Advertisement

ಡೆಂಘೀ, ಚಿಕೂನ್‌ ಗುನ್ಯಾ ಹೆಚ್ಚದಂತೆ ಕ್ರಮವಹಿಸಿ

09:36 PM Jul 24, 2019 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಡೆಂಘೀ ಮತ್ತು ಚಿಕೂನ್‌ ಗುನ್ಯಾ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚೆರಿಕೆ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳಲು ನಗರಸಭೆ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯತಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಸೂಚನೆ ನೀಡಿದ್ದಾರೆ.

Advertisement

ಸಾರ್ವಜನಿಕರಲ್ಲಿ ಅರಿವು ಮೂಡಿಸಿ: ದನಕರುಗಳಿಗಾಗಿ ಕುಡಿಯಲು ನಿರ್ಮಿಸಿರುವ ನೀರಿನ ತೊಟ್ಟಿಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಾರಕ್ಕೊಮ್ಮೆ ಖಾಲಿ ಮಾಡಿಸಿ ಹೊಸದಾಗಿ ನೀರು ತುಂಬಿಸುವಂತೆ ವಾಟರ್‌ಮ್ಯಾನ್‌ ಗಳಿಗೆ ಸೂಚಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯ ಸಿಬ್ಬಂದಿ ವರ್ಗದವರು ಭೇಟಿ ನೀಡಿದ ವೇಳೆ ಡೆಂಘೀ, ಚಿಕೂನ್‌ಗುನ್ಯಾ ತಡೆಗಟ್ಟಲು ಸಾರ್ವಜನಿಕರಿಗೆ ಅರಿವು ಮೂಡಿಸಲು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ನೀರು ನಿಲ್ಲದಂತೆ ನೋಡಿಕೊಳ್ಳಿ: ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ಹೂಳನ್ನು ತೆಗೆಸಲು ಕ್ರಮವಹಿಸಬೇಕು, ಹಳೆಯ ಟೈಯರ್‌, ಒಡೆದ ಬಕೇಟ್‌, ಎಳನೀರು ಚಿಪ್ಪುಗಳು, ಪ್ಲಾಸ್ಟಿಕ್‌ ಲೋಟಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಓವರ್‌ಹೆಡ್‌ ಟ್ಯಾಂಕ್‌ಗಳನ್ನು ಪರಿಶೀಲಿಸಿ ಮುಚ್ಚಳ ಇಲ್ಲದೇ ಇರುವ ಟ್ಯಾಂಕ್‌ಗಳಿಗೆ ಮುಚ್ಚುವ ವ್ಯವಸ್ಥೆ ಮಾಡಬೇಕು. ರಸ್ತೆ ಗಳಲಿನ ಹಳ್ಳಕೊಳ್ಳಗಳಲ್ಲಿ ಆಗಿಂದ್ದಾಗ್ಗೆ ಹಳ್ಳಕೊಳ್ಳಗಳಿಗೆ ಮಣ್ಣನ್ನು ಹಾಕಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.

ಕರಪತ್ರಗಳನ್ನು ಹಂಚಿ: ಕುಡಿಯುವ ನೀರು ಸರಬರಾಜು ಮಾಡುವ ಪೈಪುಗಳು ಒಡೆದು ನೀರು ಶೇಖರಣೆಯಾಗದಂತೆ ಪೈಪುಗಳ ದುರಸ್ತಿ ಕಾರ್ಯವನ್ನು ಶೀಘ್ರವಾಗಿ ಮಾಡಿಸಬೇಕು. ಶಾಲಾ ಕಾಲೇಜುಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ, ಮೆದುಳು ಜ್ವರ, ಆನೆಕಾಲು ರೋಗಗಳ ಬಗ್ಗೆ ಮಕ್ಕಳಿಗೆ ಮುಖ್ಯೋಪಾಧ್ಯಾರು ಅರಿವು ಮೂಡಿಸಬೇಕು. ಅಲ್ಲದೆ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಕರಪತ್ರಗಳನ್ನು ಮುದ್ರಿಸಿ ಹಂಚಿಕೆ ಮಾಡಬೇಕು ಎಂದು ತಿಳಿಸಿದ್ದಾರೆ.

ಗ್ರಾಪಂ ಸಭೆ ನಡೆಸಿ ಅರಿವು ಮೂಡಿಸಿ: ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸುವಂತೆ ಹೊಸದಾಗಿ ಮನೆ ನಿರ್ಮಾಣ ಮಾಡುವವರಿಗೆ ಪರವಾನಗಿ ನೀಡುವ ಅಧಿಕಾರಿಗಳು ನಿಬಂಧನೆಗಳನ್ನು ಹಾಕಿ ಪರವಾನಗಿ ನೀಡುವಂತೆ ಆದೇಶಿಸಬೇಕು. ಸೊಳ್ಳೆ ನಿರೋಧಕಗಳಾದ ಕಾಯಿಲ್‌, ಸೊಳ್ಳೆ ನಿಯಂತ್ರಣ ಲಿಕ್ವಿಡ್‌, ಸೊಳ್ಳೆ ಬತ್ತಿ, ಸೊಳ್ಳೆ ಬ್ಯಾಟ್‌ ಬಳಸುವಂತೆ ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಜನರಿಗೆ ಅರಿವು ಮೂಡಿಸಬೇಕು.

