Advertisement

“ದಡಾರ, ರೂಬೆಲ್ಲಾ ನಿರ್ಮೂಲನೆಗೆ ಕ್ರಮ ಕೈಗೊಳ್ಳಿ’: ಜಿಲ್ಲಾಧಿಕಾರಿ ಕೂರ್ಮಾರಾವ್‌

03:39 PM Jun 03, 2023 | Team Udayavani |

ಮಣಿಪಾಲ: ಮಕ್ಕಳಲ್ಲಿ ಕಂಡು ಬರುವ ದಡಾರ, ರೂಬೆಲ್ಲಾ ರೋಗವನ್ನು ಜಿಲ್ಲೆಯಿಂದ ಸಂಪೂರ್ಣ ನಿರ್ಮೂಲನೆ ಮಾಡುವ ಕುರಿತು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ.ಸೂಚನೆ ನೀಡಿದರು.

Advertisement

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಎಂ.ಆರ್‌.ಎಲಿಮಿನೇಶನ್‌ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಕಾಯಿಲೆ 5 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಅಪಾಯ ಕಾರಿಯಾಗಿದೆ. ದಡಾರ ತೀವ್ರ ಸಾಂಕ್ರಾಮಿಕ ರೋಗವಾಗಿದ್ದು ಇದರಿಂದ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳಲಿದೆ ಮತ್ತು ಚರ್ಮದ ಮೇಲೆ ಕೆಂಪು ದದ್ದುಗಳು ಉಂಟಾಗಲಿದೆ. ಈ ರೋಗವು ಲಸಿಕೆ ಪಡೆಯದ ಮಕ್ಕಳಲ್ಲಿ ಹೆಚ್ಚು ಅಪಾಯಕಾರಿಯಾಗಲಿದ್ದು, ಮಕ್ಕಳ ಸಾವಿಗೂ ಕಾರಣ ವಾಗಬಹುದು. ಈ ಕಾರಣಕ್ಕೆ ಜಿಲ್ಲೆಯ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಈ ರೋಗ ಕಂಡು ಬಾರದಂತೆ ಲಸಿಕೆ ನೀಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ವಿಶ್ವದಲ್ಲೇ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಡಾರ ರೂಬೆಲ್ಲಾ ಪ್ರಕರಣಗಳು ವರದಿಯಾಗುತ್ತಿದ್ದು, ಜಿಲ್ಲೆಯಲ್ಲಿ ಈ ವರ್ಷದ ಮೇ ಅಂತ್ಯದವರೆಗೆ 59 ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ 5 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡುವ ಕುರಿತಂತೆ ಕ್ರಿಯಾ ಯೋಜನೆ ರೂಪಿಸಿ, ಅದರಂತೆ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ಎಲ್ಲ ಖಾಸಗಿ ನರ್ಸಿಂಗ್‌ ಹೋಂಗಳು, ಕ್ಲಿನಿಕ್‌ಗಳು ಸಮನ್ವಯದೊಂದಿಗೆ ರೋಗ ನಿರ್ಮೂಲನಕ್ಕೆ ಬೇಕಾದ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಜಿ.ಪಂ. ಸಿಇಒ ಪ್ರಸನ್ನ ಎಚ್‌., ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ನಾಗಭೂಷಣ ಉಡುಪ, ಜಿಲ್ಲಾ ಆರ್‌.ಸಿ.ಎಚ್‌. ಅಧಿಕಾರಿ ಡಾ| ಎಂ.ಜಿ.ರಾಮ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ| ಅನಂತೇಶ್‌, ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next