ಬಂಟ್ವಾಳ: ಅಮ್ಮುಂಜೆ ರಾಮನಗರದಲ್ಲಿ ಕಳೆದ ಎರಡು ತಿಂಗಳ ಹಿಂದೆಯಷ್ಟೆ ದುಷ್ಕರ್ಮಿಗಳಿಂದ ಹತ್ಯೆಯಾದ ಎಸ್‌ಡಿಪಿಐ ವಲಯಾಧ್ಯಕ್ಷ ಆಶ್ರಫ್ ಕಲಾಯಿ ಸ್ಮರಣಾರ್ಥ ಇಲ್ಲಿನ ಕೆಲವೊಂದು ರಸ್ತೆಗಳಿಗೆ ಅನಧಿಕೃತವಾಗಿ ಅಳವಡಿಸಿದ್ದ ನಾಮಫಲಕವನ್ನು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತƒತ್ವದಲ್ಲಿ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಸೆ. 5ರ ಸಂಜೆ ತೆರವು ಗೊಳಿಸಿದರು.
ಅಶ್ರಫ್ ಕಲಾಯಿ ಹತ್ಯೆಯಾಗಿ 40 ದಿನಗಳ ಬಳಿಕ ಇಲ್ಲಿನ ಮುಖ್ಯರಸ್ತೆ ಬಳಿ ಸ್ಥಳೀಯ ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ನಿರ್ಮಿಸಿದ್ದ ಬಸ್ ತಂಗುದಾಣವನ್ನು ಕೂಡ ಉದ್ಘಾಟನೆ ದಿನದಂದೇ ಜಿಲ್ಲಾಧಿಕಾರಿ ಸೂಚನೆಯಂತೆ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ತೆರವುಗೊಳಿಸಿತ್ತು.
ಈಗ ಮತ್ತೆ ಸ್ಥಳೀಯರು ಬಂಟ್ವಾಳ ಗ್ರಾಮಾಂತರ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಉಮೇಶ್ ಕುಮಾರ್ ನೇತೃತ್ವದ ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ತಹಶೀಲ್ದಾರ್ ನೇತೃತ್ವದ ತಂಡವು ಮಂಗಳವಾರ ಕಾರ್ಯಾಚರಣೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಇಲ್ಲಿನ ಮೂರು ರಸ್ತೆಗಳಿಗೆ ಅಳವಡಿಸಿದ್ದ ಪ್ರತ್ಯೇಕ ಮಾರ್ಗಸೂಚಿ ಮತ್ತು ನಾಮಫಲಕ ತೆರವುಗೊಳಿಸಲಾಗಿದೆ. ಉಳಿದಂತೆ ಮಸೀದಿ ಬಳಿ ಕುಡಿಯುವ ನೀರಿನ ರೆಫ್ರಿಜರೇಟರ್, ಧ್ವಜ ಸ್ತಂಭ ಮತ್ತಿತರ ಕಡೆಗಳಲ್ಲಿ ಗ್ರಾಮ ಪಂಚಾಯತ್ ಅನುಮತಿ ಪಡೆಯದೆ ಅಳವಡಿಸಿದ ನಾಮ ಫಲಕಗಳನ್ನು ಕೂಡ ನೋಟಿಸ್ ನೀಡಿ 15 ದಿನಗಳೊಳಗೆ ತೆರವುಗೊಳಿಸುವಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕವಿತಾರಿಗೆ ತಹಶೀಲ್ದಾರ್ ಆದೇಶಿಸಿದ್ದಾರೆ.
ಕಂದಾಯ ಇಲಾಖೆ ಸಿಬಂದಿಗಳಾದ ಸೀತಾರಾಮ ಕಮ್ಮಾಜೆ, ಶೀತಲ್ ಮತ್ತಿತರರು ಇದ್ದರು. ಇನ್ನೊಂದೆಡೆ ಇಲ್ಲಿನ ಬಸ್ಸು ತಂಗುದಾಣ ನಿರ್ಮಾಣ ಸಹಿತ ನಾಮ ಫಲಕ ಅಳವಡಿಸುವ ಮೊದಲು ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದರೂ ಅವರು ಅನುಮತಿ ನೀಡಿಲ್ಲ ಎಂದು ಸ್ಥಳೀಯ ಎಸ್‌ಡಿಪಿಐ ಮುಖಂಡ ಇಮಿ¤ಯಾಝ್ ಕಲಾಯಿ ಆರೋಪಿಸಿದ್ದಾರೆ.