Advertisement

ತಹಶೀಲ್ದಾರ್‌ ಆತ್ಮಹತ್ಯೆ: ನಿಷ್ಪಕ್ಷಪಾತ ತನಿಖೆ ಆಗಲಿ

11:41 AM Jul 22, 2017 | |

ಮೈಸೂರು: ತಿ.ನರಸೀಪುರ ತಾಲೂಕು ತಹಶೀಲ್ದಾರ್‌ ಆಗಿದ್ದ ಶಂಕರಯ್ಯರ ಆತ್ಮಹತ್ಯೆಯ ಹಿಂದೆ ಬೇರೆ ವಿಚಾರಗಳು ಅಡಗಿದ್ದು, ಈ ಬಗ್ಗೆ ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್‌ ಆಗ್ರಹಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಿ.ನರಸೀಪುರ ತಾಲೂಕಿನಲ್ಲಿ ಲಂಗು-ಲಗಾಮಿಲ್ಲದೆ ಆಡಳಿತ ನಡೆಯುತ್ತಿದ್ದು, ಮರಳು ದಂಧೆ, ಗೂಂಡಾವರ್ತನೆ ಜತೆಗೆ ಅಧಿಕಾರಿಗಳಿಗೆ ರಾಜಕೀಯ ಒತ್ತಡವಿದೆ. ಹೀಗಾಗಿ ಪ್ರಾಮಾಣಿಕ ಅಧಿಕಾರಿಯಾಗಿದ್ದ ತಹಶೀಲ್ದಾರ್‌ ಶಂಕರಯ್ಯಗೆ ಕಾನೂನು ಬಾಹಿರವಾಗಿ ಕೆಲಸ ಮಾಡಲು ಮನಸ್ಸಿಲ್ಲದೆ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಆದರ್ಶ ಮುಖ್ಯಮಂತ್ರಿ!: ಯದುವಂಶದವರು ಉತ್ತರಾಧಿಕಾರಿ ಮಾಡಲು ಒಂದು ವರ್ಷಬೇಕಾಯಿತು. ಆದರೆ, ಸಿದ್ದರಾಮಯ್ಯ ಹಿರಿಯ ಪುತ್ರ ರಾಕೇಶ್‌ ಮೃತಪಟ್ಟ ಆರು ತಿಂಗಳಲ್ಲಿ ಮತ್ತೂಬ್ಬ ಮಗನಿಗೆ ಅಧಿಕಾರ ಕೊಟ್ಟುಬಿಟ್ಟರು. ಸಿದ್ದರಾಮಯ್ಯ ಮಗ ಒಂದು ತಾಲೂಕು, ಮಹದೇವಪ್ಪ ಮಗ ಮತ್ತೂಂದು ತಾಲೂಕಿನ ಉಸ್ತುವಾರಿಗಳಾಗಿದ್ದು, ಸಿದ್ದರಾಮಯ್ಯರೇ ತಮಗೊಂದು ಕ್ಷೇತ್ರ ಮಗನಿಗೊಂದು ಕ್ಷೇತ್ರ ಹಂಚಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಎಲ್ಲದರ ಬಗ್ಗೆ ಪುಸ್ತಕ ಬರೆಯುತ್ತಿದ್ದು, ಮುಂದೆ ಇನ್ನಷ್ಟು ವಿಚಾರ ಹೇಳುತ್ತೇನೆ ಎಂದು ತಿಳಿಸಿದರು. ಮಂಗಳೂರು ಕೋಮುಗಲಭೆಗೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯಿಂದ ಯಾವ ರೀತಿ ಮಾಹಿತಿ ಪಡೆಯಬೇಕೆಂಬುದೇ ಗೊತ್ತಿಲ್ಲದ ಮುಖ್ಯಮಂತ್ರಿ, ತಮ್ಮ ತಪ್ಪನ್ನು ಇಟ್ಟುಕೊಂಡು ಅಧಿಕಾರಿಗಳಿಗೆ ಶಿಕ್ಷೆ ನೀಡಿದ್ದು ಸರಿಯಲ್ಲ ಎಂದು ಟೀಕಿಸಿದರು.

