Advertisement

ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ: ಸಿ.ಟಿ.ರವಿ

11:21 AM Jan 22, 2019 | Team Udayavani |

ಚಿಕ್ಕಮಗಳೂರು: ದೇವಾಲಯಗಳ ಪ್ರದಕ್ಷಿಣೆ ಹಾಕದಿದ್ದರೂ ಪರವಾಗಿಲ್ಲ. ಪ್ರತಿನಿತ್ಯ ಗ್ರಾಮಗಳ ಪ್ರದಕ್ಷಿಣೆ ಹಾಕಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಸಿ.ಟಿ.ರವಿ ಪಿಡಿಒಗಳಿಗೆ ಸೂಚನೆ ನೀಡಿದರು.

Advertisement

ಸೋಮವಾರ ತಾಲೂಕು ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದ ಹಲವು ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ತೀವ್ರ ತೊಂದರೆ ಉಂಟಾಗಿದೆ ಎಂದರು.

ಪ್ರತಿನಿತ್ಯ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಕಂಡು ಬಂದರೆ ಅದನ್ನು ಪರಿಹರಿಸಿ. ನಿಮ್ಮಿಂದಲೇ ಸಮಸ್ಯೆ ಪರಿಹರಿಸಲು ಸಾಧ್ಯವಿದ್ದರೆ ಆ ಕೆಲಸ ಮಾಡಿ. ಇಲ್ಲವಾದಲ್ಲಿ ಕೂಡಲೆ ವಿಚಾರವನ್ನು ತಾಲೂಕು ಆಡಳಿತ ಹಾಗೂ ತಮ್ಮ ಗಮನಕ್ಕೆ ತನ್ನಿ. ಅಗತ್ಯವಿರುವಡೆಗೆ ಟ್ಯಾಂಕರ್‌ ಮೂಲಕ ನಿಯಮಾನುಸಾರ ನೀರು ಒದಗಿಸಿ ಎಂದು ಸೂಚಿಸಿದರು.

ಜಾನುವಾರುಗಳಿಗೂ ಕುಡಿಯುವ ನೀರು ಒದಗಿಸುವುದು ನಮ್ಮ ಕರ್ತವ್ಯ. ಪ್ರತಿ ಗ್ರಾಮದಲ್ಲಿಯೂ ಜಾನುವಾರು ಕಟ್ಟೆಗಳನ್ನು ಕಟ್ಟಬೇಕು. ಅದರಲ್ಲಿ ಪ್ರತಿ ನಿತ್ಯ ನೀರು ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಮೊದಲು ಸರ್ಕಾರಿ ಬೋರ್‌ವೆಲ್‌ಗ‌ಳಿಂದ ನೀರು ಸರಬರಾಜು ಮಾಡಲು ನೋಡಿ, ಅದು ಆಗದಿದ್ದಾಗ ಖಾಸಗಿ ಬೋರ್‌ವೆಲ್‌ಗ‌ಳಿಂದ ನೀರು ಒದಗಿಸಿ ಅದೂ ಸಾಧ್ಯವಾಗದಿದ್ದಾಗ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಿ. ಕಾನೂನು ರೀತ್ಯಾ ಟೆಂಡರ್‌ ಕರೆದು, ಜಿಪಿಎಸ್‌ ಅಳವಡಿಸಿ ಟ್ಯಾಂಕರ್‌ ಮೂಲಕ ನೀರು ಒದಗಿಸಿ ಇಲ್ಲವಾದಲ್ಲಿ ಮುಂದೆ ಬಿಲ್‌ ಪಾವತಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದರು.

Advertisement

ಕೆಲವು ಗ್ರಾಮಗಳಲ್ಲಿ ವೋಲ್ಟೇಜ್‌ ಕಡಿಮೆ ಇರುವುದರಿಂದ ಕುಡಿಯುವ ನೀರು ಸರಬರಾಜು ಮಾಡಲು ಕಷ್ಟವಾಗುತ್ತಿದೆ ಎಂಬ ಮಾಹಿತಿ ಪಡೆದ ಶಾಸಕರು, ಮೆಸ್ಕಾಂ ಅಧಿಕಾರಿಗಳಿಗೆ ಅನಧಿಕೃತವಾಗಿ ಪಂಪ್‌ಸೆಟ್ ಹಾಕಿಕೊಂಡಿರುವುದನ್ನು ಪರಿಶೀಲಿಸಿ. ಅದರ ಸಂಪರ್ಕ ತೆಗೆದು ಹಾಕಿ ಎಂದು ಸೂಚಿಸಿದಾಗ, ಮೆಸ್ಕಾಂ ಅಧಿಕಾರಿಗಳು ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಬಹುದು ಎಂದು ಆ ಕೆಲಸ ಮಾಡಿಲ್ಲ ಎಂಬ ಉತ್ತರ ನೀಡಿದರು. ಅನಧಿಕೃತ ಸಂಪರ್ಕ ಕಡಿತಗೊಳಿಸಲು ಏನು ಕ್ರಮ ಕೈಗೊಂಡಿದ್ದೀರಿ. ಅನಧಿಕೃತ ಸಂಪರ್ಕಗಳನ್ನು ಅಧಿಕೃತಪಡಿಸಿಕೊಳ್ಳಬೇಕು. ಇಲ್ಲವಾದರೆ ಪೊಲೀಸ್‌ ನೆರವನ್ನು ಪಡೆದು ಅನಧಿಕೃತ ಸಂಪರ್ಕ ಕಡಿತಗೊಳಿಸಿ. ಆಗ ಸಮರ್ಪಕ ವೋಲ್ಟೇಜ್‌ ನೀಡಲು ಸಾಧ್ಯವಾಗುತ್ತದೆ ಎಂದು ಶಾಸಕರು ಹೇಳಿದರು.

