ಬೆಂಗಳೂರು: ಲಾಕ್‌ಡೌನ್ ಸನ್ನಿವೇಶ ದುರ್ಬಳಕೆ ಮಾಡಿಕೊಂಡು ಕೆಲ ವ್ಯಾಪಾರಸ್ಥರು ಅಗತ್ಯ ವಸ್ತುಗಳ ಬೆಲೆಯನ್ನು ದಿಢೀರ್ ಏರಿಕೆ ಮಾಡಿದ್ದಾರೆ. ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಅಗತ್ಯ ವಸ್ತುಗಳ ಬೆಲೆಯನ್ನು ಶೇ. 20-30 ರಷ್ಟು ಏರಿಕೆ ಮಾಡಿದರೆ ಈಗಾಗಲೇ ಕಷ್ಟ ದಲ್ಲಿರುವ ಬಡವರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ಅಕ್ಕಿ, ಬೇಳೆ ಬೆಲೆ ಹೆಚ್ಚಾದರೆ ಖರೀದಿ ಮಾಡುವುದಾದರೂ ಹೇಗೆ? ಎಂದು ಪ್ರಶ್ನಿಸಿರುವ ಅವರು, ಈಗಲೇ ಅವರಿಗೆ ದುಡಿಮೆ ಇಲ್ಲ, ಹಣವೂ ಇಲ್ಲ. ಈ ಕುರಿತು ಗಮನ ಹರಿಸಿ, ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಯವರು ಆಹಾರ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಳೆ ಹಾನಿ-ಪರಿಹಾರಕ್ಕೆ ಆಗ್ರಹ: ರಾಜ್ಯದ ವಿವಿಧೆಡೆ ಇತ್ತೀಚೆಗೆ ಭಾರಿ ಮಳೆಯಾಗಿದೆ ಇದರಿಂದ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತಿತರ ಜಿಲ್ಲೆಗಳಲ್ಲಿ ಭತ್ತ, ಕಬ್ಬು, ಬಾಳೆ ಬೆಳೆಗೆ ಹಾನಿಯಾಗಿದೆ. ಎಲ್ಲೆಲ್ಲಿ ಹಾನಿಯಾಗಿದೆ. ಅಲ್ಲಿ ಪರಿಹಾರ ಕೊಡಬೇಕು. ಬೆಳೆ ನಷ್ಟ ಕುರಿತು ಸಮೀಕ್ಷೆ ನಡೆಸಬೇಕು.
ಆಗ್ರಹ: ಇತ್ತೀಚೆಗೆ ಇಡೀ ಅಲ್ಪ ಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಕೆಲವರು ಮಾತನಾಡುತ್ತಿದ್ದಾರೆ. ನಿಜಾಮುದ್ದೀನ್‌ಗೆ ಹೋಗಿ ಬಂದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಿ. ಇದಕ್ಕೆ ನಮ್ಮ ತಕರಾರು ಇಲ್ಲ. ಒಂದು ವೇಳೆ ನಿಜಾಮುದ್ದೀನ್‌ಗೆ ಹೋಗಿ ಬಂದವರ ಪೈಕಿ ಯಾರಾದರೂ ದುರುದ್ದೇಶಪೂರ್ವಕವಾಗಿ ಮಾಹಿತಿ ನೀಡದ್ದೇ ಇದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಿ. ಇಡೀ ಸಮುದಾಯದವರನ್ನು ತಪ್ಪಿತಸ್ತರಂತೆ ಕಾಣವುದು ಸರಿಯಲ್ಲ ಎಂದರು.
ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಗರಂ: ಶಾಸಕರಾದ ರೇಣುಕಾಚಾರ್ಯ ಮತ್ತು ಯತ್ನಾಳ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ನಿಜಾಮುದ್ದೀನ್‌ಗೆ ಹೋಗಿ ಬಂದವರನ್ನು ಗುಂಡಿಟ್ಟು ಕೊಲ್ಲಿ ಎಂದಿದ್ದಾರೆ. ಈ ಇಬ್ಬರ ಮೇಲೂ ಕ್ರಿಮಿನಲ್ ಕೇಸು ದಾಖಲಿಸಬೇಕು ಬಂಧಿಸಬೇಕು. ರೇಣುಕಾಚಾರ್ಯ ಅವರನ್ನು ಮುಖ್ಯ ಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡ ಬೇಕು. ಅವರು ಏನೇ ಹೇಳಿಕೆ ಕೊಟ್ಟರೂ ಸಿಎಂ ಕೊಟ್ಟಂತೆ ಆಗುತ್ತದೆ. ಹೀಗಾಗಿ ಅವರು ಆ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ. ಶಾಸಕರಾ ದವರು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಗುಂಡಿಟ್ಟು ಕೊಲ್ಲಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಗುಂಡಿಟ್ಟು ಕೊಲ್ಲಲು ಯಾವ ಕಾನೂನಿನಲ್ಲಿ ಅವಕಾಶವಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.