Advertisement

ಮಕ್ಕಳ ಹಾಜರಾತಿಗೆ ಕ್ರಮ ಕೈಗೊಳ್ಳಿ; ಜಿಪಂ ಸಿಇಒ

05:25 PM Feb 03, 2021 | Nagendra Trasi |

ವಿಜಯಪುರ: ಎಸ್ಸೆಸ್ಸೆಲ್ಸಿ ಪಠ್ಯಕ್ರಮ ಕ್ರಿಯಾಯೋಜನೆ ತಯಾರಿಸಿ, ಅನುಷ್ಠಾನಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಇದರ ಜೊತೆಗೆ ಪರೀಕ್ಷೆ ಎದುರಿಸಲು ಮಕ್ಕಳನ್ನು ಈಗಿನಿಂದಲೇ ಸನ್ನದ್ಧಗೊಳಿಸಿ, ಮಕ್ಕಳಲ್ಲಿ ಪರೀಕ್ಷೆ ಬರೆಯುವ ಕುರಿತು ಆತ್ಮವಿಶ್ವಾಸ ವೃದ್ಧಿಸುವಂತೆ ಜಿಪಂ ಸಿಇಒ ಲಕ್ಷ್ಮೀಕಾಂತರೆಡ್ಡಿ ಸೂಚಿಸಿದರು. ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯ ಬಿಆರ್‌ಸಿ, ಸಿಆರ್‌ಪಿ ಅಧಿಕಾರಿಗಳೊಂದಿಗೆ ನಡೆದ ಎಸ್ಸೆಸ್ಸೆಲ್ಸಿ
ಪರೀಕ್ಷಾ ಸಿದ್ಧತೆ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಜಿಲ್ಲೆಯ ಎಲ್ಲ ಶಾಲಾ ಮಕ್ಕಳು ಶಾಲೆಗೆ ಹಾಜರಾಗುವಂತೆ ಎಲ್ಲ ಕ್ರಮ ಕೈಗೊಳ್ಳಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವಭಾವಿ ಸಿದ್ಧತೆ ಅಂಗವಾಗಿ ಎಲ್ಲ ವಿದ್ಯಾರ್ಥಿಗಳು ಶಾಲೆಗಳಿಗೆ ಫೆ. 12ರೊಳಗೆ ಹಾಜರಾಗುವಂತೆ ನೋಡಿಕೊಳ್ಳಲು ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ವಿದ್ಯಾರ್ಥಿಗಳಲ್ಲಿ ಬರಹದ ಸಾಮರ್ಥ್ಯ ಹೆಚ್ಚಿಸಲು ಈಗಾಗಲೇ ಹಂಚಿಕೆ ಮಾಡಿದ ತಾಲೂಕುಗಳ ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ಏ. 1ರಿಂದ
ಮೇ 15ರೊಳಗೆ ವಾರಕ್ಕೆ ಒಂದು ಬಾರಿಯಂತೆ 6 ವಾರಗಳ ಪ್ರಶ್ನೆ ಪತ್ರಿಕೆ-ಉತ್ತರ ಪತ್ರಿಕೆಗಳನ್ನು ವಿಷಯವಾರು ತಯಾರಿಸಿ, ಪ್ರತಿ ವಾರ ಪರೀಕ್ಷೆ
ನಡೆಸಬೇಕು. ಇದರೊಂದಿಗೆ ಮಕ್ಕಳಲ್ಲಿ ಪರೀಕ್ಷೆ ಎದುರಿಸುವಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಲಿ ಎಂದು ನಿರ್ದೇಶನ ನೀಡಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಯಚೂರು ಜಿಲ್ಲೆಯಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು, ಶೇ. 8ರಷ್ಟು ಫಲಿತಾಂಶ ಹೆಚ್ಚಿದೆ. ವಿಜಯಪುರ ಜಿಲ್ಲೆಯಲ್ಲೂ ಶೇ. 100 ಫಲಿತಾಂಶ ತರಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಉಪನ್ಯಾಸಕ ಎಂ.ಎ. ಗುಳೇದಗುಡ್ಡ ಮಾತನಾಡಿ, ಜಿಲ್ಲೆಯ ಕಳೆದ ಶೈಕ್ಷಣಿಕ ವರ್ಷದ ಫಲಿತಾಂಶ ವಿಶ್ಲೇಷಿಸಿ ಈ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪ ನಿರ್ದೇಶಕರ ಕಾರ್ಯಾಲಯ
ವಿಜಯಪುರ ಸಹಯೋಗದೊಂದಿಗೆ 100 ದಿನಗಳ ಪಠ್ಯಕ್ರಮ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದರು.

Advertisement

ತಾಲೂಕಿಗೆ ಒಂದೊಂದು ವಿಷಯವನ್ನು ಹಂಚಿಕೆ ಮಾಡಿ ಸಂಪನ್ಮೂಲ ಶಿಕ್ಷಕರ ಸಹಾಯದೊಂದಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಫೆ. 1ರಿಂದ
ಮೇ 15ರೊಳಗೆ ಎಲ್ಲ ವಿಷಯಗಳ ಪಠ್ಯಕ್ರಮ ಬೋಧನೆಯನ್ನು ಪೂರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಸರಕಾರ ನಿಗದಿಪಡಿಸಿದ ರೂಪಣಾತ್ಮಕ ಮೌಲ್ಯಮಾಪನ ಪರೀಕ್ಷೆಗಳನ್ನು ಜಿಲ್ಲಾ ಹಂತದಲ್ಲಿ ಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಹಾಜರಿದ್ದ ಎಲ್ಲ ಶಿಕ್ಷಣ ಅಧಿಕಾರಿಗಳಿಗೆ ಪಠ್ಯಕ್ರಮ ಕ್ರಿಯಾಯೋಜನೆ ಕನ್ನಡ, ಇಂಗ್ಲಿಷ್‌ ಹಾಗೂ ಉರ್ದು ಮಾಧ್ಯಮದ ತಲಾ ಒಂದೊಂದು ಪ್ರತಿಗಳನ್ನು ಸಿಇಒ ಅವರಿಗೆ ಹಸ್ತಾಂತರಿಸಿದರು.

ಪ್ರಾಂಶುಪಾಲರು ಆರ್‌.ವೈ. ಕೊಣ್ಣೂರ ಸೇರಿದಂತೆ ಶಿಕ್ಷಣ ಇಲಾಖೆ ಅಧಿ ಕಾರಿಗಳು ಪಾಲ್ಗೊಂಡಿದ್ದರು. ಶಿಕ್ಷಣಾಧಿಕಾರಿ ಎಸ್‌.ಎ. ಮುಜಾವರ್‌ ಸ್ವಾಗತಿಸಿದರು.
ಆರ್‌.ಎಲ್‌. ಯಲ್ಲಡಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next