Advertisement

ರಸ್ತೆ ಸುರಕ್ಷತೆಗೆ ಕಾಳಜಿ ವಹಿಸಿ

08:16 AM Jun 11, 2019 | Team Udayavani |

ಕಾರವಾರ: ಉಕ ಜಿಲ್ಲೆಯಲ್ಲಿ ನಡೆದಿರುವ ರಾಹೆ -66ರ ಅಗಲೀಕರಣ ಸಂಬಂಧ ವಾಹನ ಸಂಚರಿಸುವ ರಸ್ತೆ ಬದಿಯ ಗುಡ್ಡಗಳ ಬ್ಲಾಸ್ಟಿಂಗ್‌, ಬಂಡೆಗಳ ಸಾಗಾಟ, ಕಡಿದಾದ ರಸ್ತೆಯಲ್ಲಿ ಮಣ್ಣು ಸಾಗಾಟ ಸೇರಿದಂತೆ, ರಸ್ತೆಯ ಡಾಂಬರೀಕರಣ ಕಾಮಗಾರಿಗಳನ್ನು ಮಳೆಗಾಲದಲ್ಲಿ ನಿಲ್ಲಿಸುವಂತೆ ಐಡಲ್ ರೋಡ್‌ ಬಿಲ್ಡರ್ ಕಂಪನಿಗೆ ಕಾರವಾರ ತಾಲೂಕು ಸಹಾಯಕ ಕಮಿಷನರ್‌ ಕಡಕ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಹೆದ್ದಾರಿಯಲ್ಲಿ ಕಾಮಗಾರಿಯಿಂದ ಜನರ ಜೀವ ಹಾನಿಯಾದರೆ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.

ಹೆದ್ದಾರಿ ಕಾಮಗಾರಿ ಪ್ರದೇಶದಲ್ಲಿ ರಸ್ತೆ ತಿರುವುಗಳಿದ್ದರೆ, ಕ್ರಮಬದ್ಧ ನಾಮಫಲಕ ಮತ್ತು ಕಡಿದಾದ ರಸ್ತೆಗಳಿದ್ದಲ್ಲೆ ಬ್ಯಾರಿಕೇಡ್‌ಗಳನ್ನು ಹಾಕುವುದನ್ನು ಕಡ್ಡಾಯ ಮಾಡಲಾಗಿದೆ. ಸಂಚರಿಸುವ ವಾಹನಗಳಿಗೆ ರಸ್ತೆ ಅಗಲೀಕರಣ ಕಾಮಗಾರಿ ಕಾರಣವಾಗಿ ಹಾನಿಯಾದರೂ ಪರಿಹಾರವನ್ನು ಐಆರ್‌ಬಿ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪರಿಣಾಮವಾಗಿ ಐಆರ್‌ಬಿ ರಸ್ತೆ ಅಗಲೀಕರಣ ನಿಮಿತ್ತ ಅರ್ಗಾ ಸಂಕ್ರುಭಾಗ, ಅಮದಳ್ಳಿ ಘಟ್ಟದಲ್ಲಿನ ಗುಡ್ಡ ಕಡಿದು, ರಸ್ತೆ ಅಗಲೀಕರಣ ಕಾಮಗಾರಿಯನ್ನು ಮಳೆಗಾಲ ಮುಗಿಯುವ ತನಕ ನಿಲ್ಲಿಸಿದೆ. ಕಾರವಾರ ಬಳಿಯ ಎರಡನೇ ಸುರಂಗ ಕಾಮಗಾರಿಗೆ ಸಹ ಬ್ರೇಕ್‌ ಬಿದ್ದಿದೆ.

