Advertisement

ಟಿಕೆಟ್‌ ಕೊಂಡು ಬಸ್ಸಿನಲ್ಲೇ ಸಿಎಂ ಪ್ರಯಾಣ

11:53 AM Jul 21, 2017 | Team Udayavani |

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆಯೋಜಿಸಿದ್ದ ಬಸ್‌ ದಿನಾಚರಣೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಯಿಂದ ಧಾರವಾಡದವರೆಗೆ ಬಸ್‌ನಲ್ಲಿ ಸಂಚರಿಸಿದರು. ವಿಮಾನ ನಿಲ್ದಾಣದಲ್ಲಿ ಗುರುವಾರ ಬಸ್‌ ದಿನಾಚರಣೆಗೆ ಚಾಲನೆ ನೀಡಿದ ಸಿದ್ದರಾಮಯ್ಯ ಜನಪ್ರತಿನಿಧಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹುಬ್ಬಳ್ಳಿಯಿಂದ ಧಾರವಾಡದವರೆಗೆ ಬೈಪಾಸ್‌ ಮೂಲಕ ಬಸ್‌ನಲ್ಲಿ ಪ್ರಯಾಣಿಸಿದರು. 

Advertisement

ಸಿಟಿ ಬಸ್‌ನಲ್ಲಿ ಚಾಲಕನ ಎಡಭಾಗದಲ್ಲಿರುವ ಆಸನದಲ್ಲಿ ಕುಳಿತ ಸಿದ್ದರಾಮಯ್ಯ ಅವರ ಪಕ್ಕದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಕುಳಿತುಕೊಂಡರು. ಸಿಎಂ ಆಸನದ ಹಿಂದೆ ಆಸನಗಳು ಭರ್ತಿಯಾಗಿದ್ದರಿಂದ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ನಿಂತುಕೊಂಡೇ ಪ್ರಯಾಣ ಬೆಳೆಸಿದರು.

ಬಸ್‌ ನಿರ್ವಾಹಕ ಬಂದಾಗ ಸಿದ್ದರಾಮಯ್ಯ 120 ರೂ. ಕೊಟ್ಟು 5 ಟಿಕೆಟ್‌ ಪಡೆದರು. ಮಾರ್ಗ ಮಧ್ಯ ಸಚಿವ-ಶಾಸಕರೊಂದಿಗೆ ಮಾತನಾಡಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಬಹಳ ದಿನಗಳಿಂದ ಬಸ್‌ನಲ್ಲಿ ಸಂಚರಿಸಿರಲಿಲ್ಲ. ಈಗ ಹಿಂದೆ ಬಸ್‌ನಲ್ಲಿ ಸಂಚರಿಸುತ್ತಿದ್ದುದು ನೆನಪಾಗುತ್ತಿದೆ.

ಪರಿಸರ ರಕ್ಷಣೆ ದಿಸೆಯಲ್ಲಿ, ಸಾರ್ವಜನಿಕ ಸಂಚಾರಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಇದು ಉತ್ತಮ ಕಾರ್ಯಕ್ರಮ. ಈ ಅಭಿಯಾನ ನಿರಂತರ ನಡೆಯಬೇಕು ಎಂದರು. ಬಸ್‌ ನಿರ್ವಾಹಕ ವಿಜಯಕುಮಾರ ನಾಯಕ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗೆ ಟಿಕೆಟ್‌ ನೀಡುವ ಅವಕಾಶ ಲಭಿಸಿದ್ದು ನನ್ನ ಭಾಗ್ಯ ಎಂದೇ ಪರಿಗಣಿಸಿದ್ದೇನೆ. 

ಸಾರ್ವಜನಿಕ ಸಾರಿಗೆಗೆ ಪ್ರೋತ್ಸಾಹಿಸುವ ಮುಖ್ಯಮಂತ್ರಿಯವರ ಕಾರ್ಯ ಶ್ಲಾಘನೀಯ. ಹುಬ್ಬಳ್ಳಿಯಿಂದ ಒಟ್ಟು 40 ಜನ ಪ್ರಯಾಣಿಸಿದ್ದು, 880ರೂ. (ತಲಾ 22ರೂ.) ಪಡೆಯಲಾಗಿದೆ ಎಂದರು. ಬಸ್‌ ಚಾಲಕ ಶಂಕರ ಅರಳಿಕಟ್ಟಿ ಮಾತನಾಡಿ, ನಾನು ಚಾಲನೆ ಮಾಡುವ ಬಸ್‌ನಲ್ಲಿ ನಮ್ಮ ಮುಖ್ಯಮಂತ್ರಿಗಳು ಪ್ರಯಾಣಿಸಿದ್ದು ಜೀವನದಲ್ಲಿಯೇ ಮರೆಯಲಾಗದ ಸಂಗತಿ. 

Advertisement

ನಾನು ಹುಬ್ಬಳ್ಳಿ-ಬೆಂಗಳೂರು ಐರಾವತ ಎಕ್ಸ್‌ಪ್ರೆಸ್‌ ಬಸ್‌ ಚಾಲಕನಾಗಿದ್ದು, ನನಗೆ ಹುಬ್ಬಳ್ಳಿ-ಧಾರವಾಡ ಬಸ್‌ ಚಾಲನೆ ಮಾಡುವಂತೆ ತಿಳಿಸಲಾಯಿತು. ನಿನ್ನೆ ರಾತ್ರಿಯಿಂದ ಸಂಸ್ಥೆಯಲ್ಲಿಯೇ ವಸ್ತಿ ಇರಬೇಕೆಂದು ಹೇಳಿದ್ದರು. ಯಾರೊಂದಿಗೂ ಮಾತನಾಡಕೂಡದೆಂದು ಹಾಗೂ ಬುಧವಾರದಿಂದ ಮೊಬೈಲ್‌ ಬಳಕೆ ಮಾಡಬಾರದೆಂದು ಸೂಚಿಸಲಾಗಿತ್ತು.

ಬೈಪಾಸ್‌ನಲ್ಲಿ ಹೆಚ್ಚು ಬಾರಿ  ಗೇರ್‌ ಬದಲಿ ಮಾಡಲಿಲ್ಲವಾದ್ದರಿಂದ ಇಂಧನ ಉಳಿತಾಯವಾಯಿತು ಎಂದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ಅಭಿಯಾನಕ್ಕೆ ಚಾಲನೆ ನೀಡಿದ್ದು ಸಂತಸದ ಸಂಗತಿ. ಬಸ್‌ ದಿನ ಅಭಿಯಾನವನ್ನು ಮುಖ್ಯಮಂತ್ರಿ ಶ್ಲಾ ಸಿದ್ದಾರೆ.

ಇಂಧನ ಉಳಿತಾಯ ಹಾಗೂ ಪರಿಸರ ರಕ್ಷಣೆ ಮಾಡುವ ಸದುದ್ದೇಶದಿಂದ ಪ್ರತಿ ತಿಂಗಳು ಬಸ್‌ ದಿನ ಆಯೋಜಿಸುವಂತೆ ತಿಳಿಸಿದ್ದಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಸಿ.ಎಸ್‌.ಶಿವಳ್ಳಿ, ಬಿ.ಆರ್‌.ಯಾವಗಲ್‌, ಮುಖಂಡರಾದ ಎ.ಎಂ.ಹಿಂಡಸಗೇರಿ, ನಾಗರಾಜ ಛಬ್ಬಿ, ಅನ್ವರ ಮುಧೋಳ, ವೇದವ್ಯಾಸ ಕೌಲಗಿ ಮೊದಲಾದವರು ಬಸ್‌ನಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next