ಆಗ್ರಾ: ಉತ್ತರ ಪ್ರದೇಶ ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಕೈಪಿಡಿಯಲ್ಲಿ ತಾಜ್‌ಮಹಲ್ ಮರೆಯಾಗಿತ್ತು. ಆ ದಿನದಿಂದ ಪ್ರೇಮಸೌಧದ ಬಗ್ಗೆ ಒಂದಲ್ಲ ಒಂದು ವಿವಾದಗಳು ಉಂಟಾಗುತ್ತಲೇ ಇದ್ದವು. ಅವೆಲ್ಲವಕ್ಕೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಪೂರ್ಣವಿರಾಮ ಹಾಕಿದ್ದಾರೆ. ಜಗತøಸಿದ್ಧ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ತಾಜ್‌ಮಹಲ್ ನಮ್ಮದೇ. ಅದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ ಎಂದಿದ್ದಾರೆ. ಜತೆಗೆ ಅದನ್ನು ಯಾರು ಯಾಕಾಗಿ ನಿರ್ಮಾಣ ಮಾಡಿದರು ಎಂಬುದು ಮುಖ್ಯವಲ್ಲ. ಆದರೆ ಅದನ್ನು ಭಾರತೀಯರು ಬೆವರು, ರಕ್ತ ಹರಿಸಿ ನಿರ್ಮಿಸಿದ್ದಾರೆ ಎಂದರು. ವಿಶ್ವಕ್ಕೆ ಅದೊಂದು ಅದ್ಭುತ ಕೊಡುಗೆ ಎಂದು ಕೊಂಡಾಡಿದರು. ಅದು ಭಾರತ ದೇಶದ ಸಂಸ್ಕೃತಿಯ ಭಾಗ. ಅದನ್ನು ರಕ್ಷಿಸಲು ಸರಕಾರ ಬದ್ಧವಾಗಿದೆ ಎಂದರು.
ಐತಿಹಾಸಿಕ ಸ್ಮಾರಕದ ಆವರಣದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿ ಕಾಲ ಕಳೆದು, 17ನೇ ಶತಮಾನದ ಮೊಘಲ್ ವಾಸ್ತುಶಿಲ್ಪವನ್ನು ಕಣ್ತುಂಬಿಕೊಂಡರು. ಅಲ್ಲದೆ ವಿದೇಶಿ ಪ್ರವಾಸಿಗರ ಜತೆಗೆ ಫೋಟೋಗೆ ಪೋಸು ನೀಡಿದರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಸ್ವತ್ಛ ಭಾರತ ಅಭಿಯಾನಕ್ಕೆ ಬೆಂಬಲವಾಗಿ ಪಾರ್ಕಿಂಗ್ ಪ್ರದೇಶದಲ್ಲಿ ಕಸಗುಡಿಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಘೋಷಣೆಗಳನ್ನು ಕೂಗಿದರು.
ವಿವಾದದ ನಂತರ ಭೇಟಿ: ತಾಜ್‌ಮಹಲ್‌ಗೆ ಸಂಬಂಧಿಸಿದ ಸರಣಿ ವಿವಾದಗಳ ನಂತರ ಸಿಎಂ ಭೇಟಿ ದಿನಾಂಕ ಘೋಷಣೆ ಮಾಡಲಾಗಿತ್ತು. ಮೊದಲು ಪ್ರವಾಸೋದ್ಯಮ ಇಲಾಖೆಯು ರಾಜ್ಯ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ತಾಜ್‌ಮಹಲ್ ಸೇರಿಸದಿರುವುದರಿಂದ ಆರಂಭವಾದ ವಿವಾದ, ಸಚಿವರ ಹೇಳಿಕೆಗಳಿಂದ ತಾರಕಕ್ಕೇರಿತ್ತು. ಮೂಲದಲ್ಲಿ ತಾಜ್‌ಮಹಲ್ ಶಿವನ ದೇವಾಲಯವಾಗಿತ್ತು ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿದ್ದರೆ, ತಾಜ್‌ಮಹಲ್ ಹೆಸರನ್ನು ಅಳಿಸಿ ಇತಿಹಾಸವನ್ನು ಮರುರಚನೆ ಮಾಡಬೇಕು ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿದ್ದರು.
ಈ ಹೇಳಿಕೆಗಳು ದೇಶಾದ್ಯಂತ ತೀವ್ರ ಆಕ್ಷೇಪಕ್ಕೆ ಒಳಗಾಗುತ್ತಿದ್ದಂತೆಯೇ ಗೋರಖ್‌ಪುರದಲ್ಲಿ ನಡೆದ ರ್ಯಾಲಿಯಲ್ಲಿ ಸಿಎಂ ಆದಿತ್ಯನಾಥ ಹೇಳಿಕೆ ನೀಡಿ ವಿವಾದ ತಣ್ಣಗಾಗಿಸುವ ಪ್ರಯತ್ನ ನಡೆಸಿದ್ದರು. ಯಾಕೆ, ಯಾವಾಗ ಮತ್ತು ಹೇಗೆ ತಾಜ್‌ಮಹಲ್ ನಿರ್ಮಿಸಲಾಗಿತ್ತು ಎಂಬ ಬಗ್ಗೆ ಆಳವಾಗಿ ನಾವು ಯೋಚಿಸಬಾರದು. ಇದನ್ನು ಭಾರತೀಯ ರೈತರು ಹಾಗೂ ಕಾರ್ಮಿಕರ ರಕ್ತ ಮತ್ತು ಪರಿಶ್ರಮದಿಂದ ನಿರ್ಮಿಸಲಾಗಿದೆ ಎಂದು ರ್ಯಾಲಿಯಲ್ಲಿ ಸಿಎಂ ಹೇಳಿದ್ದರು.
ಪಶ್ಚಿಮ ದ್ವಾರದಿಂದ ಭೇಟಿ: ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ 14 ಸಾವಿರ ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪಶ್ಚಿಮ ದ್ವಾರದಿಂದ ಪ್ರವೇಶ ಮಾಡಿದ ಅವರು, “ಸ್ವತ್ಛ ಭಾರತ’ ಅಭಿಯಾನ ಪ್ರಯುಕ್ತ ಕಸಗುಡಿಸಿದರು. ಬಳಿಕ ಅವರು ಪೂರ್ವ ದ್ವಾರದಿಂದ ಹೊರಟರು.