ಕುಣಿಗಲ್: ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರೂ ಆರೋಗ್ಯವಂತರಾಗಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಜಗದೀಶ್ ತಿಳಿಸಿದರು.
ತಾಲೂಕು ಕಚೇರಿ ಆವರಣದಲ್ಲಿ ಭಾನುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಜನರು ಆರೋಗ್ಯವಂತರಾಗಿರಬೇಕು ಎಂಬ ದಿಸೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆರೋಗ್ಯ ಸೇವೆ ಒದಗಿಸಲು ಹಲವಾರು ಯೋಜನೆ ಜಾರಿಗೆ ತಂದಿದೆ. ರಾಜ್ಯದ ಎಲ್ಲಾ ನಿವಾಸಿಗಳಿಗೆ ಆರೋಗ್ಯ ಕರ್ನಾಟಕ ಎಂಬ ಸಾರ್ವತ್ರಿಕೆ ಆರೋಗ್ಯ ರಕ್ಷಣಾ ಯೋಜನೆ ರಾಜ್ಯ ಸರ್ಕಾರ 2018ರ ಮಾ.2 ರಂದು ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನಗೊಳಿಸಿದೆ. ಈ ಎರಡು ಯೋಜನೆ ಸೇರಿಸಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಎಂದು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಅನುದಾನ ಹಂಚಿಕೆ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ರಾಜ್ಯದ 113 ಲಕ್ಷ ಬಿಪಿಎಲ್ ಕುಟುಂಬಗಳ ಪೈಕಿ 52 ಲಕ್ಷ ಕುಟುಂಬಗಳಿಗೆ ನೆರವಾಗಲಿದೆ. ಕೇಂದ್ರ ಸರ್ಕಾರ ಶೇ. 60, ರಾಜ್ಯ ಸರ್ಕಾರ ಶೇ. 40 ಅನುದಾನ ಭರಿಸುತ್ತದೆ. ಉಳಿದ 53 ಲಕ್ಷ ಕುಟುಂಬಗಳಿಗೆ ರಾಜ್ಯ ಸರ್ಕಾರವೇ ಶೇ. 100 ವೆಚ್ಚ ಭರಿಸಲಿದೆ ಎಂದರು.
ಅರ್ಹತೆ, ಚಿಕಿತ್ಸಾ ವೆಚ್ಚ: ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ಮತ್ತು ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆಯಲ್ಲಿ ನೋಂದಾಯಿತರಾಗಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ 5 ಲಕ್ಷದವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ಅಲ್ಲದೆ ಬಿ.ಪಿ.ಎಲ್ ಕಾರ್ಡ್ ಹೊಂ ದಿರುವ ವರಿಗೂ ಪಾವತಿ ಆಧಾರ ಮೇಲೆ ಶೇ. 30ರಷ್ಟು ಚಿಕಿತ್ಸೆ ವೆಚ್ಚ ಲಭ್ಯವಿದ್ದು, ಪ್ರತಿ ಕುಟುಂಬಕ್ಕೆ 1.50 ಲಕ್ಷ ಇರುತ್ತದೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹಾಜರು ಪಡಿಸಿ ಚಿಕಿತ್ಸೆ ಪಡೆದು ಕೊಳ್ಳಬೇಕಾಗಿದೆ ಎಂದರು.
ಯಾವ ಚಿಕಿತ್ಸೆಗೆ ಲಭ್ಯ: ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ, ದ್ವೀತಿಯ ಹಂತದ 254 ಚಿಕಿತ್ಸಾ ವಿಧಾನ, ಹೃದಯ ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಶಿಗಳ ಕಾಯಿಲೆ ಮುಂತಾದ ತೃತೀಯ ಹಂತದ 900 ಚಿಕಿತ್ಸೆ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪ ಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳು ಲಭ್ಯವಿದೆ. 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫೆರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಹೇಳಿದರು.
ಬಳಿಕ ಪಟ್ಟಣದಾದ್ಯಂತ ಜಾಥಾ ನಡೆಸಿ ನಾಗರಿಕರಲ್ಲಿ ಅರಿವು ಮೂಡಿಸಲಾಯಿತು. ಹಿರಿಯ ಮಹಿಳಾ ಸಹಾಯಿಕಿ ಶಕೀಲಾ, ಪುರುಷ ಸಹಾಯಕ ಯಾಲಕ್ಕಿ ಗೌಡ ಇದ್ದರು.