Advertisement

ಆರೋಗ್ಯ ಸೇವೆ ಲಾಭ ಪಡೆಯಿರಿ: ಗುತ್ತೇದಾರ

12:58 PM May 03, 2022 | Team Udayavani |

ಆಳಂದ: ಜನಸಾಮಾನ್ಯರ ಆರೋಗ್ಯ ಸಂರಕ್ಷಣೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಜಾರಿಗೆ ತಂದ ಆರೋಗ್ಯ ಸೌಲಭ್ಯಗಳ ಲಾಭ ಪಡೆಯಲು ಮುಂದಾಗಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.

Advertisement

ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಜಿಲ್ಲೆ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಉಲಾಖೆ, ಜಿಲ್ಲಾ ಆಯುಷ್ಯ, ತಾಲೂಕು ಆಡಳಿತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ತಾಲೂಕು ಮಟ್ಟದಲ್ಲಿ ವಿವಿಧ ರೋಗಗಳಿಗೆ ಸಂಬಂಧಿಸಿದಂತೆ ತಪಾಸಣೆ ಮತ್ತು ಚಿಕಿತ್ಸೆಗೆ ಮುಂದಾಗಿ ನುರಿತ ವೈದ್ಯರು ಸಿಬ್ಬಂದಿ ಮೂಲಕ ಮುಂದಾಗಿದ್ದು, ಪ್ರತಿಯೊಬ್ಬ ಬಡವರು ಹಿಂಜರಿಯದೇ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ಕೈಗೊಂಡು ಆರೋಗ್ಯವಾಗಿದ್ದರೆ ಮಾತ್ರ ಸರ್ಕಾರದ ಯೋಜನೆಗಳ ಕಾರ್ಯ ಸಾರ್ಥಕವಾಗುತ್ತದೆ ಎಂದರು.

ಕೋವಿಡ್‌-19 ಒಂದರಿಂದ ಮೂರು ಅಲೆಗಳಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕುಟುಂಬವನ್ನು ಲೆಕ್ಕಿಸದೇ ಉತ್ತಮ ಕೆಲಸ ಮಾಡಿದ್ದು ಶ್ಲಾಘನೀಯವಾಗಿದೆ. 4ನೇ ಅಲೆ ಕುರಿತು ಮುಂಜಾಗ್ರತೆ ವಹಿಸಲು ಮುಂದಾಗಬೇಕು ಎಂದು ಹೇಳಿದರು.

ಬಿಪಿಎಲ್‌ ಗ್ರಾಹಕರಿಗೆ ದೊಡ್ಡ ರೋಗಗಳ ನಿವಾರಣೆಗೆ ಐದು ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಕೈಗೊಂಡಿದೆ. ಇದು ಬಡವರಿಗೆ, ಕೂಲಿ ಕಾರರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಅನುಕೂಲವಾಗುತ್ತದೆ. ಕಾಯಿಲೆಗಳನ್ನು ನಿರ್ಲಕ್ಷಿಸದೇ ಸರ್ಕಾರಿ ವೈದ್ಯರನ್ನು ಸಂಪರ್ಕಿಸಿ ಗುಣಪಡಿಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಉಚಿತ ಚಿಕಿತ್ಸೆ ಪಡೆಯಲು ಆರೋಗ್ಯ ಕಾರ್ಡ್‌ಗಳನ್ನು ಪಡೆದುಕೊಂಡು ಸರ್ಕಾರ ಆಯ್ಕೆ ಮಾಡಿದ ಖಾಸಗಿ ಆಸ್ಪತ್ರೆಗಳಲ್ಲೂ ಹೆಚ್ಚಿನ ಚಿಕಿತ್ಸೆ ಪಡೆಯಲು ಅವಕಾಶ ನೀಡಿದೆ. ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

Advertisement

ತಾಲೂಕು ಆರೋಗ್ಯಾಧಿಕಾರಿ ಡಾ| ಸುಶೀಲಕುಮಾರ ಅಂಬೂರೆ ಪ್ರಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ, ತಾಪಂ ಇಒ ಡಾ| ಸಂಜಯ ರೆಡ್ಡಿ, ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್‌. ಖಜೂರಿ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ, ಡಿಎಚ್‌ಒ ಶರಣಬಸಪ್ಪ ಗಣಜಲಖೇಡ, ಸಮಾಜ ಕಲ್ಯಾಣಾಧಿ ಕಾರಿ ಮೋನಮ್ಮ ಸುತಾರ, ಸಿಡಿಪಿಒ ಶಿವಮೂರ್ತಿ ಕುಂಬಾರ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಮಹಾಂತಪ್ಪ ಹಾಳಮಳಿ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿದ್ಧರಾಮ ಪಾಟೀಲ ಮತ್ತಿತರರು ಇದ್ದರು. ಜಿಲ್ಲಾ ಆರೋಗ್ಯ ಸಮೀಕ್ಷಣಾಧಿಕಾರಿ ಶಿವುಕುಮಾರ ದೇಶಮುಖ, ಜಿಲ್ಲಾ ಮಲೆರಿಯಾ ಅಧಿಕಾರಿ ಡಾ| ಶರಣಬಸಪ್ಪ ಖ್ಯಾತನಾಳ, ಆರೋಗ್ಯ ಇಲಾಖೆ ನೋಡಲ್‌ ಅಧಿಕಾರಿ ಡಾ| ಚಂದ್ರಕಾಂತ ನರಿಬೋಳ, ಆಯುಷ್ಯ ಇಲಾಖೆ ಅಧಿಕಾರಿ ಡಾ| ರಿಯಾಜ್‌ ಸುಳ್ಳದ, ಡಾ| ಅಪ್ಪರಾವ್‌ ಅರಗಡೆ ಮತ್ತಿತರರು ಹಾಜರಿದ್ದರು.

ಮೇಳದಲ್ಲಿ 25 ವೈದ್ಯಕೀಯ ಚಿಕಿತ್ಸಾ ತಪಾಸಣಾ ಕೇಂದ್ರ ಸ್ಥಾಪಿಸುವ ಮೂಲಕ ಹಲವು ರೋಗಿಗಳ ತಪಾಸಣೆ ಹಾಗೂ ಚಿಕಿತ್ಸೆ ಔಷಧೋಪಚಾರ ಕೈಗೊಳ್ಳಲಾಯಿತು. ಅಲ್ಲದೇ, ಆರೋಗ್ಯ ಇಲಾಖೆಯಿಂದ ವಸ್ತು ಪ್ರದರ್ಶನ, ರಕ್ತದಾನ ಶಿಬಿರ ನಡೆಯಿತು.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಿಂದ ನೂರಾರು ಮಂದಿ ಆರೋಗ್ಯ ತಪಾಸಣೆ ನಡೆಯಿತು. ಅಲ್ಲದೇ, ಆಯುಷ್ಯಮಾನ ಭಾರತ, ಆರೋಗ್ಯ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ಸ್ಥಳದಲ್ಲೇ ನೀಡಲಾಯಿತು. ಆರೋಗ್ಯ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ನಂದಿಕೋಲಮಠ ಪ್ರಾರ್ಥಿಸಿದರು. ಕೌನ್ಸಿಲರ್‌ ಶಿವುಕುಮಾರ ಸ್ವಾಗತಿಸಿದರು. ಚಾಮರಾಜ ದೊಡ್ಡಮನಿ ನಿರೂಪಿಸಿದರು. ಅಬ್ದುಲ್‌ ರಾವೂಫ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next