ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ಕಾರಣವಾಗಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಜೀವನ ಸ್ಥಿತಿ ಒಂದು ಹಂತಕ್ಕೆ ತಹಬದಿಗೆ ಬಂದಿದೆ. ಮೊದಲಿನ ಹಾಗೆ ಇಲ್ಲಿ ದೊಡ್ಡ ಮಟ್ಟದ ಸ್ಫೋಟಗಳಾಗಲಿ, ಕಲ್ಲು ತೂರಾಟದಂಥ ಘಟನೆಗಳಾಗಲಿ ನಡೆಯುತ್ತಿಲ್ಲ. ಸೇನೆ ಮತ್ತು ಪೊಲೀಸರ ಬಿಗಿ ಬಂದೋಬಸ್ತ್ ಮತ್ತು ಜನತೆಯ ಬದಲಾದ ಮನೋಭಾವದಿಂದಾಗಿ ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದು ಒಂದು ಲೆಕ್ಕಾಚಾರದಲ್ಲಿ ಸಮಾಧಾನಕರ ವಿಚಾರ.
ಆದರೆ ಪಾಕಿಸ್ಥಾನ ಪ್ರಚೋದಿತ ಉಗ್ರರು ಈಗ ಬೇರೊಂದು ಮಾರ್ಗ ಹಿಡಿದಿದ್ದಾರೆ. ಪ್ರದೇಶವೊಂದರಲ್ಲಿ ಬಾಂಬ್ ಸ್ಫೋಟಿಸಿ ಅಲ್ಲಿ ಹೆಚ್ಚು ಸಾವು ನೋವು ಉಂಟಾಗುವಂತೆ ಮಾಡುತ್ತಿದ್ದ ಉಗ್ರರಿಗೆ ಈಗ ಈ ಕೆಲಸಗಳು ಸುಲಭವಾಗುತ್ತಿಲ್ಲ. ಇದಕ್ಕೆ ಕಾರಣ ಬಿಗಿ ಭದ್ರತೆ. ಹೀಗಾಗಿಯೇ ಪೊಲೀಸರು, ಸೇನಾ ಸಿಬಂದಿ ಮತ್ತು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ಇದರಿಂದಾಗಿ ಇಂಥವರ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆಡೆ ಮಾಡಿದೆ.
2021ರ ಅಕ್ಟೋಬರ್‌ನಿಂದ ಕಣಿವೆ ರಾಜ್ಯದಲ್ಲಿ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ದಾಳಿ ನಡೆಯುವ ಕೆಲಸ ಆರಂಭವಾಗಿದೆ. ಇದಕ್ಕೂ ಮುನ್ನ ಪಾಕಿಸ್ಥಾನದಿಂದ ಬಂದ ಉಗ್ರರು ಅಥವಾ ಪಾಕ್ ಪ್ರಚೋದಿತ ಉಗ್ರರು ಕಾಶ್ಮೀರಿ ಪಂಡಿತರ ಮೇಲೆ ದಾಳಿ ನಡೆಸಿ ಅವರನ್ನು ಕಣಿವೆ ರಾಜ್ಯ ಬಿಟ್ಟುಹೋಗುವಂತೆ ಮಾಡಿದ್ದರು. ಆದರೆ 370ನೇ ವಿಧಿ ರದ್ದಾದ ಮೇಲೆ ಕಾಶ್ಮೀರಿ ಪಂಡಿತರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. 2021ರ ಅ.6ರಂದು ಮಖಾನ್ ಲಾಲ್ ಬಿಂದ್ರೂ ಎಂಬ ಪಂಡಿತರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಯಿತು. ಅ.5ರಂದು ವೀರೇಂದ್ರ ಪಾಸ್ವಾನ್, ಅ.7ರಂದು ಸತೀಂದರ್ ಕೌರ್ ಮತ್ತು ದೀಪಕ್ ಚಾಂದ್ ಎಂಬ ಶಿಕ್ಷಕರು, ಅ.17ರಂದು ಗೋಲ್‌ಗೊಪ್ಪಾ ವ್ಯಾಪಾರಿ ಅರವಿಂದ್ ಸಿಂಗ್ ಸಾಹ್, 2022ರ ಎ.13ರಂದು ಸುರೀಂದರ್ ಕುಮಾರ್ ಸಿಂಗ್, ಮೇ 12ರಂದು ರಾಹುಲ್ ಭಟ್, ಮೇ 17ರಂದು ರಂಜಿತ್ ಸಿಂಗ್, ಮೇ 31ರಂದು ರಜ್ನಿ ಬಾಲಾ, ಜೂ.2ರಂದು ವಿಜಯಕುಮಾರ್ ಅವರನ್ನು ಉಗ್ರರು ಹತ್ಯೆ ಮಾಡಿದ್ದಾರೆ.
ಇದಷ್ಟೇ ಅಲ್ಲ, ಕಾಶ್ಮೀರಿ ಪಂಡಿತರ ಜತೆಗೆ ಪೊಲೀಸರು ಮತ್ತು ಸೇನೆಗೆ ಸಹಕಾರ ನೀಡಿದರು ಎಂಬ ಕಾರಣಕ್ಕಾಗಿ ಉಗ್ರರು ಹಲವಾರು ಮುಸ್ಲಿಂ ನಾಗರಿಕರನ್ನೂ ಹತ್ಯೆ ಮಾಡಿದ್ದಾರೆ. ಕಳೆದ ವರ್ಷ 39 ಮಂದಿ, ಈ ವರ್ಷ 18 ಮಂದಿಯನ್ನು ಪಾಕ್ ಮೂಲದ ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ಕಾಶ್ಮೀರಿ ಪಂಡಿತರನ್ನೇ ಗುರಿಯಾಗಿ ನಡೆಸುವ ಹತ್ಯೆ ಕುರಿತಂತೆ ಇತ್ತೀಚೆಗಷ್ಟೇ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಭದ್ರತಾ ಭೀತಿಯಿಂದಾಗಿ ಕಣಿವೆ ತೊರೆಯುವುದಾಗಿ ಪಂಡಿತರು ಬೆದರಿಕೆ ಯನ್ನೂ ಹಾಕಿದ್ದರು. ಇದಾದ ಮೇಲೆ ಭದ್ರತೆ ಹೆಚ್ಚಿಸಲಾಗಿತ್ತು. ಆದರೆ ಮಂಗಳವಾರ ಸೇಬು ತೋಟದಲ್ಲಿ ಕೆಲಸ ಮಾಡುತ್ತಿದ್ದ ಮತ್ತೂಬ್ಬ ಕಾಶ್ಮೀರಿ ಪಂಡಿತರನ್ನು ಉಗ್ರರು ಹತ್ಯೆ ಮಾಡಿದ್ದಾರೆ.
ಇಂಥ ನಿರ್ದಿಷ್ಟ ಗುರಿಯ ಹತ್ಯೆಗಳಿಂದಾಗಿ ಜನರಲ್ಲಿ ಭದ್ರತೆ ಕುರಿತಂತೆ ಆತಂಕವೂ ಹೆಚ್ಚಾಗಬಹುದು. ಆದಷ್ಟು ಬೇಗ ಕಾಶ್ಮೀರಿ ಪಂಡಿತರ ಮೇಲಿನ ದಾಳಿ ನಿಯಂತ್ರಣಕ್ಕೆ ಸೇನೆ ಮತ್ತು ಅಲ್ಲಿನ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮತ್ತಷ್ಟು ಆತಂಕದ ವಾತಾವರಣ ಸೃಷ್ಟಿಯಾದೀತು.