ಕಾಲ್‌ ಸೆಂಟರ್‌: ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಕಾಲ್‌ ಸೆಂಟರ್‌ ತೆರೆಯಲು ಸೂಚಿಸಿದ ಶಾಸಕರು, ದಿನದ 24 ಗಂಟೆಯೂ ಕಾಲ್‌ ಸೆಂಟರ್‌ ಕಾರ್ಯನಿರ್ವಹಿಸಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಟಾಲ್‌ ಫ್ರೀ ಸಂಖ್ಯೆ 18004252281ಗೆ ಕರೆ ಮಾಡಿ ತಿಳಿಸಬಹುದು ಎಂದರು.

ಇಷ್ಟು ಮಾತ್ರವಲ್ಲದೆ ಪಿಡಿಒಗಳು, ತಾ.ಪಂ. ಇ.ಒ., ಕಿರಿಯ ಇಂಜಿನಿಯರ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ತಹಶೀಲ್ದಾರ್‌ ಹಾಗೂ ತಮ್ಮ ಆಪ್ತ ಸಹಾಯಕರು ಇರುವಂತೆ ವಾಟ್ಸ್‌ ಆಪ್‌ ಗ್ರೂಪ್‌ ತೆರೆಯಲು ತಾಪಂ ಇ.ಒ.ಗೆ ಹೇಳಿದರು.

2017-18ನೇ ಸಾಲಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದ ಬಾಬ್ತು ಇನ್ನೂ ಬಿಲ್‌ ಪಾವತಿಸಿಲ್ಲ. ಇದರಿಂದಾಗಿ ಪ್ರತಿನಿತ್ಯ ನೀರು ಸರಬರಾಜು ಮಾಡಿದವರು ಗಲಾಟೆ ಮಾಡುತ್ತಿದ್ದಾರೆ. ಹಳೆಯ ಬಿಲ್‌ ಪಾವತಿಸದೆ ಈ ಬಾರಿ ನೀರು ಸರಬರಾಜು ಮಾಡುವುದಿಲ್ಲವೆಂದು ಹೇಳುತ್ತಿದ್ದಾರೆ ಎಂದು ಪಿ.ಡಿ.ಒ.ಗಳು ದೂರಿದರು.

ಇದಕ್ಕೆ ಉತ್ತರಿಸಿದ ಶಾಸಕ ಸಿ.ಟಿ.ರವಿ, ಈ ಹಿಂದೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದ ಬಾಬ್ತು ಚಿಕ್ಕಮಗಳೂರು ತಾಲೂಕಿನಲ್ಲಿ 46.19 ಲಕ್ಷ ರೂ. ಹಾಗೂ ಕಡೂರು ತಾಲೂಕಿನಲ್ಲಿ 3 ಕೋಟಿ ರೂ. ಬಾಕಿ ಇದೆ. ಹಳೆಯ ಬಿಲ್‌ ಪಾವತಿಸಲು ಸರ್ಕಾರವನ್ನು ಒತ್ತಾಯಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಣ ಎಂದರು.

ಸಖರಾಯಪಟ್ಟಣ ಹೋಬಳಿ, ಲಕ್ಯಾ, ಕಸಬಾ, ಜಾಗರ ಹೋಬಳಿ ವ್ಯಾಪ್ತಿಗಳ ಎಲ್ಲ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳಿಂದ ಪ್ರತ್ಯೇಕವಾಗಿ ಮಾಹಿತಿ ಪಡೆದರು. ಪಂಚಾಯತ್‌ ವ್ಯಾಪ್ತಿಯಲ್ಲಿರುವ ಗ್ರಾಮಗಳ ಸಂಖ್ಯೆ, ಅಲ್ಲಿರುವ ಕುಡಿಯುವ ನೀರಿನ ಮೂಲಗಳು ಎಲ್ಲ ವಿವರಗಳನ್ನು ಪಡೆದುಕೊಂಡು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.

ಸೋಮಶೇಖರ್‌, ಬೆಳವಾಡಿ ರವೀಂದ್ರ, ಜಸಿಂತಾ ಅನಿಲ್‌ ಕುಮಾರ್‌, ವಿಜಯಕುಮಾರ್‌, ಪ್ರೇಮ ಮಂಜುನಾಥ್‌, ನೆಟ್ಟೇಕೆರೆ ಜಯಣ್ಣ, ರಮೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next