Advertisement

ನಕಲಿ ವೈದ್ಯರ ಮೇಲೆ ಕ್ರಮಕೈಗೊಳ್ಳಿ

01:09 PM Jun 23, 2019 | Team Udayavani |

ಕೋಲಾರ: ಕೆಪಿಎಂಇ ಕಾಯ್ದೆ ಉಲ್ಲಂಘಿಸಿ ಕ್ಲಿನಿಕ್‌ ನಡೆಸುತ್ತಿರುವ ಬಗ್ಗೆ ದೂರು ಸಾರ್ವಜನಿಕರಿಂದ ದೂರು ಬಂದಿದ್ದು, ಮುಲಾಜಿಗೆ ಒಳಗಾಗದೆ ನಕಲಿ ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಪಿಎಂಇ ಕಾಯ್ದೆ ಕುರಿತು ನಡೆದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಈಗಾಗಲೇ ನಕಲಿ ಕ್ಲಿನಿಕ್‌ಗಳನ್ನು ಮುಚ್ಚಲಾಗಿದ್ದು, ಅರ್ಹತೆ ಇರುವವರು ಅರ್ಜಿ ಸಲ್ಲಿಸಿದರೆ ಅನುಮತಿ ನೀಡಲಾಗುವುದು, ಅದು ಬಿಟ್ಟು ಅನುಮತಿ ಪಡೆಯದೇ ಕ್ಲಿನಿಕ್‌ ನಡೆಸಿದರೆ ಕಠಿಣ ಕ್ರಮ ಅನಿವಾರ್ಯ ಎಂದು ಹೇಳಿದರು.

ಎಚ್ಚರಿಕೆ ನೀಡಿದ್ದೇವೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಎಸ್‌.ಎನ್‌.ವಿಜಯಕುಮಾರ್‌, ಹೊಸದಾಗಿ ಕ್ಲಿನಿಕ್‌ ನಡೆಸಲು 100 ಅರ್ಜಿಗಳು ಬಂದಿದ್ದು, ಆ ಪೈಕಿ 20 ಸ್ಥಳ ಪರಿಶೀಲನಾ ಸಮಿತಿಯವರು ತಿರಸ್ಕೃತಗೊಳಿಸಿದ್ದು, ಈಗ ಅವರು ಮೇಲ್ಮನವಿ ಹಾಕಿಕೊಂಡಿದ್ದಾರೆ. ಹಿಂದೆ 156 ನಕಲಿ ಕ್ಲಿನಿಕ್‌ಗಳನ್ನು ಮುಚ್ಚಲಾಗಿದ್ದು, ಮತ್ತೆ ತೆರೆಯದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಅಧಿಕಾರಿಗಳ ವಿರುದ್ಧವೂ ಕ್ರಮ: ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಮುಚ್ಚಲಾಗಿರುವ ಕ್ಲಿನಿಕ್‌ಗಳು ಮತ್ತೆ ತೆರೆದಿರುವ ಕುರಿತು ದೂರುಗಳು ಬಂದಿವೆ. ನಾನು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಂಡುಬಂದರೆ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಕಲಿ ವೈದ್ಯರ ನಿಯಂತ್ರಿಸಿ: ಗಡಿ ಗ್ರಾಮಗಳಲ್ಲಿ ಇನ್ನು ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಮೊದಲು ಗಡಿಭಾಗಕ್ಕೆ ಹೋಗಿ ವೈದ್ಯರ ವಿರುದ್ಧ ಕ್ರಮಕೈಗೊಳ್ಳಿ. ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರಕಾರ ಕಾಯ್ದೆ ಜಾರಿಗೆ ತಂದಿದೆ. ನಕಲಿ ವೈದ್ಯರನ್ನು ನಿಯಂತ್ರಣ ಮಾಡಬೇಕಾದ ಜವಾಬ್ದಾರಿ ಇಲಾಖೆಯ ಮೇಲಿದೆ ಎಂದು ಹೇಳಿದರು.

Advertisement

ಅವಕಾಶ ನೀಡಬೇಡಿ: ಕೆಪಿಎಂಇ ನೋಂದಣಿ ಪ್ರಮಾಣಪತ್ರ ಇಲ್ಲದೆ ಕೆಲ ನಕಲಿ ವೈದ್ಯರು, ಖಾಸಗಿಯಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವುದು ಕಂಡುಬಂದಿದೆ. ಅನುಮತಿ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸುವುದು ಕಾನೂನು ಪ್ರಕಾರ ಅಪರಾಧ. ಇದಕ್ಕೆ ಇಲಾಖೆ ಅವಕಾಶ ನೀಡಬಾರದು ಎಂದು ಆದೇಶಿಸಿದರು.

ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ಅನಧಿಕೃತ ಕ್ಲಿನಿಕ್‌ಗಳ ಪತ್ತೆಗಾಗಿ ಕಂದಾಯ ಇಲಾಖೆ, ಆರೋಗ್ಯ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಸಮರ್ಪಕವಾಗಿ ಕೆಲಸ ಮಾಡಬೇಕು. ತಂಡದ ಸದಸ್ಯರು ನಕಲಿ ವೈದ್ಯರ ಕ್ಲಿನಿಕ್‌ ಮುಚ್ಚಿದ್ದು, ಮತ್ತೆ ತೆರೆಯದಂತೆ ನೋಡಿಕೊಳ್ಳಬೇಕು. ಕಾನೂನು ಪ್ರಕಾರ ನಡೆಸಲು ಅರ್ಜಿ ಅನುಮತಿ ಪಡೆದುಕೊಳ್ಳಲಿ ಎಂದು ತಿಳಿಸಿದರು.

ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ ಮತ್ತು ಪಾರಂಪರಿಕ ವೈದ್ಯರೆಂದು ಸುಳ್ಳು ಹೇಳಿಕೊಂಡು ನಕಲಿ ವೈದ್ಯರು ಸಾರ್ವಜನಿಕರಿಗೆ ವಂಚಿಸುತ್ತಿರುವುದು ಗೊತ್ತಾಗಿದೆ. ಇವರು ವೈದ್ಯಕೀಯ ವೃತ್ತಿ ಮುಂದುವರಿಸಿದರೆ ಕರ್ನಾಟಕ ಆಯುರ್ವೇದ ನ್ಯಾಚ್ಯೂರೋಪತಿ, ಸಿದ್ಧ, ಯುನಾನಿ ಮತ್ತು ಯೋಗ ಪ್ರ್ಯಾಕ್ಟಿಷನರ್ಸ್‌ ರಿಜಿಸ್ಟ್ರೇಷನ್‌ ಕಾಯ್ದೆ 1961ರಡಿ ಕ್ರಿಮಿನಲ್ ಪ್ರಕರಣ ದಾಖಲಿ ಕ್ರಮಕೈಗೊಳ್ಳಿ ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಆರ್‌ಸಿಎಚ್ಒ ಡಾ.ಚಂದನ್‌, ಕುಟುಂಬ ಕಲ್ಯಾಣಾಧಿಕಾರಿ ಡಾ.ಭಾರತಿ, ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಜಗದೀಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next