Advertisement

ಸುಳ್ಳು ದೂರುದಾರರ ವಿರುದ್ಧ ಕ್ರಮ ಕೈಗೊಳ್ಳಿ: ಪ್ರತಿಭಟನೆ

12:40 PM Feb 17, 2017 | Team Udayavani |

ಮೈಸೂರು: ಗ್ರಾಮಸ್ಥರ ಮೇಲೆ ಸುಳ್ಳು ಆಪಾದನೆಗಳನ್ನು ಮಾಡುತ್ತಾ, ಸುಳ್ಳು ದೂರುಗಳನ್ನು ನೀಡುತ್ತಿರುವವರ ವಿರುದ್ಧ ಶಿಸ್ತುಕ್ರಮಕೈಗೊಳ್ಳುವ ಮೂಲಕ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಡಾ. ಭೀಮ್‌ರಾವ್‌ ಯುವಕರ ಸಂಘ ಹಾಗೂ ಮಾವಿನಹಳ್ಳಿ ಗ್ರಾಮಸ್ಥರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದರು.

Advertisement

ಮಾವಿನಹಳ್ಳಿ ನಿವಾಸಿ ವೆಂಕಟರಾಮು, ಗ್ರಾಪಂ ಸದಸ್ಯ ರವಿ ಸೇರಿದಂತೆ ಏಳು ಮಂದಿ ವಿರುದ್ಧ ಸುಳ್ಳು ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. ಇದಲ್ಲದೆ, ತಮ್ಮ ಮಕ್ಕಳನ್ನು ಅಂಗನ ವಾಡಿಗೆ ಸೇರಿಸಿಕೊಳ್ಳದೇ ಕಡಗಣಿಸಲಾಗಿದೆ ಎಂಬುದಾಗಿ ಜಯಪುರ ಪೊಲೀಸ್‌ ಠಾಣೆಗೆ ಸುಳ್ಳು ದೂರು ನೀಡಿದ್ದು, ವಿಚಾರಣೆ ನಡೆಸಿದ ತಹಶೀಲ್ದಾರ್‌ ಸುಳ್ಳುದೂರು ಎಂದು ಸ್ಪಷ್ಟೀಕರಣ ಸಹ ನೀಡಿದ್ದಾರೆ. 

ಆದರೆ, ಇದೀಗ ಮತ್ತೂಮ್ಮೆ ಏಳುಮಂದಿ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದು, ಈ ಪೈಕಿ ಸಿದ್ಧರಾಜು, ಮಹದೇವಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ವೆಂಕಟರಾಮು ನೀಡಿರುವ ದೂರಿನಲ್ಲಿ ಸತ್ಯಾಂಶವಿಲ್ಲ ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಗ್ರಾಮದಿಂದ ಬಹಿಷ್ಕಾರ ಗೊಂಡಿದ್ದ ವೆಂಕಟರಾಮು ಗ್ರಾಮದಲ್ಲಿ ತಾವು ವೈಯುಕ್ತಿಕವಾಗಿ ದ್ವೇಷಿಸುವವರ ವಿರುದ್ಧ ಈ ರೀತಿ ದೂರು ನೀಡುತ್ತಾ ಬಂದಿದ್ದಾರೆ.

ಈ ಹಿಂದೆಯೂ ಗ್ರಾಮದ ಅನೇಕರ ವಿರುದ್ಧ ಜಯಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ ವಿನಾಕಾರಣ ಸುಳ್ಳು ದೂರು ನೀಡುತ್ತಿರುವ ವೆಂಕಟರಾಮು ಹಾಗೂ ಅವರಿಗೆ ಬೆಂಬಲ ನೀಡುತ್ತಾ, ಗ್ರಾಮದ ವಾತಾವರಣವನ್ನು ಹಾಳು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾಮದ ಜವರಯ್ಯನ ಶಿವಣ್ಣ, ಪಾಪಯ್ಯ, ಕಾಳಸ್ವಾಮಿ, ಮಹೇಶ್‌, ಯಾಜಮಾನ್‌ ಚೆಲುವಯ್ಯ, ಸಿದ್ದಯ್ಯ, ಮಹೇಶ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next