Advertisement

ಅಂತರಂಗದ ಕನ್ನಡಿ ನೋಡೋಣವೇ…

12:12 AM Aug 12, 2021 | Team Udayavani |

ಸುಮಾರು 15 ವರ್ಷದ ಬಾಲಕ ನಾಗಿದ್ದ ವೇಳೆ ಮನೆಯೊಳಗೆ ಕನ್ನಡಿ ಇಲ್ಲವೆಂದು ಗೊಣಗುತ್ತಿದ್ದಾಗ ಅಮ್ಮ ಹೇಳಿದಳು “ಮಗನೇ ಮನೆಯೊಳಗೊಂದು ಕನ್ನಡಿ ಇಲ್ಲದಿದ್ದರೂ ಚಿಂತೆಯಿಲ್ಲ. ಆದರೆ ಮನದೊಳಗೊಂದು  ಕನ್ನಡಿ ಇರಲಿ ಆಯಿತೇ’ ಎಂದು. ಆ ವೇಳೆ ಅದು ಅರ್ಥವಾಗಲಿಲ್ಲ. ಈಗ ಅಮ್ಮನ ಮಾತಿನ ಒಳಮರ್ಮ ಅರ್ಥವಾಗುತ್ತಿದೆ.

Advertisement

ಮನೆಯೊಳಗಿನ ಕನ್ನಡಿ ಬಾಹ್ಯ ಸೌಂದರ್ಯ ವೀಕ್ಷಣೆಗಾದರೆ ಮನದೊ ಳಗಿನ ಕನ್ನಡಿ ಅಂತರಂಗದ ಸೌಂದರ್ಯ ರಕ್ಷಣೆ,  ಸ್ವಪರಿಚಯ ಹಾಗೂ ಸಾಧಕನ ಪ್ರೇರಣೆಗೆ. ಇಡೀ ಜೀವಸಂಕುಲದಲ್ಲಿ ಕೇವಲ ಮನುಜ ಕುಲದಲ್ಲಿ ಮಾತ್ರ ಕಂಡು ಬರುವ ಹಾಗೂ ನಮ್ಮೊಳಗಿನ ಪ್ರತಿಷ್ಠೆಯ ಹೋರಾಟಕ್ಕೆ ಕಾರಣವಾದ ಬಾಹ್ಯ ರೂಪ, ಮೈ ಬಣ್ಣ, ಎತ್ತ ರದ ನಿಲುವು, ಸಂಪತ್ತು, ಮುಖ ಸೌಂದರ್ಯ, ಅಹಂಕಾರ, ದೇಹಾ

ಲಂಕಾರ ಇತ್ಯಾದಿಗಳನ್ನು ನೋಡಲು ಮನೆಯೊಳಗೆ ಕನ್ನಡಿ ಇರಬೇಕು. ಹೆಚ್ಚಿನವರಿಗೆ ಬಾಹ್ಯ ಕನ್ನಡಿಯದ್ದೇ ಹಗಲಿರುಳು ಚಿಂತೆ. ವಾಸ್ತವದಲ್ಲಿ ನಾವು ಹಗಲಿರುಳು ಚಿಂತೆ ಮಾಡಬೇಕಾಗಿರು ವುದು ನಮ್ಮ ನಿಜವಾದ ವ್ಯಕ್ತಿತ್ವ  ದರ್ಶನ ಮಾಡಿಸುವ, ಸಾಧನೆಯ ಕಿಚ್ಚನ್ನು ಹಚ್ಚುವ ಮನದೊಳಗಿನ ಕನ್ನಡಿಗಾಗಿ. ಅಂತರಂಗದ ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿದರೆ ಅದ್ಭುತ ಸೃಷ್ಟಿಯಾಗುವುದು. ನಮ್ಮ ನೈಜ ಪ್ರತಿಭೆಯ ಅನಾವರಣವಾಗುವುದು. ಕೋಶ ತೆರೆದರಷ್ಟೇ ಚಿಟ್ಟೆಗೆ ಬದುಕು ಆರಂಭವಾದಂತೆ ಅಂತರಂಗದ ಕನ್ನಡಿಯ ಅರಿವಾದರೆ ಮಾತ್ರ ಸಾಧನೆಯ ಪಥ ಗೋಚರಿಸುವುದು. ಆದರೆ ಹೆಚ್ಚಿನವರಲ್ಲಿ ಅಂತರಂಗಕ್ಕೆ ಕನ್ನಡಿಯೇ ಇರುವುದಿಲ್ಲ. ಇದರಿಂದಾಗಿ ಅವರು ಕೇವಲ ಬಟ್ಟೆ, ಮನೆ, ಊರು ಬದಲಾಯಿಸುತ್ತಾನೆಯೇ ಹೊರತು ತನ್ನನ್ನು ತಾನು ಬದಲಾಯಿಸುತ್ತಿಲ್ಲ.

