ಸಾಗರ: ಧರ್ಮಸ್ಥಳ ಯೋಜನೆಯಿಂದ ಸಹಾಯ ಪಡೆದ ಫಲಾನುಭವಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಅವಕಾಶಕ್ಕಾಗಿ ಕಾಯದೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸ್ಥಿತಿ ತಲಪುವತ್ತ ಗಮನ ಹರಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ತಿಳಿಸಿದರು.
ಇಲ್ಲಿನ ಇಂಡಸ್ಟ್ರಿಯಲ್ ಏರಿಯಾದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಂಕಲ್ಪ ಸೌಧ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಗ್ರಾಮಾಭಿವೃದ್ಧಿಗೆ ಯೋಜನೆ ಮೂಲಕ ಹತ್ತುಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ಹುಟ್ಟಿದ ಮಗುವಿನಿಂದ ಹಿಡಿದು ಅಂತ್ಯಕ್ರಿಯೆವರೆಗೂ ಯೋಜನೆವತಿಯಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕಾಲಬದಲಾಗಿದ್ದು, ಮನುಷ್ಯನ ಜೀವನಮಟ್ಟ ಸಹ ಸುಧಾರಣೆ ಕಂಡಿದೆ. ಕೊರೊನಾ ನಂತರ ಗಳಿಸಿದ ಆದಾಯದಲ್ಲಿ ಸ್ವಲ್ಪ ಭಾಗವನ್ನು ಉಳಿತಾಯ ಮಾಡುವ ಮನಸ್ಥಿತಿ ಜಾಗೃತವಾಗಿದೆ ಎಂದರು.
ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿ ಕಾರಿ ಡಾ. ಎಲ್.ಎಚ್.ಮಂಜುನಾಥ್ ಮಾತನಾಡಿ, 2007ರಲ್ಲಿ ಯೋಜನೆಅನುಷ್ಠಾನಕ್ಕೆ ಬಂದಿದೆ. ಅಂದಿನಿಂದ ಇಂದಿನವರೆಗೂ ಯೋಜನೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ತಾಲೂಕಿನಲ್ಲಿ 3,800 ಸ್ವಸಹಾಯ ಸಂಘಗಳಿದ್ದು, 1,900 ಪ್ರಗತಿಬಂಧು ಒಕ್ಕೂಟವಿದೆ. ಯೋಜನೆ ಮೂಲಕ ಶ್ರಮ ವಿನಿಮಯದ ಹೊಸ ಕಲ್ಪನೆಯನ್ನುರೂಢಿಸಲಾಗಿದೆ. ಫಲಾನುಭವಿಗಳ ಮನೆಗೆ ಆರ್ಥಿಕ ನೆರವು ಕಲ್ಪಿಸಲಾಗುತ್ತಿದೆ. ಪ್ರಗತಿ ಗ್ರಾಮೀಣ ಬ್ಯಾಂಕ್‌ನಿಂದ 1,200 ಕೋಟಿ ರೂ. ನೆರವು ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಕಲ್ಪ ಸೌಧಕ್ಕೆ ಸ್ಥಳದಾನ ಮಾಡಿದ ನಂದಿಗುಡ್ಡಿ ಲಕ್ಷ್ಮಮ್ಮ ಗುತ್ಯಪ್ಪ ಅವರ ಕುಟುಂಬವನ್ನು ಅಭಿನಂದಿಸಲಾಯಿತು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು, ಕೆಪಿಸಿಸಿ ಕಾರ್ಯದರ್ಶಿ ಡಾ|ರಾಜನಂದಿನಿ, ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ವಡನಬೈಲ್‌ದೇವಸ್ಥಾನದ ಧರ್ಮದರ್ಶಿ ವೀರರಾಜ ಜೈನ್, ನಗರಸಭೆ ಸದಸ್ಯ ಶ್ರೀರಾಮ್, ಲಕ್ಷ್ಮಮ್ಮ ಕೋಂ ಗುತ್ಯಪ್ಪ ಇನ್ನಿತರರು ಇದ್ದರು. ಶ್ರೀರಂಜಿನಿ ಪ್ರಾರ್ಥಿಸಿದರು. ವಸಂತ ಸಾಲಿಯಾನ ಸ್ವಾಗತಿಸಿದರು. ಶಾಂತಾ ನಾಯಕ್, ರವಿರಾಜ್ ನಾಯ್ಕ ನಿರೂಪಿಸಿದರು.