Advertisement

ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಿ

07:04 AM Mar 16, 2019 | |

ದಾವಣಗೆರೆ: ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆಗಳ ದುರಸ್ತಿ, ಟ್ಯಾಕ್ಸಿ ಸ್ಟ್ಯಾಂಡ್‌ ಸ್ಥಳಾಂತರ, ನಗರ ಸಾರಿಗೆ ಬಸ್‌ ಗಳಿಗೆ ಪ್ರತ್ಯೇಕ ನಿಲ್ದಾಣ, ಅಶೋಕ ಚಿತ್ರಮಂದಿರದ ಬಳಿ ಮೇಲ್ಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಶುಕ್ರವಾರ ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ.

Advertisement

ಸಭೆ ಪ್ರಾರಂಭದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀಕಾಂತ್‌ ಭೀ.ನಾಲವಾರ್‌, ಮಹಾನಗರಪಾಲಿಕೆ ವ್ಯಾಪ್ತಿಯ ರಸ್ತೆಗಳ ದುರಸ್ತಿ, ಟ್ಯಾಕ್ಸಿ ಸ್ಟ್ಯಾಂಡ್‌ ಸ್ಥಳಾಂತರ, ಸಿಟಿ ಬಸ್‌ಗಳಿಗೆ ಪ್ರತ್ಯೇಕ ನಿಲ್ದಾಣ, ನಿಲ್ದಾಣಗಳ ಬಳಿ ವಾಹನ ದಟ್ಟಣೆ ನಿಯಂತ್ರಣ, ಅಶೋಕ, ಅರುಣ ಟಾಕೀಸ್‌ ಎದುರಿನ ರೇಲ್ವೆ ಗೇಟ್‌ನಿಂದ ಉಂಟಾಗುವ ಸಮಸ್ಯೆ ನಿವಾರಣೆಗೆ ಮೇಲ್ಸೇತುವೆ ನಿರ್ಮಾಣ ಸೇರಿದಂತೆ ವಿವಿಧ ವಿಷಯ ಪ್ರಸ್ತಾಪಿಸಿದರು.

ನಗರ ವ್ಯಾಪ್ತಿಯ ರಸ್ತೆಗಳಲ್ಲಿನ ಗುಂಡಿಗಳನ್ನು ಕೂಡಲೇ ಮುಚ್ಚಿಸುವ ಜತೆಗೆ ಹೊಸ ರಸ್ತೆಗಳ ಪಕ್ಕದಲ್ಲಿರುವ ತಗ್ಗುಗಳನ್ನು ಮುಚ್ಚಿ ಫುಟ್‌ಪಾತ್‌ ನಿರ್ಮಿಸಬೇಕು. ದಾವಣಗೆರೆಯಲ್ಲಿ ಮಹಾನಗರ ಪಾಲಿಕೆಯಿಂದ ಬೀದಿ ದೀಪ ನಿರ್ವಹಣೆಗೆ ಸಮರ್ಪಕ ಕ್ರಮ ಕೈಗೊಳ್ಳುವಂತೆ ಪಾಲಿಕೆ ಇಂಜಿನಿಯರ್‌ ಸತೀಶ್‌ಗೆ ಜಿಲ್ಲಾಧಿಕಾರಿ ಸೂಚಿಸಿದರು.

 ಯುಬಿಡಿಟಿ ಇಂಜಿನಿಯರಿಂಗ್‌ ಕಾಲೇಜಿನ ಮುಂಭಾಗದಲ್ಲಿರುವ ಟ್ಯಾಕ್ಸಿ ಸ್ಟ್ಯಾಂಡನ್ನು ಸ್ಥಳಾಂತರಿಸುವ ಕುರಿತು ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಟ್ಯಾಕ್ಸಿ ಮಾಲೀಕರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಾಲಿಕೆಯ ಜಾಗದಲ್ಲಿ ಶಾಶ್ವತ ಟ್ಯಾಕ್ಸಿ ಸ್ಟ್ಯಾಂಡ್‌ ನಿರ್ಮಿಸಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.

ನಗರ ಸಾರಿಗೆ ಬಸ್‌ಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆಗೆ ಕಳೆದ ಬಾರಿಯ ಸಭೆಯಲ್ಲಿ ಮಹಾನಗರ ಪಾಲಿಕೆಯವರಿಗೆ ತಿಳಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ನಿರ್ಮಾಣವಾಗಿಲ್ಲ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸಭೆ ಗಮನ ಸೆಳೆದರು. ನಗರದಲ್ಲಿ ಸಿಟಿ ಬಸ್‌ಗಳ ಪ್ರತ್ಯೇಕ ನಿಲ್ದಾಣ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣವಾಗಲಿದೆ ಎಂದು ಪಾಲಿಕೆ ಇಂಜಿನಿಯರ್‌ ಸತೀಶ್‌ ತಿಳಿಸಿದರು.

Advertisement

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಖಾಸಗಿ ಬಸ್‌ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದ ಬಳಿ ವಾಹನ ದಟ್ಟಣೆ ನಿಯಂತ್ರಿಸುವ ಬಗ್ಗೆ ಪ್ರಸ್ತಾಪಿಸಿದಾಗ ಜಿಲ್ಲಾಧಿಕಾರಿಗಳು, ನಿಲ್ದಾಣಗಳ ಬಳಿ ಆಟೋಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿ, ವಾಹನ ದಟ್ಟಣೆ ನಿಯಂತ್ರಿಸಲು ಸೂಚಿಸಿದರಲ್ಲದೆ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಬಾಗಿಲು ಮುಚ್ಚದೇ ಚಲಿಸುತ್ತಿವೆ. ಚಾಲಕರಿಗೆ ಕಡ್ಡಾಯವಾಗಿ ಬಾಗಿಲು ಹಾಕಿ ಚಲಾಯಿಸುವಂತೆ ಸೂಚಿಸಿ ಎಂದು ತಿಳಿಸಿದರು.

ದೇವರಾಜ ಅರಸು ಬಡಾವಣೆಯ ಕೋರ್ಟ್‌ ರಸ್ತೆಯಲ್ಲಿರುವ ರೈಲ್ವೆ ಅಂಡರ್‌ ಬ್ರಿಡ್ಜ್ನಲ್ಲಿರುವ ಒಳಚರಂಡಿ ವ್ಯವಸ್ಥೆ ಸುಸಜ್ಜಿತಗೊಳಿಸಲು ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದೇವಸ್ಥಾನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿವಮೂರ್ತಿ ಸೂಚಿಸಿದರು.

ಹರಿಹರದ ಶಿವಮೊಗ್ಗ ರಸ್ತೆಯ ವಿದ್ಯಾನಗರದ ವಸತಿ ಪ್ರದೇಶಗಳಲ್ಲಿ ಖಾಸಗಿ ಬಸ್‌ಗಳ ನಿಲುಗಡೆಯಿಂದಾಗಿ ಉಂಟಾಗುತ್ತಿರುವ ಶಬ್ದ ಮಾಲಿನ್ಯ ಅಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬಸ್‌ ನಿಲುಗಡೆ ಸ್ಥಳಾಂತರಿಸಲು ನಾಗರಾಜ.ಸಿ ಕುರುವತ್ತಿ ಸಲ್ಲಿಸಿದ ಮನವಿ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು. 

ಕೆ.ಆರ್‌ ಮಾರುಕಟ್ಟೆಯ ರಸ್ತೆಗಳಲ್ಲಿ ಭಾರಿ ಸರಕು ವಾಹನಗಳ ಸಂಚಾರದಿಂದಾಗಿ ವಾಹನ ದಟ್ಟಣೆಯಾಗುತ್ತಿದೆ. ಆದ್ದರಿಂದ ಮಾರುಕಟ್ಟೆಗೆ ಅವುಗಳ ಪ್ರವೇಶ ನಿರ್ಬಂಧಿಸಲಾಗುವುದು. ವ್ಯಾಪಾರಿಗಳಿಗೆ ಗೋದಾಮು ನಗರದ ಹೊರಭಾಗದಲ್ಲಿ ನಿರ್ಮಿಸಿಕೊಳ್ಳಲು ನೋಟಿಸ್‌ ನೀಡುವುದಾಗಿ ಹೆಚ್ಚವರಿ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಉದೇಶ್‌ ತಿಳಿಸಿದರು.

ಸಭೆಯಲ್ಲಿ ದೂಡಾ ಆಯುಕ್ತ ಆದಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೆಎಸ್‌ಆರ್‌ಟಿಸಿ ಅಧಿಕಾರಿ ಭಾಗ್ಯ, ನಗರ ಡಿವೈಎಸ್ಪಿ ನಾಗರಾಜ್‌, ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. 

ರೈಲ್ವೆ ಗೇಟ್‌ ಸಮಸ್ಯೆಗೆಸಿಗದ ಪರಿಹಾರ 
ದಾವಣಗೆರೆ: ನಗರದ ಅಶೋಕ ಚಿತ್ರಮಂದಿರದ ಬಳಿಯ ರೈಲ್ವೆ ಗೇಟ್‌ ಸಮಸ್ಯೆಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು, ಚಾಲಕರಿಗೆ ಸದ್ಯ ಮುಕ್ತಿ ದೊರೆಯುವಂತೆ ಕಾಣುತ್ತಿಲ್ಲ. ಆ ರಸ್ತೆಯಲ್ಲಿ ದಶಕಗಳಿಂದ ವಾಹನ ಚಾಲಕರು-ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ರೈಲ್ವೆ ಗೇಟ್‌ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಕಾಲ ಕೂಡಿಬರುವುದು ಕಷ್ಟವೇನೋ ಎಂಬಂತಾಗಿದೆ.

 ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅಶೋಕ ಹಾಗೂ ಅರುಣ ಚಿತ್ರಮಂದಿರದ ಬಳಿ ರೈಲ್ವೆ ಗೇಟ್‌ನಿಂದಾಗಿ ಆಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಮೇಲ್ಸೇತುವೆ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದಾಗ, ಅಶೋಕ ಮತ್ತು ಅರುಣ ಚಿತ್ರಮಂದಿರದ ರಸ್ತೆಗಳು ಕೇವಲ 18 ಮೀಟರ್‌ ಅಗಲ ಇವೆ. ಮೇಲ್ಸೇತುವೆ ನಿರ್ಮಾಣದ ಪಿಲ್ಲರ್‌ಗಾಗಿ 11 ಮೀಟರ್‌ ಸ್ಥಳಾವಕಾಶ ಅಗತ್ಯವಿದೆ. ಮೇಲಾಗಿ ಸರ್ವಿಸ್‌ ರಸ್ತೆ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆಯಿದೆ. ಖಾಸಗಿ ಮಾಲಿಕತ್ವದ ಜಾಗ ವಶಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಹಾನಗರ ಪಾಲಿಕೆ ಇಂಜಿನಿಯರ್‌ ಸತೀಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next