ದೇವರು ಬದುಕಿಗಾಗಿ ಕೊಟ್ಟ ಅದ್ಭುತ ವಾದ ಅಂತರಂಗದ ಕನ್ನಡಿಯೆಂಬ ಗಿಫ್ಟ್ ಬಾಕ್ಸ್‌ ಅನ್ನು ಕೆಲವರು ಇನ್ನೂ ತೆರೆ ಯದೆ ಭದ್ರವಾಗಿ ಲಾಕರ್‌ನೊಳಗಿಟ್ಟು ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದಾರೆ. ಆರಂಭ ಶೂರರಾಗಿ ಕೆಲವರು ತೆರೆದಿದ್ದರೂ ಅತ್ತ ಲಕ್ಷ್ಯವಿಲ್ಲದೆ  ನಿರ್ಲಕ್ಷ್ಯದಿಂದ ಧೂಳು ಹಿಡಿಸಿ ಮಸುಕಾಗಿರಿಸಿದ್ದಾರೆ. ಕೆಲವರು ಒಡೆದು ಬಿಸಾಡಿದ್ದಾರೆ. ಇದರಿಂದಾಗಿ ನಮ್ಮೊಳಗಿನ ಪ್ರತಿಭೆಯ ಪ್ರತಿಬಿಂಬದ  ಮೂಲ ರೂಪವನ್ನು ಗ್ರಹಿಸುವುದು ಕಷ್ಟವಾಗಿ ಸ್ಪಷ್ಟಬಿಂಬ ಮರೆಯಾಗಿ ಅಸ್ಪಷ್ಟ ಬಿಂಬದ ದರ್ಶನವಾಗುತ್ತದೆ. ಹಲವಾರು ಪ್ರತಿಭೆಗಳು ಹಾಗೂ ಚಿಂತನೆಗಳು ಕೊನೆಯುಸಿರು ಎಳೆಯುತ್ತಿವೆ.

