಾಖೆ ನಿರ್ದೇಶಕ ನವನೀತ್‌ ಸೋನಿ ಅವರ ತಂಡ ಇತ್ತೀಚೆಗೆ ಕೋಟೆ ಇತರೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅನಧಿಕೃತ ಕಟ್ಟಡ ತೆರವಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪಾಲಿಕೆ ಈ ಕಾರ್ಯಕ್ಕೆ ಮುಂದಾಗಿದೆ. ಸ್ವಯಂಪ್ರೇರಣೆಯಿಂದ ತೆರವುಗೊಳಿಸದಿದ್ದರೆ ನಿಮ್ಮ ಖರ್ಚಿನಲ್ಲೇ ಕಾರ್ಯಾಚರಣೆ ಕೈಗೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

Advertisement

ಸಭೆ ಕರೆಯಲಿ: ಪುರಾತತ್ವ ಇಲಾಖೆ ಅಧಿಕಾರಿಗಳವರು, ಜಿಲ್ಲಾಧಿಕಾರಿಗಳು, ಸಂಸದರು, ಮಂತ್ರಿಗಳು, ಶಾಸಕರ ಸಭೆ ಕರೆದು ಸಮಗ್ರ ಚರ್ಚೆ ನಡೆಸಬೇಕು. ಕಾಯಿದೆಯಲ್ಲಿ ಲಭ್ಯವಿರುವ ಅಂಶಗಳ ಬಗ್ಗೆ ಪರಿಶೀಲನೆ ನಡೆಸಬೇಕು. 

ಎಲ್ಲ ಜಾತಿ, ಜನಾಂಗ, ಮಸೀದಿ, ಮಂದಿರ, ಖಾಸಗಿ, ಸರ್ಕಾರಿ ಆಸ್ತಿಗಳು ಇದರಲ್ಲಿ ಸೇರಿವೆ. ಇದೊಂದು ಸೂಕ್ಷ್ಮ ವಿಷಯ. ಹೀಗಾಗಿ ಯಾವುದೇ ಕಾರಣಕ್ಕೂ ತರಾತುರಿ ಬೇಡ. ಪೂರ್ವಾಪರ ಚಿಂತನೆ ನಡೆಸಿದ ಬಳಿಕವೇ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. 

ಅಗತ್ಯ ಬಿದ್ದರೆ ರಾಜ್ಯದಲ್ಲಿರುವ ಕೇಂದ್ರದ ಸಚಿವರು, ಸಂಸದರು, ಶಾಸಕರ ನಿಯೋಗ ದಿಲ್ಲಿಗೆ ತೆರಳಿ ಸಂಬಂಧಿತ ಸಚಿವರು, ಪ್ರಧಾನಿಯವರನ್ನು ಭೇಟಿ ಮಾಡಿ ವಾಸ್ತವದ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಮಹಾಪೌರ ಶರಣಕುಮಾರ ಮೋದಿ, ಕುಡಾ ಅಧ್ಯಕ್ಷ ಮಹ್ಮದ್‌ ಅಸಗರ್‌ ಚುಲ್‌ಬುಲ್‌, ಮಾಜಿ ಮೇಯರ್‌ ಭೀಮರಡ್ಡಿ ಪಾಟೀಲ್‌ ಕುರಕುಂದಾ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next