ಧಾರವಾಡ: ಪಡಿತರ ಚೀಟಿ ಹಾಗೂ ಪಡಿತರ ವಿತರಣೆಯಲ್ಲಿ ಕಂಡು ಬರುತ್ತಿರುವ ನ್ಯೂನತೆಗಳ ಕುರಿತಂತೆ ಚರ್ಚಿಸಿ, ಪರಿಹಾರ ಕಂಡುಕೊಳ್ಳುವಲ್ಲಿ ತಾಪಂ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಗೆ ತಹಶೀಲ್ದಾರ ಪ್ರಕಾಶ ಕುದರಿ ಬಾರದ ಹಿನ್ನೆಲೆಯಲ್ಲಿ ತಹಶೀಲ್ದಾರರ ಸಮ್ಮುಖದಲ್ಲೇ ಸಭೆ ಕೈಗೊಳ್ಳಲು ಮುಂದಿನ ದಿನಾಂಕ ನಿಗದಿಗೊಳಿಸುವಂತೆ ನಿರ್ಧರಿಸಿ ಸಭೆ ಅಂತ್ಯಗೊಳಿಸಲಾಯಿತು.
ತಾಪಂ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಧಾರವಾಡ ತಾಪಂ ವ್ಯಾಪ್ತಿಯ ತಾಪಂ ಸದಸ್ಯರು, ಜಿಪಂ ಸದಸ್ಯರು, ಗ್ರಾಪಂ ಪ್ರತಿನಿಧಿಗಳು, ಪಿಡಿಒ ಸೇರಿದಂತೆ ಆಹಾರ ಇಲಾಖೆಯ ಅಧಿಕಾರಿಗಳು, ಪಡಿತರ ಅಂಗಡಿ ಮಾಲೀಕರು ಪಾಲ್ಗೊಂಡಿದ್ದರು. ಮುಖ್ಯವಾಗಿ ತಹಶೀಲ್ದಾರ ಪ್ರಕಾಶ ಕುದರಿ ಆಗಮಿಸಬೇಕಿತ್ತು.
ಆದರೆ ತಹಶೀಲ್ದಾರರು ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡ ಕಾರಣ ಸಭೆಗೆ ಗೈರಾಗಬೇಕಾಯಿತು. ಕೊನೆಗೆ ತಹಶೀಲ್ದಾರರು ಸಭೆಗೆ ಬರಲು ಆಗುವುದಿಲ್ಲ ಎಂಬ ಸಂದೇಶ ಕಳುಹಿಸಿದ ಬಳಿಕ ಅವರ ಸಮ್ಮುಖದಲ್ಲಿ ಮುಂದಿನ ಸಭೆ ಕೈಗೊಳ್ಳಲು ನಿರ್ಧರಿಸಿ ಸಭೆ ಮುಕ್ತಾಯಗೊಳಿಸಲಾಯಿತು.
ಇದಕ್ಕೂ ಮುನ್ನ ಆಧಾರ ಕಾರ್ಡ್ ಲಿಂಕ್ ಆಗದ ಪಡಿತರ ಚೀಟಿದಾರರಿಗೆ ಮೇ ತಿಂಗಳಿಂದ ಪಡಿತರ ಸ್ಥಗಿತಗೊಳಿಸಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇದಲ್ಲದೇ ಹೊಸದಾಗಿ ಪಡಿತರ ಚೀಟಿಗಾಗಿ ಹಾಕಿರುವ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಿ, ಒಂದು ತಿಂಗಳೊಳಗೆ ಪಡಿತರ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಇನ್ಸ್‌ಪೆಕ್ಟರ್ ಹಿರೇಮಠ ಅವರಿಗೆ ಸೂಚಿಸಲಾಯಿತು.
ಸೀಮೆಎಣ್ಣೆ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನ್ಯಾಯಬೆಲೆ ಅಂಗಡಿ ಮಾಲೀಕರು ಸಭೆಯ ಗಮನ ಸೆಳೆದರೆ, ಗ್ರಾಹಕರಿಗೆ ಸೀಮೆ ಎಣ್ಣೆ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಧ್ವನಿ ಎತ್ತಿದರು. ಗ್ಯಾಸ್ ಇಲ್ಲದವರಿಗೆ 3 ಲೀಟರ್ ಹಾಗೂ ಗ್ಯಾಸ್ ಇದ್ದವರಿಗೆ 1 ಲೀಟರ್ ಸೀಮೆಎಣ್ಣೆ ನೀಡುವಂತೆ ಆದೇಶ ಮಾಡಿದ್ದರೂ ಅದು ಅನುಷ್ಠಾನ ಆಗಿಲ್ಲ.
ಇದರಿಂದ ಗ್ರಾಮೀಣ ಪ್ರದೇಶ ಜನರಿಗೆ ತೊಂದರೆ ಆಗುತ್ತಿದೆ ಎಂದು ಸಭೆಯ ಗಮನ ಸೆಳೆಯಲಾಯಿತು. ಇದಕ್ಕೆ ಉತ್ತರಿಸಿದ ಆಹಾರ ಇಲಾಖೆಯ ಇನ್ಸ್‌ಪೆಕ್ಟರ್ ಹಿರೇಮಠ, ಈ ಬಗ್ಗೆ ಸರಕಾರದ ಆದೇಶ ಬಂದಿದ್ದು, ಅದಕ್ಕಾಗಿ ಈಗಾಗಲೇ 11 ಸಾವಿರ ಅರ್ಜಿಗಳು ಸೀಮೆಎಣ್ಣೆಗಾಗಿ ಬಂದಿದೆ.
ಅವುಗಳೆಲ್ಲವನ್ನೂ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದು, ಅವರಿಂದ ಸರಕಾರಕ್ಕೆ ಹೋಗಿ ಅನುಮೋದನೆಗೊಂಡು ಬಂದರೆ ಸೀಮೆಎಣ್ಣೆ ಪೂರೈಸಲಾಗುವುದು ಎಂದು ಸ್ಪಷ್ಟಪಡಿಸಿದರು. ಜಿಪಂ ಸದಸ್ಯರಾದ ಕೆ.ಸಿ.ಪುಡಕಲಕಟ್ಟಿ, ನಿಂಗಪ್ಪ ಘಾಟಿನ, ತಾಪಂ ಉಪಾಧ್ಯಕ್ಷ ಮುತ್ತಪ್ಪ ನಾಯ್ಕರ, ಸ್ಥಾಯಿ ಸಮಿತಿ ಅಧ್ಯಕ್ಷ ಫಕ್ಕೀರಪ್ಪ ಬುಡ್ಡಿಕಾಯಿ, ತಾಪಂ ಇಒ ಜಿ.ಡಿ.ಜೋಶಿ ಸೇರಿದಂತೆ ಹಲವರು ಇದ್ದರು.