ಅಜಾ ಗ್ರತೆಯಿಂದ ಅಥವಾ ಆಕಸ್ಮಿಕವಾಗಿ ಕನ್ನಡಿ ಒಡೆದು ಹೋದರೂ ಕಷ್ಟ. ಅದನ್ನು ಜೋಡಿಸಬಹುದು. ಆದರೆ ಮೂಲ ಸ್ವರೂಪ ಪಡೆಯುವುದು ಕಷ್ಟ. ಜೋಡಿಸಿ ದರೂ ಗೆರೆ ಅಳಿಸುವುದು ಕಷ್ಟ. ಅದರಂತೆ ಮನಸ್ಸೊಮ್ಮೆ ಋಣಾತ್ಮಕ ಭಾವಕ್ಕೆ ಬದಲಾದರೆ, ಒಡೆದರೆ  ಮೂಲಸ್ವರೂಪಕ್ಕೆ ಮರಳುವುದು ಕಷ್ಟ. ವ್ಯಾವಹಾರಿಕವಾದ ಸಮಸ್ಯೆಗಳು, ವೈಯಕ್ತಿಕ ತೊಂದರೆಗಳು, ಸಮಾಜದ ಪ್ರತಿಕ್ರಿಯೆಗಳು, ಕೌಟುಂಬಿಕ ಗೊಂದಲ ಗಳು ಇತ್ಯಾದಿ ಪಟ್ಟಿ ಮಾಡಲಾಗದ ಅದೆಷ್ಟೋ ಕಾರಣಗಳು, ಪರಿಸ್ಥಿತಿ ಹಾಗೂ ನಿರ್ಲಕ್ಷ್ಯಗಳಿಂದಾಗಿ ನೈಜ ಸಾಮರ್ಥ್ಯದ ಅರಿವಿದ್ದರೂ ಶಕ್ತಿಹೀನರಾಗಿ ಮಸುಕಾಗಿ ಕಾಣುತ್ತಾರೆ. ಅಂತರಂಗದ ಕನ್ನಡಿಯ ಮಸುಕು ತೆಗೆದು ನನ್ನೊಳಗಿನ ನಾನುವಿನ ಪರಿಚಯವಾದರೆ ಸಾಮಾನ್ಯನು ಅಸಾಮಾನ್ಯನಾಗುವನು.

Advertisement

ಹೇಡಿಯು ವೀರನಾಗುವನು. ಬಿಂದುವು ಸಿಂಧು ವಾಗುವುದು. ಕಷ್ಟವು ಇಷ್ಟವಾಗು ವುದು. ಅಂತರಂಗದ ಕನ್ನಡಿಯಿಂದಾಗಿ ನಮ್ಮಂತೆಯೇ ಸಾಮಾನ್ಯವಾಗಿ ಬದುಕಿ ದವರು ಜಗದ ಬೆಳಕಾಗಿ ಬದಲಾವಣೆಗೆ ಕಾರಣಕರ್ತರಾದರು. ಅರಮನೆಗೆ ಸೀಮಿತನಾಗಿದ್ದ ಸಿದ್ಧಾರ್ಥನು ಜಗತ್ತಿಗೆ ಬುದ್ಧನಾದ. ನರೇಂದ್ರನು ಸಮಾ ಜಕ್ಕೆ ಸ್ವಾಮಿ ವಿವೇಕಾನಂದರಾದರು. ಮೋಹನದಾಸರು ಭಾರತಕ್ಕೆ ರಾಷ್ಟ್ರ ಪಿತರಾದರು… ಹೀಗೆ ಅವರ ಸಾಲಲ್ಲಿ ನಿಲ್ಲಲಾಗದಿದ್ದರೂ ಕನಿಷ್ಠ ನಮ್ಮ ಪರಿಸರಕ್ಕಾದರೂ ಪ್ರೇರಕರಾಗೋಣ. ಮನದ ಕನ್ನಡಿಗೆ ಬಟ್ಟೆ ಹಾಕಿ ಶೋಕೇಸಿನಲ್ಲಿಟ್ಟು ಮಲಗಿದವರನ್ನು ಎಬ್ಬಿಸೋಣ. ಮಸುಕು ತೆಗೆಯಲು ಕಾರಣಕರ್ತರಾಗೋಣ. ಇಂಥ ಕಾರ್ಯ ದಲ್ಲಿ ನಿರತವಾಗಿರುವ ಮಕ್ಕಳ ಜಗಲಿಯ ಜತೆ ನಾವು ಕೈ ಜೋಡಿಸೋಣ. ಈ ಬದಲಾವಣೆಗೆ ಯಾರನ್ನು ಕಾಯದೇ ನಾವೇ ಬದಲಾಗೋಣ. ಬದಲಾವಣೆ ನಮ್ಮ ದಿನನಿತ್ಯದ ನಿಯಮವಾಗಲಿ.

 

-ಗೋಪಾಲಕೃಷ್ಣ, ನೇರಳಕಟ್ಟೆ

 

Advertisement

Udayavani is now on Telegram. Click here to join our channel and stay updated with the latest news.

Next