Advertisement

ತಾಜ್ ಮಹಲ್ ತೇಜೋ ಮಹಾಲಯ ಎಂದು ಮರುನಾಮಕರಣ? ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಗೆ ಪ್ರಸ್ತಾವನೆ

04:14 PM Aug 31, 2022 | Team Udayavani |

ನವದೆಹಲಿ: ವಿಶ್ವಪ್ರಸಿದ್ಧ ಪ್ರೇಮದ ಸ್ಮಾರಕವಾದ ತಾಜ್‌ಮಹಲ್‌ಗೆ ತೇಜೋ ಮಹಾಲಯ ಎಂದು ಮರುನಾಮಕರಣ ಮಾಡುವ ಕುರಿತು ಬಿಜೆಪಿ ಕೌನ್ಸಿಲರ್ ಮಂಡಿಸಿದ ಪ್ರಸ್ತಾವನೆಯನ್ನು ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಚರ್ಚಿಸುವ ಸಾಧ್ಯತೆಗಳಿವೆ. ಬಿಜೆಪಿ ಕೌನ್ಸಿಲರ್ ಶೋಭರಾಮ್ ರಾಥೋಡ್ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ. ಬುಧವಾರ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಮುಂದೆ ಚರ್ಚೆ ಮತ್ತು ಹೆಚ್ಚಿನ ಪರಿಗಣನೆಗೆ ಮಂಡಿಸಲಾಗುವುದು ಎಂದು ಶೋಭರಾಮ್ ತಿಳಿಸಿದ್ದಾರೆ.

Advertisement

ಪ್ರಸ್ತಾವನೆಯನ್ನು ಮಂಡಿಸಿದ ನಂತರ, ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಸದಸ್ಯರು ಈ ನಿಟ್ಟಿನಲ್ಲಿ ಮುಂದಿನ ಪ್ರಕ್ರಿಯೆಗಳ ಕುರಿತು ಕ್ರಮ ತೆಗೆದುಕೊಳ್ಳುತ್ತಾರೆ ಮತ್ತು ಇತರ ಅಂಶಗಳನ್ನು ಪರಿಗಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊಘಲ್ ಚಕ್ರವರ್ತಿ ಷಹಜಹಾನ್ ಮತ್ತು ಅವರ ಪತ್ನಿ ಮುಮ್ತಾಜ್ ಅವರ ಪ್ರೇಮ ಸ್ಮಾರಕದ  ಸ್ಥಳವಾದ ತಾಜ್ ಮಹಲ್‌ನಲ್ಲಿ ಕಮಲದ ಕಲಶವಿದೆ ಎಂಬುದಕ್ಕೆ ತನ್ನ ಬಳಿ ಪುರಾವೆ ಇದೆ ಎಂದು ರಾಥೋರ್ ತನ್ನ ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದಾರೆ.

ತಾಜ್ ಮಹಲ್‌ನಲ್ಲಿನ 22 ಬೀಗ ಹಾಕಿದ ರಹಸ್ಯ ಕೋಣೆಗಳ ಹಿಂದಿನ “ಸತ್ಯವನ್ನು ಕಂಡುಕೊಳ್ಳಲು” ನಿರ್ದೇಶನವನ್ನು ಕೋರಿ ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಅಲಹಾಬಾದ್ ಉಚ್ಚ ನ್ಯಾಯಾಲಯವು ವಜಾಗೊಳಿಸಿತ್ತು.ಇದಾದ  ಹಲವಾರು ತಿಂಗಳ ನಂತರ ತಾಜ್ ಮಹಲ್ ಅನ್ನು ಮರುನಾಮಕರಣ ಮಾಡುವ ಪ್ರಸ್ತಾಪವು ಮತ್ತಷ್ಟು ವಿವಾದಕ್ಕೆ ತಿರುಗಿತ್ತು.

ಮೊಘಲರ ಕಾಲದ ಸಮಾಧಿಗೆ ಮರುನಾಮಕರಣ ಮಾಡಬೇಕೆಂಬ ಬೇಡಿಕೆಗಳು ಬಂದಿರುವುದು ಇದೇ ಮೊದಲಲ್ಲ. ಹಲವಾರು ಬಲಪಂಥೀಯ ಕಾರ್ಯಕರ್ತರು, ASI ಸಂಶೋಧನೆಗಳು ಮತ್ತು ಪುರಾತನ ಗ್ರಂಥಗಳನ್ನು ಉಲ್ಲೇಖಿಸಿ, ತಾಜ್ ಮಹಲ್ ನಿಜವಾಗಿಯೂ ಶಿವನ ದೇವಾಲಯ ಎಂದು ಪ್ರತಿಪಾದಿಸಿದ ಉದಾಹರಣೆಗಳಿವೆ.

Advertisement

ಇತ್ತೀಚೆಗೆ, ಉತ್ತರ ಪ್ರದೇಶದ ಬಲ್ಲಿಯಾದಿಂದ ಭಾರತೀಯ ಜನತಾ ಪಕ್ಷದ ಶಾಸಕ ಸುರೇಂದ್ರ ಸಿಂಗ್ ಅವರು ಆಗ್ರಾದ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಅನ್ನು ಶೀಘ್ರದಲ್ಲೇ ಯೋಗಿ ಆದಿತ್ಯನಾಥ್ ಸರ್ಕಾರವು ‘ರಾಮ್ ಮಹಲ್’ ಎಂದು ಮರುನಾಮಕರಣ ಮಾಡಲಿದೆ ಎಂದು ಹೇಳಿದ್ದರು.

ಭಾರತದ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದಾಗಿರುವ ತಾಜ್ ಮಹಲ್ ಅನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ಆಗ್ರಾದಲ್ಲಿ 1631 ರಿಂದ 1653 ರವರೆಗೆ ತನ್ನ ಪ್ರೀತಿಯ ಹೆಂಡತಿಯ ನೆನಪಿಗಾಗಿ ಕಟ್ಟಿದ್ದರು ಎಂಬುದು ಇತಿಹಾಸ.

Advertisement

Udayavani is now on Telegram. Click here to join our channel and stay updated with the latest news.

Next