ಕಾಳಗಿ: ಪಟ್ಟಣದಲ್ಲಿ ವಿವಿಧೆಡೆ ಕಳಪೆ ಕಾಮಗಾರಿಗಳಾಗುತ್ತಿದ್ದು ಬಹುತೇಕ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತವಾಗಿವೆ. ಈ ಕುರಿತು ಜನಪ್ರತಿನಿಧಿಗಳು, ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕಾಂಗ್ರೆಸ್ ವಕ್ತಾರ ರಾಘವೇಂದ್ರ ಗುತ್ತೇದಾರ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ತಾಲೂಕು ಕೇಂದ್ರ ವಾಗಿರುವ ಪಟ್ಟಣದ ಅಭಿವೃದ್ಧಿಗೆ ಪಟ್ಟಣ ಪಂಚಾಯತಿಯ 2018-19ನೇ ಸಾಲಿನ ಎಸ್‌ಎಸ್‌ಎಫ್‌ಸಿ ಯೋಜನೆ ಅಡಿಯಲ್ಲಿ 3ಕೋಟಿ ರೂ., 2021-22ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ 2ಕೋಟಿ ರೂ., ಎಸ್‌ಎಸ್‌ಎಫ್‌ಸಿ ಯೊಜನೆಯಲ್ಲಿ 25ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಲ್ಲಿ ನಡೆಯುತ್ತಿವೆ ದೂರಿದರು.
ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಸಿಸಿ ಚರಂಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿ ಐದಾರು ತಿಂಗಳುಗಳೇ ಕಳೆಯುತ್ತಿವೆ ಆದರೂ ಪೂರ್ಣವಾಗಿಲ್ಲ. ಇದರಿಂದ ಆಸ್ಪತ್ರೆ ಎದುರು ಮಳೆ ನೀರು ನಿಂತು ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ. ಮುಖ್ಯಬಜಾರ ರಸ್ತೆ ಅಗಲೀಕರಣಕ್ಕೆ ಪ್ರಾರಂಭದಲ್ಲಿ ಅಂಗಡಿಗಳ ತೆರವು ಕಾರ್ಯಾಚರಣೆ ಜೋರಾಗಿಯೇ ನಡೆದಿತ್ತು. ಈ ವೇಳೆ 60 ದಿನಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುವ ಭರವಸೆ ನೀಡಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಆರು ತಿಂಗಳು ಕಳೆಯುತ್ತಿದ್ದರೂ ಇನ್ನೂ ಚರಂಡಿ ಕಾಮಗಾರಿ ಪೂರ್ಣಗೊಳಿಸಿದೆ ಅರ್ಧಕ್ಕೆ ಬಿಟ್ಟಿದ್ದಾರೆ ಎಂದು ದೂರಿದರು.
ಶೀಘ್ರವೇ ಶಾಸಕರು, ಸಂಬಂಧಿ ಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಸಿಲಿಸಿ ಕಳಪೆ ಕಾಮಗಾರಿ ಬಗ್ಗೆ ತನಿಖೆ ಮಾಡಿ ಗುತ್ತೇದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಳಗಿ ತಾಲೂಕು ಕಾಂಗ್ರೆಸ್ ವಕ್ತಾರ ರಾಘವೇಂದ್ರ ಗುತ್ತೇದಾರ, ಕೋಲಿ ಸಮಾಜ ಅಧ್ಯಕ್ಷ ಜಗನ್ನಾಥ ಚಂದನಕೇರಾ, ಅಲ್ಪಸಂಖ್ಯಾತ ಮುಖಂಡರಾದ ಜೀಯಾ ವುದ್ದಿನ ಸೌದಾಗಾರ, ಮೈಬೂಬ ಬೇಗ್ ಬಿಜಾಪುರ, ಅಸ್ಲಾಂಬೇಗ್ ಬಿಜಾಪುರ, ರವಿದಾಸ ಪತಂತೆ, ವಿಠ್ಠಲ ಸೇಗಾಂವಕಾರ್, ಪರಮೇಶ್ವರ ಮಡಿವಾಳ, ಮಲ್ಲಿಕಾರ್ಜುನ ಡೊಣ್ಣೂರ, ಸಂತೋಷ ನರನಾಳ, ವಿಜಯಕುಮಾರ ಪಾಟೀಲ ಇದ್ದರು.