ಕೆಂಭಾವಿ: ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳ ಪುನಶ್ಚೇತನ ಮತ್ತು ಉದ್ಯೋಗ ಖಾತ್ರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ಅಮರೇಶ ನಾಯಕ ಹೇಳಿದರು.
ಮಂಗಳವಾರ ನಗನೂರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಪಂ ವತಿಯಿಂದ ಕೈಗೊಂಡ ಉದ್ಯೋಗ ಖಾತ್ರಿ ಯೋಜನೆ ಮತ್ತು ಕುಡಿವ ನೀರಿನ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಅಮೃತ ಸರೋವರ ಯೋಜನೆಯಡಿ ಜಿಲ್ಲೆಯ ಕೆರೆಗಳ ಅಭಿವೃದ್ಧಿ ಮತ್ತು ಅವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಂಡಿದ್ದು, ಗ್ರಾಪಂ ವತಿಯಿಂದ ಕೆಲವು ಸಣ್ಣ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಜನಜಾಗೃತಿ ಮೂಡಿಸಲು ಈಗಾಗಲೇ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಪ್ರತಿಯೊಬ್ಬ ಕೂಲಿ ಕಾರ್ಮಿಕನಿಗೆ ಕೆಲಸ ನೀಡುವಂತೆ ಎಲ್ಲ ಗ್ರಾಪಂಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಇದರಲ್ಲಿ ನಿರ್ಲಕ್ಷ್ಯ ವಹಿಸಿದ ಪಿಡಿಒಗಳ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಂತರ ಗ್ರಾಮದ ಜೆಜೆಂ ಯೋಜನೆಯಡಿ ನಡೆಯುತ್ತಿರುವ ಕುಡಿವ ನೀರಿನ ಘಟಕ, ಕೆರೆ, ಸರ್ಕಾರಿ ಶಾಲೆ, ಸಾರ್ವಜನಿಕ ಶೌಚಾಲಯ, ಗ್ರಾಮದ ರಸ್ತೆ, ಒಳಚರಂಡಿ ಸೇರಿದಂತೆ ವಿವಿಧ ಕೆಲಸ ವೀಕ್ಷಿಸಿದರು. ಇದಕ್ಕೂ ಮೊದಲು ಏವೂರ ಗ್ರಾಪಂಗೆ ಭೇಟಿ ನೀಡಿದ ಅವರು, ಅಲ್ಲಿರುವ ಹಲವು ಸಮಸ್ಯೆಗಳ ಕುರಿತು ಅವಲೋಕನ ಮಾಡಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ತೆರಳಿ ಕೂಲಿ ಕಾರ್ಮಿಕರ ಜೊತೆ ಚರ್ಚಿಸಿದರು.
ತಾಪಂ ಇಒ ರವಿಚಂದ್ರರೆಡ್ಡಿ, ಸಹಾಯಕ ನಿರ್ದೇಶಕ ಸೋಮಶೇಖರ, ಜೆಇ ಸ್ಫೂರ್ತಿ, ಪಿಡಿಒ ಶ್ರೀಶೈಲ್ ಹಳ್ಳಿ, ಗುತ್ತಪ್ಪಗೌಡ ಇದ್ದರು.