ಚಿಕ್ಕೋಡಿ: ರಾಜ್ಯದಲ್ಲಿ ಮಳೆ ಕೊರತೆ ಹಿನ್ನಲ್ಲೆಯಲ್ಲಿ ವಿದ್ಯುತ್ ಅಭಾವವಾಗಿದೆ. ಆದರೂ ಇರುವ ವಿದ್ಯುತ್‌ದಲ್ಲಿ ರೈತರಿಗೆ ತೊಂದರೆಯಾಗದಂತೆ ಹಗಲು 3 ಗಂಟೆ ರಾತ್ರಿ 2ಗಂಟೆ ಹೀಗೆ ಪ್ರತಿದಿನ 5 ಗಂಟೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಕರ್ನಾಟಕದ ದೆಹಲಿ ಪ್ರತಿನಿಧಿ ಮತ್ತು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲ್ಲಿನ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯಲ್ಲಿ ಹೆಸ್ಕಾಂ ಅಧಿಕಾರಿಗಳ ಜೊತೆ ಸುಧಿರ್ಘ ಸಭೆ ನಡೆಸಿದ ಅವರು, ಕಳೆದ ಒಂದು ವಾರದಿಂದ ವಿದ್ಯುತ್ ಸಮಸ್ಯೆ ಕುರಿತು ರೈತರು ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ವಿಶೇಷ ಕ್ರಮ ವಹಿಸಬೇಕು. ಮೊದಲು 7 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಅದೇ ರೀತಿಯಲ್ಲಿ ಈಗಲೂ ವಿದ್ಯುತ್ ಪೂರೈಕೆ ಮಾಡಲು ವಿಶೇಷ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಕಳೆದ ನಾಲ್ಕೈದು ವರ್ಷದಲ್ಲಿ ಸಮರ್ಪಕ ಮಳೆಯಾಗಿದೆ. ಹೀಗಾಗಿ ವಿದ್ಯುತ್ ಸಮಸ್ಯೆ ಎದುರಾಗಿರಲಿಲ್ಲ, ಪ್ರಸಕ್ತ ವರ್ಷದಲ್ಲಿ ಮಳೆ ಕೊರತೆ ಹಿನ್ನಲ್ಲೆಯಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಸಮಸ್ಯೆ ಆದರೂ ಸಹ ಬೇರೆ ಬೇರೆ ಮೂಲದಿಂದ ವಿದ್ಯುತ್ ಖರೀದಿಸಿ ರೈತರಿಗೆ ಸಮರ್ಪಕ ವಿದ್ಯುತ್ ನೀಡಬೇಕು ಎಂದರು.
ಸಕ್ಕರೆ ಕಾರ್ಖಾನೆಗಳು ಆರಂಭವಾದರೆ ವಿದ್ಯುತ್ ಸಮಸ್ಯೆ ಬಗೆಹರಿಯುತ್ತಿದೆ. ಈ ದೆಸೆಯಲ್ಲಿ ಜಿಲ್ಲಾಧಿಕಾರಿ ಜೊತೆ ಮಾತನಾಡಿ ವಿಜಯಪೂರದ ಶಿವಾನಂದ ಪಾಟೀಲ ಜೊತೆ ಮಾತನಾಡಿ ತ್ವರಿತವಾಗಿ ಸಕ್ಕರೆ ಕಾರ್ಖಾನೆ ಆರಂಭ ಮಾಡಬೇಕೆಂದು ಮನವಿ ಮಾಡಲಾಗಿದೆ. ಸಕ್ಕರೆ ಕಾರ್ಖಾನೆಯಿಂದ ಉತ್ಪಾದನೆಯಾಗುವ ಇಥಿನಾಲ್‌ದಿಂದ ವಿದ್ಯುತ್ ಸಮಸ್ಯೆ ಅಲ್ಪಸ್ವಲ್ಪ ದೂರಾಗಲಿದೆ. ಹೀಗಾಗಿ ಅ.೧೫ರಂದು ಸಕ್ಕರೆ ಕಾರ್ಖಾನೆ ಆರಂಭ ಮಾಡಲು ಶಿವಾನಂದ ಪಾಟೀಲ ಅವರಿಗೆ ಮನವಿ ಮಾಡಲಾಗಿದೆ. ಹೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಚಿಕ್ಕೋಡಿ ಗಡಿ ಭಾಗದಲ್ಲಿ ಇರುವ ಸಕ್ಕರೆ ಕಾರ್ಖಾನೆಗಳನ್ನು ಸಂಪರ್ಕಿಸಿ ಎಷ್ಟು ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ರೈತರಿಗೆ ಎಷ್ಟು ವಿದ್ಯುತ್ ಪೂರೈಕೆ ಮಾಡಬೇಕೆಂಬುದನ್ನು ಮಾಹಿತಿ ತರಿಸಿಕೊಂಡು ಸಮರ್ಪಕ ವಿದ್ಯುತ್ ನೀಡಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಚಿಕ್ಕೋಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರಾದ ಸುಪ್ರಭಾ ಭಂಡಗರ ಮಾತನಾಡಿ, ಮೊದಲು ಹಗಲಿನ ವೇಳೆಯಲ್ಲಿ 3 ಗಂಟೆ ಮತ್ತು ರಾತ್ರಿ 4 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆಯಾಗುತ್ತಿತ್ತು. ಸದ್ಯ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದರಿಂದ ಯಾವ ಪೀಡರಗೆ ಎಷ್ಟೇಷ್ಟು ಎಂಬುದನ್ನು ಮನಗಂಡು ವಿದ್ಯುತ್ ನೀಡಲಾಗುತ್ತದೆ. ಚಿಕ್ಕೋಡಿ ಭಾಗದಲ್ಲಿ 180 ಮೆ.ವ್ಯಾಟ್ ವಿದ್ಯುತ್ ಬೇಕಾಗುತ್ತದೆ. ಸದ್ಯ 140 ಮೆ.ವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ಸುಮಾರು 40 ಮೆ.ವ್ಯಾಟ್ ವಿದ್ಯುತ್ ಕೊರತೆಯಿಂದ ಸ್ವಲ್ಪ ಲೋಡ್ ಶೆಡ್ಡಿಂಗ ಮಾಡಲಾಗುತ್ತಿದೆ. ಯಾವ ಭಾಗಕಕ್ಕೂ ತೊಂದರೆಯಾಗದಂತೆ ಪೂರೈಕೆಯಾಗುವ ಮೆ.ವ್ಯಾಟದಲ್ಲಿ ರೈತರಿಗೆ ವಿದ್ಯುತ್ ಕೊಡಲಾಗುತ್ತಿದೆ.
ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳಾದ ಎಸ್.ಆರ್.ಸುಖಸಾರೆ, ಪುರಸಭೆ ಸದಸ್ಯರಾದ ರಾಮಾ ಮಾನೆ, ಸಾಭೀರ ಜಮಾದಾರ ಸೇರಿದಂತೆ ಇನ್ನಿತರ ಹೆಸ್ಕಾಂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.