Advertisement

Taj movie; ಹಿಂದೂ-ಮುಸ್ಲಿಂ ಲವ್‌ಸ್ಟೋರಿ…

03:39 PM Jun 10, 2024 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ತಾಜ್’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ “ತಾಜ್’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ಸೆನ್ಸಾರ್‌ ಮುಂದಿದೆ. ಇತ್ತೀಚೆಗೆ ಚಿತ್ರದ ಟೀಸರ್‌ ಮತ್ತು ಹಾಡೊಂದು ಬಿಡುಗಡೆಯಾಗಿದೆ.

Advertisement

ಲಕ್ಷ್ಮೀ ಷಣ್ಮುಖ ನಿರ್ಮಾಣ ಮಾಡಿರುವ “ತಾಜ್’ ಸಿನಿಮಾಕ್ಕೆ ಬಿ. ರಾಜರತ್ನ ಅವರ ನಿರ್ದೇಶನವಿದೆ. ಯುವ ಪ್ರತಿಭೆ ಷಣ್ಮುಖ “ತಾಜ್’ ಸಿನಿಮಾದ ಮೂಲಕ ನಾಯಕ ನಟರಾಗಿದ್ದಾರೆ. ಅಪ್ಸರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಲರಾಜವಾಡಿ, ಶೋಭರಾಜ್, ವರ್ಧನ್‌, ಪದ್ಮಾವಾಸಂತಿ, ಪಟ್ರೆ ನಾಗರಾಜ್, ಕಡ್ಡಿ ವಿಶ್ವ, ಸೂರಜ್‌ ಮೊದಲಾದ ಕಲಾವಿದರು “ತಾಜ್’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಮೊದಲಿಗೆ “ತಾಜ…’ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಬಿ. ರಾಜರತ್ನ, “ಸುಮಾರು ಹತ್ತಕ್ಕೂ ಹೆಚ್ಚು ಕಥೆಗಳನ್ನು ಕೇಳಿದ ನಂತರ ನಿರ್ಮಾಪಕರು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಇದೊಂದು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ. ನಮ್ಮ ಸುತ್ತಮುತ್ತ ನಡೆದ ಶೇಕಡ 80 ರಷ್ಟು ನೈಜ ಘಟನೆಗಳು ಮತ್ತು ಶೇಕಡಾ 20 ರಷ್ಟು ಸಿನಿಮೀಯ ಅಂಶಗಳನ್ನು ಇಟ್ಟುಕೊಂಡು “ತಾಜ್’ ಸಿನಿಮಾ ಮಾಡಲಾಗಿದೆ. ಹಿಂದೂ-ಮುಸ್ಲಿಂ ಜೋಡಿಯ ಪ್ರೇಮಕಥೆ ಸಿನಿಮಾದಲ್ಲಿದ್ದು, ಜೊತೆಗೆ ಮಾನವೀಯ ನೆಲೆಗಟ್ಟು, ಸಾಮಾಜಿಕ ಸಂದೇಶ ಎಲ್ಲವನ್ನೂ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ’ ಎಂದರು.

ನವನಟ ಷಣ್ಮುಖ, “10 ಕಥೆಗಳನ್ನು ಕೇಳಿ ನಂತರ ಮಾಡಿದ ಸಿನಿಮಾ. ಈಗಾಗಲೇ ಬಹುತೇಕ ಕಾರ್ಯಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ತೆರೆಗೆ ಬರುವ ಯೋಜನೆಯಿದೆ. ಸುಮಾರು 8 ತಿಂಗಳ ಹಿಂದೆ ಶುರುವಾದ ಸಿನಿಮಾ ಈಗ ತೆರೆಗೆ ಬರುತ್ತಿದೆ. ಹಿಂದೂ-ಮುಸ್ಲಿಂ ನಡುವಿನ ಕಥೆ, ಮಾನವೀಯತೆಯ ನೆಲೆಗಟ್ಟು , ಸಾಮಾಜಿಕ ಸಂದೇಶ ಎರಡೂ ಸಿನಿಮಾದಲ್ಲಿದೆ. ನಮ್ಮ ನಡುವೆಯೇ ನಡೆದ ಕೆಲ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ.ಆರಂಭದಲ್ಲಿ ಒಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ಚಿತ್ರರಂಗಕ್ಕೆ ಬಂದೆ. ಆ ನಂತರದ ಬೆಳವಣಿಯಲ್ಲಿ ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಬೇಕಾಯಿತು. ಇಂದಿನ ಪ್ರೇಕ್ಷಕರು ಬಯಸುವಂತ ಒಳ್ಳೆಯ ಕಥೆ, ಮನರಂಜನೆ ಎಲ್ಲವೂ “ತಾಜ್’ ಸಿನಿಮಾದಲ್ಲಿದ್ದು, ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಲಿದೆ’ ಎಂದರು.

“ತಾಜ್’ ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಂಡಿರುವ ನಟ ವರ್ಧನ್‌ ಮಾತನಾಡಿ, ಈ ಸಿನಿಮಾದಲ್ಲಿ ನಾನು ಮುಸ್ಲಿಂ ಯುವಕನಾಗಿ ಕಾಣಿಸಿಕೊಂಡಿದ್ದೇನೆ. ಮೊದಲ ಬಾರಿಗೆ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಖುಷಿಯಾಗುತ್ತಿದೆ’ ಎಂದರು.

Advertisement

ಬೆಂಗಳೂರು ಸುತ್ತಮುತ್ತ “ತಾಜ್’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು ಸಿನಿಮಾಕ್ಕೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. “ತಾಜ್’ ಸಿನಿಮಾದ ಟೀಸರ್‌ ಮತ್ತು ಹಾಡಿನ ಬಿಡುಗಡೆ ವೇಳೆ ಹಾಜರಿದ್ದ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next