ಫ್ಲೈಓವರ್‌ ಪಿಲ್ಲರ್‌ ಕಾಮಗಾರಿ ಮುಂದುವರಿದಿದೆ: ಕಾರವಾರ ನಗರದಲ್ಲಿ ಲಂಡನ್‌ ಬ್ರಿಜ್‌ನಿಂದ ಆರ್‌ಟಿಒ ಕಚೇರಿವರೆಗೆ 1.5 ಕಿ.ಮೀ. ಉದ್ದದ ಫ್ಲೈಓವರ್‌ ಕಾಮಗಾರಿ ಮಾತ್ರ ಮುಂದುವರಿದಿದೆ. 18 ತಿಂಗಳಲ್ಲಿ ಫ್ಲೈಓವರ್‌ ಕಾಮಗಾರಿ ಮುಗಿಸಬೇಕಿದ್ದು, ಮಳೆಗಾಲದಲ್ಲಿ ಪಿಲ್ಲರ್‌ ಎತ್ತರಿಸುವ ಕಾಮಗಾರಿಗೆ ಅನುಕೂಲಕರ ವಾತಾವರಣ ಇರುವ ಕಾರಣ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಬ್ಯಾರಿಕೇಡ್‌ ಹಾಕಿ ಕೆಲಸ ಮುಂದುವರಿಸುವ ಲಕ್ಷಣಗಳಿವೆ. ಫ್ಲೈಓವರ್‌ ಸಂಬಂಧ ಶೇ.35 ರಷ್ಟು ಕಾಮಗಾರಿ ಮುಗಿದಿದ್ದು, ಉಳಿದವು ಚಾಲ್ತಿಯಲ್ಲಿವೆ. ಡಿಸಿ ಕಚೇರಿ ಎದುರಿನ ದ್ವಿಪಥ ರಸ್ತೆಯಲ್ಲಿ ಒಂದು ಭಾಗದ ಕಾಮಗಾರಿ ನಡೆಯುವ ಸಂಬಂಧ ಮುಚ್ಚಲಾಗಿದ್ದು, ವಾಹನ ಸಂಚಾರಕ್ಕೆ ಸರ್ವೀಸ್‌ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ಬಿಟ್ಟುಕೊಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಮೀಪ ಒಂದು ರಸ್ತೆ ಎತ್ತರದಲ್ಲಿ, ಮತ್ತೂಂದು ರಸ್ತೆ ಕೆಳ ಮಟ್ಟದಲ್ಲಿದ್ದು, ವಾಹನ ಸವಾರರು ರಸ್ತೆ ಸಮತಟ್ಟಾಗಿದೆ ಎಂದು ತಿಳಿದು ತಗ್ಗಿದ್ದ ರಸ್ತೆಗೆ ವಾಹನ ಇಳಿಸಿ ಪರದಾಡುತ್ತಿದ್ದ ಘಟನೆಗಳನ್ನು ತಡೆಯಲು ಸಂಚಾರಿ ಪೊಲೀಸರು ಐಆರ್‌ಬಿ ನೆರವಿನೊಂದಿಗೆ ಅಲ್ಲಲ್ಲಿ ಬ್ಯಾರಿಕೇಡ್‌ ಹಾಕಿ ಸಂಚರಿಸ ಬೇಕಾದ ರಸ್ತೆಗೆ ಮಾರ್ಗಗಳನ್ನು ತೋರಿಸಿದ್ದಾರೆ. ಇದು ಮಳೆಗಾಲದ ಅನಾಹುತಗಳಿಗೆ ಕಡಿವಾಣ ಹಾಕಬಹುದೆಂದು ಊಹಿಸಲಾಗಿದೆ.

Advertisement

ನಾಲ್ಕು ವರ್ಷದ ಹಿಂದೆ ಆರಂಭ: ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣ ಕಾಮಗಾರಿ ಆರಂಭವಾದುದು ನಾಲ್ಕು ವರ್ಷಗಳ ಹಿಂದೆ. ಕಾರವಾರ ಲಂಡನ್‌ ಬ್ರಿಜ್‌ನಿಂದ ಆರಂಭವಾಗುವ ಸುರಂಗ ಮಾರ್ಗಗಳಲ್ಲಿ ಒಂದು ಮಾತ್ರ ಪೂರ್ಣಗೊಂಡಿದೆ. ಇನ್ನೊಂದು ಸುರಂಗದಲ್ಲಿ ಹಾದು ಹೋಗುವ ರಸ್ತೆಗೆ ಗುಡ್ಡದಲ್ಲಿ 25 ಮೀಟರ್‌ ಸುರಂಗ ಕೊರೆಯುವ ಕಾಮಗಾರಿ ಬಾಕಿ ಇದೆ. ಅಲ್ಲದೇ ಅರ್ಗಾದಲ್ಲಿ ಖಾಸಗಿ ಕಲ್ಲುಕ್ವಾರಿ ಮತ್ತು ಅರಣ್ಯ ಭೂಮಿ ಸಂಬಂಧ ಕ್ವಾರಿ ಆಚೆಯ 3 ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿ ಲಭ್ಯವಿದ್ದರೂ ಐಆರ್‌ಬಿ ಕೆಲಸ ಮಾಡಿಲ್ಲ. ಬಿಣಗಾದಲ್ಲಿ ಸುರಂಗದ ಆಚೆಯ 3 ಕಿ.ಮೀ.ರಸ್ತೆಗೆ ಭೂಮಿ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದರೂ ಕಾಮಗಾರಿ ಮಾಡದೇ ಐಆರ್‌ಬಿ ಆಮೆಗತಿ ಕೆಲಸ ಹಲವು ಸಂಶಯ ಮೂಡಿಸಿದೆ.