Advertisement

ಸಮೀಕ್ಷೆ ನಡೆಸಿ: ನೀರಿನ ಸಂಗ್ರಹಾಗಾರಗಳಾದ ಸಿಮೆಂಟ್‌ ತೊಟ್ಟಿ, ಬಕೆಟ್‌ಗಳನ್ನು ವಾರಕ್ಕೊಮ್ಮೆಯಾದರೂ ಖಾಲಿ ಮಾಡಿ ಸ್ವತ್ಛಗೊಳಿಸಿ ಒಣಗಿಸಿ ವಾರದಲ್ಲಿ ಒಂದು ದಿನ ಒಣ ದಿನ ಆಚರಿಸುವಂತೆ ಕ್ರಮಕೈಗೊಳ್ಳಬೇಕು. ಕೆಲಸವನ್ನು ಅರಸಿ ಬೇರೆ ಕಡೆಯಿಂದ ಬರುವ ಕಾರ್ಮಿಕರ ಸಮೀಕ್ಷೆ ನಡೆಸಿ ಜ್ವರವಿರುವ ಕಾರ್ಮಿಕರು ಹತ್ತಿರವಿರುವ ಆಸ್ಪತ್ರೆಗಳಿಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಲು ಆರೋಗ್ಯ ಶಿಕ್ಷಣ ನೀಡಬೇಕು.

ಜನರಿಗೆ ತಿಳಿವಳಿಕೆ ನೀಡಿ: ಡೆಂಘೀ ಪ್ರಕರಣಗಳು ವರದಿಯಾಗಿರುವ ಪ್ರದೇಶದಲ್ಲಿ ಧೂಮೀಕರಣವನ್ನು ಮಾಡುವಲ್ಲಿ ಆರೋಗ್ಯ ಇಲಾಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಹಗಲಿನಲ್ಲಿ ಮಲಗುವ ವಯಸ್ಸಾದವರು, ಗರ್ಭಿಣಿಯರು, ಮಕ್ಕಳು ಮಲಗುವಾಗ ಸೊಳ್ಳೆಪರದೆಗಳನ್ನು ತಪ್ಪದೇ ಉಪಯೋಗಿಸಲು ತಿಳಿವಳಿಕೆ ನೀಡಬೇಕು ಎಂದು ಸಿಇಒ ತಿಳಿಸಿದ್ದಾರೆ.

ಕ್ರಿಮಿ ನಾಶಕ ಸಿಂಪಡಿಸಿ: ಸೊಳ್ಳೆ ಪರದೆಗಳನ್ನು ಉಪಯೋಗಿಸುವ ಕುರಿತು ಗ್ರಾಮ ಪಂಚಾಯಿತಿ ಸಭೆ ವೇಳೆ ಗ್ರಾಮ ಪಂಚಾಯಿತಿ ಸದಸ್ಯರು ಜನರಿಗೆ ಅರಿವು ಮೂಡಿಸುವಂತೆ ಸದಸ್ಯರಿಗೆ ಮನವಿ ಮಾಡಬೇಕು. ಊರಿನ ಸುತ್ತಮುತ್ತ ಇರುವ ನೀರಿನ ಕೆರೆ ಮತ್ತು ಹೊಂಡಗಳಿಗೆ ಲಾರ್ವಾಹಾರಿ ಮೀನುಗಳಾದ ಗ್ಯಾಂಬೋಸಿಯಾ/ಗಪ್ಪೀ ಮೀನುಗಳನ್ನು ಬಿಟ್ಟು ಲಾರ್ವಾಗಳನ್ನು ನಿರ್ಮೂಲನೆ ಮಾಡಿ ಡೆಂಘೀ ಚಿಕೂನ್‌ಗುನ್ಯಾವನ್ನು ತಡೆಗಟ್ಟುವ ಕೆಲಸವನ್ನು ಮಾಡಬೇಕು.

ಕುಡಿಯಲು ಉಪಯೋಗಕ್ಕೆ ಬಾರದ ನೀರಿನ ತಾಣಗಳಿಗೆ ಆರೋಗ್ಯ ಇಲಾಖೆಯವರ ಜೊತೆಗೂಡಿ ಕ್ರಿಮಿನಾಶಕಗಳನ್ನು ಸಿಂಪಡಿಸಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ತಡೆಗಟ್ಟಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next