ಶಿರೂರ: ರಂಗೋಲಿ ನಮ್ಮ ಸಂಸ್ಕೃತಿ, ಸಂಪ್ರದಾಯದ ಸಂಕೇತವಾಗಿದ್ದು, ಮಹಿಳೆಯರು ರಂಗೋಲಿ ಕಲೆ ನಶಿಸಿ ಹೋಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಗುರುಮಾತೆ ಲೋಕೇಶ್ವರಿ ಪರಡ್ಡಿ ಹೇಳಿದರು.
ಬೆನಕಟ್ಟಿ ಗ್ರಾಮದಲ್ಲಿ ಡಾ| ರಾಧಾಕೃಷ್ಣನ್ ಶಿಕ್ಷಕರ ಬಳಗ ಮಹಾಯೋಗಿ ವೇಮನರ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ರಂಗೋಲಿ ಬಿಡಿಸುವ ಕಲೆ ಕರಗತ ಮಾಡಿಕೊಳ್ಳಬೇಕು ಎಂದರು. ಇತ್ತಿಚಿನ ದಿನಗಳಲ್ಲಿ ಬೆಳಗಿನ ಜಾವ ಮನೆಗಳ ಮುಂದೆ ರಂಗೋಲಿ ಚಿತ್ತಾರ ಕಾಣಿಸುತ್ತಿಲ್ಲ. ಇದು ನಮ್ಮ ಸಂಸ್ಕೃತಿ ನಾವು ಮರೆಯುತ್ತಿದ್ದೇವೆ ಎನ್ನುವ ಸಂಕೇತ ತೋರುತ್ತಿದೆ. ಇದು ಆಗಬಾರದು. ಪ್ರತಿಯೊಬ್ಬ ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ರಂಗೋಲಿ ಕಲೆಯನ್ನು ಕಲಿಸಿ ಸಂಸ್ಕೃತಿಯ ರಕ್ಷಣೆಗೆ ಮುಂದಾಗಬೇಕು ಎಂದರು.
ಪತ್ರಕರ್ತ ಪ್ರಕಾಶ ಬಾಳಕ್ಕನವರ ಮಾತನಾಡಿ, ಇಂದು ಮಕ್ಕಳಲ್ಲಿ ಕ್ರಿಯಾಶೀಲತೆ ಕಡಿಮೆಯಾಗುತ್ತಿದ್ದು, ಯಾವುದರಲ್ಲೂ ಆಸಕ್ತಿ ತಳೆಯುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಪ್ರತಿಭೆಯೇ ಕಾಣುತ್ತಿಲ್ಲ. ಈ ಬಗ್ಗೆ ಚಿಂತನೆ ಅಗತ್ಯವಾಗಿದೆ. ರಂಗೋಲಿ ಕಲೆಯನ್ನು ಮರೆತರೆ ನಮ್ಮ ಸಂಸ್ಕೃತಿಯನ್ನೇ ಮರೆತಂತೆ ಎಂದರು.
ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಂಡಿತ ಮಾಚಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ವೇಮರಡ್ಡಿ ಯಡಹಳ್ಳಿ, ಹಿರಿಯರಾದ ಹನಮಪ್ಪ ಬೆಣ್ಣೂರ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ವೇತಾ ಯಡಹಳ್ಳಿ (ಪಿಯುಸಿ), ಶ್ರೀರಾಮ ದಾಸಪ್ಪನವರ(ಎಸ್ ಎಸ್‌ಎಲ್‌ಸಿ) ಮತ್ತು ಅಮೃತಾ ಅಂಗಡಿ (ಏಳನೇ ತರಗತಿ)ಅವರನ್ನು ಸನ್ಮಾನಿಸಿ ಪುರಸ್ಕಾರ ನೀಡಲಾಯಿತು. ಸುರೇಶ ಮನಗೂಳಿ ಸ್ವಾಗತಿಸಿದರು. ಪಾಂಡು ಸನ್ನಪ್ಪನವರ ನಿರೂಪಿಸಿದರು. ಅಶೋಕ ಅಂಗಡಿ ವಂದಿಸಿದರು. ಸುರೇಶ ಚಿತ್ತರಗಿ, ಮಾಲತೇಶ ಪಾಟೀಲ, ವೆಂಕಟೇಶ ಬಿರಾದಾರ ಪಾಟೀಲ ಇದ್ದರು.
ರಂಗೋಲಿ ಫಲಿತಾಂಶ:
ಮಹಿಳೆಯರಿಗಾಗಿ ನಡೆದ ಮುಕ್ತ ರಂಗೋಲಿ ಸ್ಪರ್ಧೆಯಲ್ಲಿ ಹುಲ್ಲಿಕೇರಿ ಗ್ರಾಮದ ಪದ್ಮಾವತಿ ಪೂಜಾರ ಪ್ರಥಮ, ಪರೂತಿಯ ಪ್ರೇಮಾ ಗಾಜಿ ದ್ವಿತಿಯ, ಅಮೀನಗಡದ ಲಕ್ಷ್ಮೀ ಆರ್ .ವಿ ತೃತೀಯ ಹಾಗೂ ಬೆನಕಟ್ಟಿಯ ಅಕ್ಷತಾ ಮಾದರ ಚತುರ್ಥ ಬಹುಮಾನ ಪಡೆದರು.