ಭಟ್ಕಳದಿಂದ ಕಾರವಾರದ ಮಾಜಾಳಿವರೆಗಿನ 112 ಕಿ.ಮೀ. ರಸ್ತೆಯ ಅಗಲೀಕರಣದ, 1655 ಕೋಟಿ ರೂ. ವೆಚ್ಚದ ಈ ಕಾಮಗಾರಿಯಲ್ಲಿ ನದಿಗಳಿಗೆ ಬರುವ ಬಹುತೇಕ ಸೇತುವೆಗಳ ನಿರ್ಮಾಣ ಮುಗಿದಿದೆ. ಗೋವಾ ಗಡಿಭಾಗದಿಂದ ಕಾರವಾರ ಆರ್‌ಟಿಒ ಕಚೇರಿವರೆಗಿನ ರಸ್ತೆ ಚತುಷ್ಪಥ ಕಾಮಗಾರಿ ಸಹ ಮುಗಿದಿದ್ದು, ಫ್ಲೈಓವರ್‌ ಕಾಮಗಾರಿ ಮುಗಿಯಲು ಇನ್ನೊಂದು ವರ್ಷ ಬೇಕಾಗಬಹುದು. ಸುರಂಗ ಕಾಮಗಾರಿ ಮಳೆಗಾಲದ ನಂತರ ಮೂರು ತಿಂಗಳಲ್ಲಿ ಮುಗಿಯಲಿದೆ. ಚಿತ್ತಾಕುಲಾ ಭಾಗದಲ್ಲಿ 2 ಕೋಟಿ ರೂ. ಪರಿಹಾರ ನೀಡಲು ಹಣ ಬಾಕಿ ಇದ್ದರೂ, ಭೂಮಿಯ ವಾರಸುದಾರರು ಸಿಗದ ಕಾರಣ ಭೂಮಿಯನ್ನು ವಶಪಡಿಸಿಕೊಂಡು, ವಾರಸುದಾರರ ಹೆಸರಿಗೆ ಅವಾರ್ಡ್‌ ಮಾಡಿ, ಅವರ ಪಾಲಿನ ಹಣ ಕಾಯ್ದಿಟ್ಟು ಕಾಮಗಾರಿಗೆ ಅನುಕೂಲ ಮಾಡಿಕೊಡಲಿದೆ. ಕಾರವಾರದಿಂದ ಅಮದಳ್ಳಿವರೆಗೆ ರಸ್ತೆ ಚತುಷ್ಪಥ ಪೂರ್ಣವಾಗುವಾಗ ಖಾಸಗಿಯವರ ಒಂದು ತುಣುಕು ಭೂಮಿ ಹೋದರೂ ಅವರಿಗೆ ಪರಿಹಾರ ಸಿಗುವಂತೆ ಲೆಕ್ಕಹಾಕಿ, ಭೂಮಿ ನೀಡುವ ಮಾಲಕರ ಮನವೊಲಿಸಿ ಅವರ ಪಾಲಿನ ಪರಿಹಾರದ ಹಣ 1 ಕೋಟಿ ತೆಗೆದಿಡಲಾಗಿದೆ. ಅಂದಾಜು 200 ರಿಂದ 300 ಸರ್ವೇ ನಂಬರ್‌ಗಳ ಮಾಲೀಕರಲ್ಲಿ ಹಲವರ ಮನವೊಲಿಸಲಾಗಿದೆ. ಕೆಲವರು ತೀರಿಕೊಂಡಿದ್ದು, ಅವರ ವಾರಸುದಾರರು ಮುಂಬಯಿ ಅಥವಾ ಬೇರೆ ಕಡೆ ಇರುವ ಸಾಧ್ಯತೆಗಳನ್ನು ಹುಡುಕಿ ತೆಗೆಯಲಾಗುತ್ತಿದೆ.

•ನಾಗರಾಜ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next