ಕೆಂಪಯ್ಯ ಹಿಡಿತದಲ್ಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಇಲಾಖೆಯ ಬಗ್ಗೆ ಸಾಕಷ್ಟು ತಾತ್ಸಾರ ಹೊಂದಿರುವುದರಿಂದ ನಿವೃತ್ತ ಐಪಿಎಸ್‌ ಅಧಿಕಾರಿ ಕೆಂಪಯ್ಯ ಹಿಡಿತಕ್ಕೆ ಗೃಹ ಇಲಾಖೆ ಕೊಟ್ಟಿದ್ದಾರೆ. ಕೋಮುಗಲಭೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಿಷ್ಪಕ್ಷಪಾತವಾಗಿ ಮಾತನಾಡುವ ಮೂಲಕ ಶಾಂತಿ ಕಾಪಾಡಲು ಮನವಿ ಮಾಡಬೇಕು. ಆದರೆ ಮುಖ್ಯಮಂತ್ರಿಗಳೇ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದರು ಎಂದು ಹರಿಹಾಯ್ದರು.

Advertisement

ವರ್ಗಾವಣೆ ಅಗತ್ಯವೇನಿತ್ತು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 7 ತಿಂಗಳಿಂದ ಶಶಿಕಲಾ ಅವರಿಗೆ ಐಷಾರಾಮಿ ಜೀವನ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಈ ವಿಷಯ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲವೇ? ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದ ಅವರು, ಆಡಳಿತದಲ್ಲಿ ಅಧಿಕಾರಿಗಳ ವರ್ಗಾವಣೆ ಸಹಜವಾದರೂ ಈ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಹಾಗೂ ಪ್ರಾದೇಶಿಕ ಆಯುಕ್ತೆ ರಶ್ಮಿ ಮಹೇಶ್‌ ಅವರ ಪ್ರಕರಣದಲ್ಲೂ ಮುಖ್ಯಮಂತ್ರಿ ಇದೇ ವರ್ತನೆಯನ್ನು ತೋರಿದ್ದರು ಎಂದು ದೂರಿದರು.

ಪ್ರತ್ಯೇಕ ಧ್ವಜ ಬೇಡ: ದೇಶದ ಯಾವುದೇ ರಾಜ್ಯವೂ ಪ್ರತ್ಯೇಕ ಧ್ವಜ ಹೊಂದಿಲ್ಲ. ಪ್ರತ್ಯೇಕ ಧ್ವಜ ಸಂಕುಚಿತ ಮನೋಭಾವ ಮೂಡಿಸುವುದರಿಂದ, ದೇಶದ ಭಾವೈಕ್ಯತೆಗೆ ಧಕ್ಕೆಯಾಗಲಿದ್ದು, ಇದೇ ಕಾರಣದಿಂದ ಸಂವಿಧಾನದಲ್ಲೂ ಪ್ರತ್ಯೇಕ ಧ್ವಜಕ್ಕೆ ಅವಕಾಶನೀಡಿಲ್ಲ. ಹೀಗಾಗಿ ಪ್ರತ್ಯೇಕ ಧ್ವಜದ ವಿಚಾರ ಚುನಾವಣಾ ಗಿಮಿಕ್‌ ಆಗಿದ್ದು, ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕೆ ಹೊರತು ಕನ್ನಡ ಕಾವಲು ಸಮಿತಿ ಅಧ್ಯಕ್ಷರಂತೆ ಮಾತಾನಾಡದೆ, ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕು ಎಂದು ಎಚ್ಚರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ನಗರಾಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌, ಮುಖಂಡರಾದ ಕೆ.ಆರ್‌.ಮೋಹನ್‌ ಕುಮಾರ್‌, ಎಂ.ರಾಜೇಂದ್ರ, ಸಿ.ಬಸವೇಗೌಡ, ಸಿ.ರಮೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next