ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಎಲ್ಲೆಂದರಲ್ಲಿ ಕಟ್ಟಡಗಳ ಅವಶೇಷಗಳನ್ನು ಸುರಿಯುವುದಕ್ಕೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ರಂದೀಪ್ ಡಿ. ಸೂಚಿಸಿದರು. ಸ್ವಚ್ಛ ಸರ್ವೇಕ್ಷಣ್ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಸೂರು ಮಹಾ ನಗರಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿದರು.
ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆಗೆ ಸಭೆ ನಡೆಸಿ ತಂಡಗಳನ್ನು ರಚನೆ ಮಾಡುವ ಮೂಲಕ ಕಟ್ಟಡಗಳ ಅವಶೇಷಗಳನ್ನು ಸುರಿಯದಂತೆ ಎಚ್ಚರವಹಿಸಿ, ಮುಂದಿನ ಒಂದು ತಿಂಗಳೊಳಗೆ ಪೂರ್ಣಪ್ರಮಾಣದಲ್ಲಿ ಸ್ವಚ್ಛತೆ ಮಾಡಿ ಎಂದು ಹೇಳಿದರು.
ತಂಡ ರಚನೆ ಅವಶ್ಯ: ಮುಡಾ ಆಯುಕ್ತ ಕಾಂತರಾಜು ಮಾತನಾಡಿ, ನಗರದ ವರ್ತುಲ ರಸ್ತೆಯಲ್ಲಿ ಕಟ್ಟಡ ಅವಶೇಷ ಸುರಿಯುವುದನ್ನು ತಡೆಯಲು ಮುಡಾ ಮತ್ತು ಮಹಾ ನಗರಪಾಲಿಕೆ ಗುತ್ತಿಗೆದಾರರ ಸಭೆ ನಡೆಸಿ ಸೂಚನೆ ನೀಡಿದರೂ ಯಾವುದೇ ಪ್ರಯೋಜನವಾಗದ ಕಾರಣ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಹಕಾರ ಕೋರಿದ್ದೇವೆ. ಡೆಬ್ರಿಸ್ ತಂದು ಸುರಿಯುವವರಿಗೆ ಹೆಚ್ಚಿನ ಮೊತ್ತದ ದಂಡ ವಿಧಿಸಿದರೆ ತಪ್ಪಬಹುದು, ಜತೆಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ತಂಡ ರಚಿಸಿ, ಆಗಾಗ್ಗೆ ಪರಿಶೀಲನೆ ಮಾಡಿದರೆ ಡೆಬ್ರಿಸ್ ಕಡಿಮೆಯಾಗಲಿದೆ ಎಂದರು.
ಸರ್ಕಾರಿ ಇಲಾಖೆಯಿಂದಲೇ ಕೃತ್ಯ: ನಗರಪಾಲಿಕೆ ಆಯುಕ್ತ ಜಿ.ಜಗದೀಶ ಮಾತನಾಡಿ, ಕಟ್ಟಡಗಳ ಅವಶೇಷ ತಂದು ಸುರಿಯುವ ಸಾರ್ವಜನಿಕರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಆದರೆ, ಸರ್ಕಾರಿ ಇಲಾಖೆಗಳೇ ಇಂತಹ ಕೆಲಸ ಮಾಡುತ್ತಿವೆ. ನಗರದ ಹೃದಯ ಭಾಗದ ರೇಸ್‌ಕೋರ್ಸ್ ಹಿಂದೆ ಹೆದ್ದಾರಿ ಮತ್ತು ಪಾಲಿಕೆ ಗುತ್ತಿಗೆದಾರರೇ ಅವಶೇಷ ತಂದು ಸುರಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ಪ್ರಾಯೋಗಿಕವಾಗಿ ಬೆಂಗಳೂರು ರಸ್ತೆಗೆ ಸಿಸಿಟಿವಿ ಹಾಕಿಸುತ್ತಿದ್ದು, ಯಶಸ್ವಿಯಾದರೆ ಬೇರೆ ಕಡೆಗಳಿಗೂ ಸಿಸಿಟಿವಿ ಅಳವಡಿಸುವುದಾಗಿ ಹೇಳಿದ ಅವರು, ಮರಳು ಸಾಗಣೆ ಲಾರಿಗಳಿಗೆ ಅಳವಡಿಸಿರುವಂತೆ ಕಟ್ಟಡ ಅವಶೇಷಗಳನ್ನು ಸಾಗಣೆ ಮಾಡುವ ವಾಹನಗಳಿಗೂ ಜಿಪಿಎಸ್ ಅಳವಡಿಸಿದರೆ ಅನುಕೂಲವಾಗಲಿದೆ ಎಂದರು.
ಸ್ವಚ್ಛ ಸರ್ವೇಕ್ಷಣ್: ಜ.4ರಿಂದ ನಗರದಲ್ಲಿ ಸ್ವಚ್ಛ ಸರ್ವೇಕ್ಷಣ್ ಆರಂಭವಾಗುವುದರಿಂದ ಪಾಲಿಕೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಜಿಲ್ಲಾಧಿಕಾರಿಗಳು ಹೇಳಿದರು. ಸ್ವಚ್ಛ ಸರ್ವೇಕ್ಷಣ್‌ಗೆ ಸಾರ್ವಜನಿಕರ ಅಭಿಪ್ರಾಯವು ಮುಖ್ಯ.
ಸ್ವಚ್ಛತಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸಾರ್ವಜನಿಕರು ನಗರದ ಸ್ವಚ್ಛತೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರೆ ಪಾಲಿಕೆಗೆ ಹೆಚ್ಚಿನ ಅಂಕ ದೊರೆಯಲಿದೆ. ಕಳೆದ ಬಾರಿ ಸಾರ್ವಜನಿಕರ ಅಭಿಪ್ರಾಯ ಬಂದಿದ್ದು ಕೇವಲ 5 ಸಾವಿರ. ಇಂದೋರ್ 50 ಸಾವಿರ ಫೀಡ್‌ಬ್ಯಾಕ್ ಪಡೆದಿತ್ತು ಎಂದು ಪಾಲಿಕೆ ಆಯುಕ್ತ ಜಗದೀಶ ಹೇಳಿದರು.