ಶಿಡ್ಲಘಟ್ಟ: ತಾಲೂಕಿನಲ್ಲಿ ಡೈನಾಮಿಕ್ ತಹಶೀಲ್ದಾರ್ ಎಂದು ಖ್ಯಾತಿ ಹೊಂದಿದ್ದ ಅಜಿತ್ ಕುಮಾರ್ ರೈ ವರ್ಗಾವಣೆಯಾಗಿದ್ದು, ಅವರ ಜಾಗದಲ್ಲಿ ಎಂ.ದಯಾನಂದ್ ಅವರನ್ನು ನೂತನ ತಹಶೀಲ್ದಾರ್ ಆಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರೀತಿ, ವಿಶ್ವಾಸಕ್ಕೆ ಪಾತ್ರ: ತಾಲೂಕು ದಂಡಾಧಿಕಾರಿ ಯಾಗಿ ಕೇವಲ ಕಂದಾಯ ಇಲಾಖೆಗೆ ಸಂಬಂಧಿಸಿದ ವಿಷಯಗಳನ್ನು ಬಗೆಹರಿಸಲು ವಿಶೇಷ ಆಸಕ್ತಿ ವಹಿಸಿದರಲ್ಲದೇ ತಾಲೂಕಿನಲ್ಲಿ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗಾಗಿ ಕಾಳಜಿ ವಹಿಸಿ ಸಾರ್ವಜನಿಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ:
ಶಿಡ್ಲಘಟ್ಟ ತಾಲೂಕಿನ ಬೈಯಪ್ಪನಹಳ್ಳಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದು ದನಗಳ ದೊಡ್ಡಿಯಾಗಿದ್ದ ಸರ್ಕಾರಿ ಶಾಲೆಯನ್ನು ಸುಣ್ಣಬಣ್ಣ ಗಳಿಂದ ಕಂಗೊಳಿಸಿ ಉದ್ಘಾಟಿಸಿದರಲ್ಲದೇ ಅನೇಕ ಸರ್ಕಾರಿ ಶಾಲೆಗಳಿಗೆ ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿ ಜನಪರ ಕಾಳಜಿ ವಹಿಸಿದ್ದರು.
ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿ ಕೊಂಡಿದ್ದ ಬಲಾಡ್ಯರ ಮೇಲೆ ಕಾನೂನು ಕ್ರಮ ಜರುಗಿಸುವ ಮೂಲಕ ದಿಟ್ಟತನ ಪ್ರದರ್ಶನ ಮಾಡಿದ್ದರು. ಆಪರೇಷನ್ ರಾಜಕಾಲುವೆ ಹೆಸರಿನಲ್ಲಿ ತೆರವು ಕಾರ್ಯಚರಣೆ ನಡೆಸಿ ರಾಜಕಾಲುವೆಗಳನ್ನು ಸಂರಕ್ಷಣೆ ಮಾಡಲು ವಿಶೇಷ ಕಾರ್ಯಕ್ರಮ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಚರಂಡಿ, ರಾಜಕಾಲುವೆ ಸ್ವಚ್ಛತೆ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ ನಗರವೆಂದು ಖ್ಯಾತಿ ಹೊಂದಿದ್ದರೂ ಸಹ ಮಳೆಗಾಲದಲ್ಲಿ ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿ ದವಸ ಧಾನ್ಯಗಳು ಮತ್ತು ಅಮೂಲ್ಯ ವಸ್ತುಗಳನ್ನು ನೀರು ಪಾಲಾಗುತ್ತಿದ್ದನ್ನು ಗಂಭೀರವಾಗಿ ಪರಿಗಣಿಸಿ ನಗರದಲ್ಲಿ ಹಾದು ಹೋಗಿರುವ ಬೃಹತ್ ಚರಂಡಿ-ಕಾಲುವೆಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿ ಕೊಳಚೆ ನೀರು ಮನೆಯೊಳಗೆ ನುಗ್ಗುವ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಕ್ರಮ ಕೈಗೊಂಡಿದ್ದರು.
ಅರ್ಹರಿಗೆ ಮಾಸಾಶನ: ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತಾಲೂಕು ಕಚೇರಿಗೆ ಬರುವ ನಾಗರಿಕರ ಸಮಸ್ಯೆಗಳನ್ನು ಸ್ಪಂದಿಸಿ ಕೂಡಲೇ ಪರಿಹಾರ ಕಲ್ಪಿಸಬೇಕೆಂದು ಸಂಬಂಧಿಸಿದ ಅಧಿಕಾರಿ ಗಳಿಗೆ ಸೂಚನೆ ನೀಡುವ ಜೊತೆಗೆ ವಯೋ ವೃಧ್ಧರು, ಅಂಗವಿಕಲರು, ವಿಧವೆಯರಿಗೆ ಸಕಾಲದಲ್ಲಿ ಮಾಶಾಸನವನ್ನು ಜಾರಿಗೊಳಿಸಲು ಕ್ರಮ ಕೈಗೊಂಡಿದ್ದರು.
ಗ್ರಾಮ ಪಂಚಾಯ್ತಿ ಮತ್ತು ಹೋಬಳಿ ಮಟ್ಟದಲ್ಲಿ ಪಿಂಚಣಿ ಮತ್ತು ಕಂದಾಯ ಅದಾಲತ್‌ಗಳನ್ನು ಪರಿಣಾಮಕಾರಿಯಾಗಿ ನಡೆಸಿ ಸ್ಥಳದಲ್ಲಿ ಜನರಿಗೆ ಪರಿಹಾರ ಕಲ್ಪಿಸಿ ಅರ್ಹರಿಗೆ ಮಾಸಾಶನಗಳನ್ನು ಮಂಜೂರು ಮಾಡುವ ಮೂಲಕ ಬಡಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದರು.